ವಿದೇಶಿ ವಿವಿಗಳ ವ್ಯಾಮೋಹದಿಂದ ಹಾಳಾಗುತ್ತಿದೆ ವಿದ್ಯಾರ್ಥಿಗಳ ಭವಿಷ್ಯ

Social Share

ಬೆಂಗಳೂರು,ಮಾ.5- ಕಡಿಮೆ ವೆಚ್ಚದ ವೈದ್ಯಕೀಯ ಪದವಿ ಕನಸು ಬೆನ್ನತ್ತಿ ಹೋದ ಸಾವಿರಾರು ವಿದ್ಯಾರ್ಥಿಗಳು ವಿದೇಶಗಳ ಅಮಾನ್ಯ ಕಾಲೇಜುಗಳಲ್ಲಿ ಶಿಕ್ಷಣ ಪಡೆದು ತಮ್ಮ ಭವಿಷ್ಯಕ್ಕೆ ತಾವೇ ಕೊಳ್ಳಿ ಇಟ್ಟುಕೊಳ್ಳುತ್ತಿದ್ದಾರೆ. ಪ್ರಸ್ತುತ ಉಕ್ರೇನ್‍ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಹೋಗಿ ಯುದ್ಧದ ಸಂಘರ್ಷಕ್ಕೆ ಸಿಲುಕಿ ಸಂಕಟ ಅನುಭವಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳನ್ನು ನೋಡುತ್ತಿದ್ದರೆ ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಜಿಗುಪ್ಸೆಗಳು ಎದುರಾಗಿವೆ.
ಆದರೆ ವಾಸ್ತವವೇ ಬೇರೆ ಇದೆ. ವಿಶ್ವದಲ್ಲಿ ಅತ್ಯುತ್ತಮವಾದ ವೈದ್ಯಕೀಯ ಶಿಕ್ಷಣ ನೀಡುತ್ತಿರುವ ಪೈಕಿ ಭಾರತ ಮೊದಲ ಸ್ಥಾನದಲ್ಲಿದೆ. ಅಮೆರಿಕ, ಕೆನಡಾ, ಇಂಗ್ಲೆಂಡ್, ನ್ಯೂಜಿಲ್ಯಾಂಡ್, ಭಾರತದಲ್ಲಿ ಎಂಬಿಬಿಎಸ್ ಮಾಡಿದವರು ಜಗತ್ತಿನ ಯಾವುದೇ ದೇಶದಲ್ಲಾದರೂ ನೇರವಾಗಿ ವೈದ್ಯಕೀಯ ವೃತ್ತಿ ಮಾಡಬಹುದು.
ಉಳಿದಂತೆ ಚೀನಾ, ಬ್ರೆಜಿಲ್, ಉಕ್ರೇನ್ , ಜಪಾನ್, ಜರ್ಮನಿ, ರಷ್ಯಾ ಸೇರಿದಂತೆ ಯಾವುದೇ ದೇಶದಲ್ಲಿ ಎಂಬಿಬಿಎಸ್ ಪದವಿ ಪಡೆದರೂ ಸ್ವದೇಶಗಳಲ್ಲಿ ಅಥವಾ ವಿದೇಶಗಳಲ್ಲಿ ನೇರವಾಗಿ ವೈದ್ಯ ವೃತ್ತಿ ಆರಂಭಿಸಲು ಸಾಧ್ಯವಿಲ್ಲ. ವಿದೇಶಿ ಎಂಬಿಬಿಎಸ್ ಪದವೀಧರರು ಭಾರತಕ್ಕೆ ಬಂದರೆ ಮೊದಲು ಇಲ್ಲಿ ನ್ಯಾಷನಲ್ ಬೋರ್ಡ್ ಆಫ್ ಕ್ಸಾಮಿನೇಷನ್ ನಡೆಸುವ ಪರೀಕ್ಷೆಯಲ್ಲಿ ಕಡ್ಡಾಯವಾಗಿ ಉತ್ತೀರ್ಣವಾಗಬೇಕು. ನಂತರ ಒಂದು ವರ್ಷ ಹೌಸ್‍ಮನ್‍ಶಿಪ್ ಮಾಡಬೇಕು. ಬಳಿಕ ಅವರು ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ವಿದೇಶಿ ಪದವಿ ಪಡೆದವರು ಭಾರತಕ್ಕೆ ಬಂದಾಗ ಇಲ್ಲಿ ನಡೆಯುವ ಪರೀಕ್ಷೆಯಲ್ಲಿ ಪಾಸ್ ಆಗುವ ಪ್ರಮಾಣ ಶೇ.18ರಿಂದ 20ರಷ್ಟು ಮಾತ್ರ. ಉಳಿದ ಎಲ್ಲರೂ ಅನುತ್ತೀರ್ಣರಾಗುತ್ತಿದ್ದಾರೆ. ಈ ವೇಳೆ ಅವರ ಪದವಿ ವ್ಯರ್ಥವಾಗುತ್ತದೆ. ಅದಕ್ಕಾಗಿ ಉತ್ತೀರ್ಣರಾಗಲು ಅವರಿಗೆ ಹಲವು ಅವಕಾಶಗಳನ್ನು ನೀಡಲಾಗುತ್ತದೆ.
ವಿದೇಶಿ ಪದವಿಗಳ ಕಳಪೆ ಗುಣಮಟ್ಟದಿಂದಾಗಿ ಬಹಳಷ್ಟು ಮಂದಿ ಎಂಬಿಬಿಎಸ್ ಪದವಿಯ ಸರ್ಟಿಫಿಕೆಟ್‍ಗಳಿದ್ದರೂ ವೈದ್ಯ ವೃತ್ತಿ ನಿರ್ವಹಿಸಲಾಗದೆ ಪರದಾಡುತ್ತಾರೆ. ಇನ್ನು ಕೆಲವರು ತಾವು ವ್ಯಾಸಂಗ ಮಾಡಿದ ದೇಶಗಳಿಗೆ ಅಥವಾ ಪದವಿಯನ್ನು ಅಂಗೀಕರಿಸುವ ಭಾಗಗಳಿಗೆ ಹೋಗಿ ವೃತ್ತಿ ಜೀವನ ಕಟ್ಟಿಕೊಳ್ಳುತ್ತಾರೆ.
ಉಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಹಾವೇರಿಯ ನವೀ ಗ್ಯಾನಗೌಡರ್ ಮೃತಪಟ್ಟ ಬಳಿಕ ಭಾರತೀಯ ಶಿಕ್ಷಣ ಪದ್ದತಿಯ ಬಗ್ಗೆ ಹಲವು ಆಕ್ಷೇಪಗಳು ಕೇಳಿಬಂದಿವೆ. ಇಲ್ಲಿನ ಜಾತಿ ವ್ಯವಸ್ಥೆ ಮತ್ತು ದುಬಾರಿ ಶಿಕ್ಷಣ ವಿದ್ಯಾರ್ಥಿಗಳನ್ನು ಅನಿವಾರ್ಯವಾಗಿ ವಿದೇಶಕ್ಕೆ ತೆರಳುವಂತೆ ಮಾಡುತ್ತಿವೆ ಎಂಬ ಆರೋಪಗಳು ಚರ್ಚೆಯಾಗುತ್ತಿವೆ.
ಓದಿನ ಕಾಲಮಾನದಲ್ಲಿ ಪ್ರತಿಯೊಬ್ಬರಿಗೂ ಡಾಕ್ಟರ್, ಇಂಜಿನಿಯರ್, ಐಎಎಸ್ ಆಗುವ ಕನಸುಗಳಿರುತ್ತವೆ. ಆದರೆ ಸ್ಪರ್ಧಾತ್ಮಕ ಕಾಲದಲ್ಲಿ ಪ್ರತಿಭೆ ಹೊರತಾಗಿ ಸುಲಭವಾಗಿ ಯಾವುದನ್ನು ದಕ್ಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಈ ಮಧ್ಯೆ ಶ್ರೀಮಂತ ವರ್ಗ ವೈದ್ಯಕೀಯ ಶಿಕ್ಷಣವನ್ನು ಸುಲಭವಾಗಿ ಗಿಟ್ಟಿಸಿಕೊಳ್ಳುತ್ತಿವೆ ಎಂಬ ಆರೋಪಗಳಿವೆ. ಆದರೆ ಅದರ ಪ್ರಮಾಣ ಅತ್ಯಲ್ಪ. ದೇಶದಲ್ಲಿ ಸುಮಾರು 550 ಮೆಡಿಕಲ್ ಕಾಲೇಜುಗಳಿದ್ದು ವರ್ಷಕ್ಕೆ 90 ಸಾವಿರ ಪ್ರವೇಶಾವಕಾಶಗಳಿವೆ. ಹಾಗಾಗಿ ವೈದ್ಯರಾಗುವ ಕನಸು ಕಂಡ ಎಲ್ಲರಿಗೂ ಅವಕಾಶ ಸಿಗುವುದು ಕಷ್ಟಸಾಧ್ಯ.
# ಖರ್ಚು ವ್ಯತ್ಯಾಸ:
ಭಾರತೀಯ ವೈದ್ಯಕೀಯ ಶಿಕ್ಷಣ ಮತ್ತು ವಿದೇಶಿ ಶಿಕ್ಷಣದ ನಡುವಿನ ಖರ್ಚಿನ ಅಂತರ ಬೃಹತ್ ಪ್ರಮಾಣದಲ್ಲಿದೆ. ಭಾರತದಲ್ಲಿ ವೈದ್ಯಕೀಯ ಪದವಿ ಪಡೆಯಬೇಕಾದರೆ ಕನಿಷ್ಟ 25ರಿಂದ 30 ಲಕ್ಷ ಸರ್ಕಾರಿ ಸೀಟ್‍ಗಳಿಗೆ ಖಾಸಗಿಯಾಗಿ ಒಂದು ಕೋಟಿವರೆಗೆ ವೆಚ್ಚ ತಗಲುತ್ತದೆ.
ಅದೇ ವಿದೇಶಗಳಲ್ಲಿ 5ರಿಂದ 15 ಲಕ್ಷ ರೂ.ಗಳ ಅಂತರದಲ್ಲೇ ನಾಲ್ಕೂವರೆ ವರ್ಷದ ಕೋರ್ಸ್ ಪೂರ್ಣಗೊಳಿಸಬಹುದು ಎಂದು ನಂಬಿಸುತ್ತಿವೆ. ತಮ್ಮ ಮಕ್ಕಳು ವೈದ್ಯರಾಗಬೇಕೆಂಬ ಕನಸು ಹೊತ್ತವರು ಸಾಲಸೋಲ ಮಾಡಿ ಹಣ ಹೊಂದಿಸುತ್ತಾರೆ. ಖಾಸಗಿ ಏಜೆನ್ಸಿಗಳು ನೀಡುವ ಭರವಸೆಗಳನ್ನು ನಂಬಿ ವಿದೇಶಕ್ಕೆ ತೆರಳುತ್ತಾರೆ. ಅಲ್ಲಿಂದ ವಾಪಸ್ ಬಂದ ಬಳಿಕ ನಿಜವಾದ ಸಂಕಷ್ಟ ಎದುರಿಸುವ ಪರಿಸ್ಥಿತಿ ಇದೆ.
ಒಮ್ಮೆ ವಿದೇಶಿ ಕಾಲೇಜುಗಳಲ್ಲಿ ಪ್ರವೇಶ ಕೊಡಿಸಿದರೆ ಖಾಸಗಿ ಏಜೆನ್ಸಿಗಳ ಜವಾಬ್ದಾರಿ ಮುಗಿದು ಹೋಯಿತು. ಮುಂದಿನ ಯಾವ ಸಮಸ್ಯೆಗಳಿಗೂ ಅವರು ಉತ್ತರದಾಯಿಗಳಲ್ಲ ಎಂಬ ಪರಿಸ್ಥಿತಿ ಇದೆ.
ವಿದೇಶಿ ಶಿಕ್ಷಣದ ಪ್ರವೇಶ ಕೊಡಿಸುವ ಏಜೆನ್ಸಿಗಳಿಗೆ ಯಾವುದೇ ಯಾವುದೇ ಉತ್ತರದಾಯಿತ್ವವೇ ಇಲ್ಲ. ಹಾಗಾಗಿ ಅನಕೃತ ಅಥವಾ ಅಮಾನ್ಯ ಶಿಕ್ಷಣ ಸಂಸ್ಥೆಗಳಿಗೂ ಭಾರತೀಯ ವಿದ್ಯಾರ್ಥಿಗಳನ್ನು ಸೇರಿಸಿ ಕೈ ತೊಳೆದುಕೊಳ್ಳುತ್ತಿವೆ. ಅಲ್ಲಿನ ವೈದ್ಯಕೀಯ ಶಿಕ್ಷಣ ಪರಿಷತ್‍ನಲ್ಲಿ ನೋಂದಣೆಯಾಗದೆ ಇರುವ ಕಾಲೇಜುಗಳಿಂದ ಪದವಿ ಪಡೆದಿದ್ದರೆ ಅದು ವಿಶ್ವದ ಯಾವುದೇ ದೇಶದಲ್ಲೂ ಮಾನ್ಯವಾಗುವುದಿಲ್ಲ.
ಅದರಲ್ಲಿ ಪ್ರಮುಖವಾಗಿ ವರ್ಷಕ್ಕೆ ಎಷ್ಟು ಮಂದಿ ವಿದೇಶಿ ವ್ಯಾಸಂಗಕ್ಕೆ ತೆರಳುತ್ತಾರೆಂಬ ದತ್ತಾಂಶ ಸಂಗ್ರಹಿಸುವ ವ್ಯವಸ್ಥೆ ಕೂಡ ನಮ್ಮಲ್ಲಿ ಇಲ್ಲ. ಯಾವುದೇ ಮೂಲೆಯಿಂದ ಎಲ್ಲಿಗೋ ಹೋಗಿ ಪದವಿ ಪಡೆದು ಬಂದವರು ಪ್ರವೇಶ ಪರೀಕ್ಷೆಗೆ ಅರ್ಜಿ ಹಾಕಿದಾಗ ಮಾತ್ರ ವಿಷಯ ತಿಳಿಯಲಿದೆ.
ಹೀಗಾಗಿ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮಾಹಿತಿ ಈವರೆಗೂ ಸರ್ಕಾರಕ್ಕೆ ನಿಖರವಾಗಿ ಲಭ್ಯವಾಗುತ್ತಿಲ್ಲ. ನಮ್ಮಲ್ಲಿ ಉತ್ಕøಷ್ಟ ವೈದ್ಯಕೀಯ ಶಿಕ್ಷಣ ಲಭ್ಯವಿದೆಯಾದರೂ ಖಾಸಗಿ ಸಂಸ್ಥೆಗಳ ಲಾಭಕೋರತನದಿಂದ ಜನಸಾಮಾನ್ಯರಿಗೆ ಗಗನ ಕುಸುಮವಾಗಿದೆ. ಅಕಾರಕ್ಕೆ ಬರುವ ಎಲ್ಲ ಪಕ್ಷಗಳು ದೂಷಣೆ ಮಾಡುತ್ತಾ ಕಾಲ ಕಳೆಯುತ್ತಿವೆಯೆ ಹೊರತು ಸಮಸ್ಯೆ ಬಗೆಹರಿಸಲು ಯಾರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ.
ಗುಣಮಟ್ಟ ಬೇಕಾದರೆ ದುಬಾರಿಯನ್ನು ಸಹಿಸಿಕೊಳ್ಳಬೇಕು ಎಂಬ ಧೋರಣೆಯನ್ನು ಸಾಂಪ್ರದಾಯಿಕವಾಗಿ ಬಿತ್ತಲಾಗಿದೆ. ಜನ ಕೂಡ ಅದಕ್ಕೆ ಹೊಂದಿಕೊಂಡು ಹೋಗುತ್ತಿದ್ದಾರೆ. ಉಕ್ರೇನ್‍ನಂತಹ ಸಮಸ್ಯೆಗಳು ಆದಾಗ ಮಾತ್ರ ಒಂದಿಷ್ಟು ಆಕ್ರೋಶಗಳು ಕೇಳಿಬರುತ್ತವೆ.

Articles You Might Like

Share This Article