ಅಣ್ಣನ ಮಗನಿಂದಲೆ ಮಾಜಿ ಕಾರ್ಪೊರೇಟರ್ ಪತಿ ಮರ್ಡರ್

Social Share

ಬೆಂಗಳೂರು,ಜು.14- ಭೂ ವಿವಾದ ಹಾಗೂ ಮಸೀದಿ ಅಧ್ಯಕ್ಷ ಸ್ಥಾನದ ವಿಚಾರದಿಂದ ವೈಮನಸ್ಸಗೊಂಡು ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಪತಿಯನ್ನು ಚಾಕುವಿನಿಂದ ಇರಿದು ಸಂಬಂಧಿಯೇ ಕೊಲೆ ಮಾಡಿರುವ ಘಟನೆ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ. ಟಿಪ್ಪುನಗರದ ಒಂದನೇ ಮುಖ್ಯರಸ್ತೆ ನಿವಾಸಿ ಅಯೂಬ್ ಖಾನ್ 38) ಕೊಲೆಯಾದವರು.

ಅಯಾಬ್ಖಾನ್ ಅವರ ಅಣ್ಣನ ಮಗ ಆರೋಪಿ ಮತೀನ್ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಬಿಬಿಎಂಪಿ ಮಾಜಿ ಸದಸ್ಯೆ ನಾಜಿಮಾಖಾನಂ ಅವರ ಪತಿ ಅಯೂಬ್ಖಾನ್ ರಿಯಲ್ ಎಸ್ಟೇಟ್ ವ್ಯವಹಾರ ಹಾಗೂ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು.

ಅಯಾಬ್ಖಾನ್ ಅವರು ಸುಮಾರು 15 ವರ್ಷಗಳಿಂದ ನಗರದ ಋರಾದತ್ ಮಸೀದಿಗೆ ಅಧ್ಯಕ್ಷರಾಗಿ ಕೆಲಸ ಮಾಡಿಕೊಂಡಿದ್ದರು. ಕಳೆದ ಒಂದು ವರ್ಷದಿಂದ ಅಯಾಬ್ಖಾನ್ ಅವರ ಅಣ್ಣ ಪ್ಯಾರುಖಾನ್ ಅವರ ಮಗ ಮತೀನ್ ಸಹ ಮಸೀದಿಗೆ ಅಧ್ಯಕ್ಷ ಆಗಬೇಕೆಂದು ಅಯೂಬ್ಖಾನ್ ಜೊತೆ ಜಗಳವಾಡಿಕೊಂಡಿದ್ದನು.

ಸುಮಾರು 6 ತಿಂಗಳ ಹಿಂದೆ ನಾಜಿಮಾಖಾನಂ ಅವರ ಮಗ ಸಿದ್ದಿಕ್ಖಾನ್ನನ್ನು ಮಸೀದಿಗೆ ಪ್ರೆಸಿಡೆಂಟ್ ಮಾಡುತ್ತಾರೆಂದು ತಿಳಿದು ಮತೀನ್ ಚಾಕುವನ್ನು ತಂದು ಇಬ್ಬರ ಮೇಲೂ ಹೊಡೆಯಲು ಬಂದಿದ್ದನು.ಆ ಸಂದರ್ಭದಲ್ಲಿ ತನ್ನ ಅಣ್ಣನ ಮಗನೆಂದು ಯಾವುದೇ ದೂರು ನೀಡಿರಲಿಲ್ಲ. ಇದೇ ವಿಚಾರವನನು ಮುಂದಿಟ್ಟುಕೊಂಡು ಮತೀನ್ ತಾನು ಅಧ್ಯಕ್ಷನಾಗಬೇಕು, ನೀನು ಇರುವವರೆಗೂ ಅದು ಸಾಧ್ಯವಾಗುವುದಿಲ್ಲ, ನಿನಗೆ ಇಷ್ಟರಲ್ಲೇ ಸರಿಯಾಗಿ ಮಾಡುತ್ತೇನೆಂದು ಬೆದರಿಕೆ ಹಾಕಿದ್ದನು.

ಇದೇ 12ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ಅಯೂಬ್ಖಾನ್ ಅವರ ಮನೆ ಬಳಿ ಬಂದ ಮತೀನ್, ನನ್ನನ್ನು ಮಸೀದಿಗೆ ಪ್ರೆಸಿಡೆಂಟ್ ಮಾಡದಿದ್ದರೆ ಸುಮ್ಮನೆ ಬಿಡುವುದಿಲ್ಲ ಎಂದು ಬೈದು ಗಲಾಟೆ ಮಾಡುತ್ತಿದ್ದಾಗ, ಅಕ್ಕ-ಪಕ್ಕದವರು ಹಾಗೂ ಅಯೂಬ್ಖಾನ್ ಆತನಿಗೆ ಬೈದು ಕಳುಹಿಸಿದ್ದರು.

ಇಷ್ಟಕ್ಕೆ ಸುಮ್ಮನಾಗದ ಮತೀನ್ ನಿನ್ನೆ ರಾತ್ರಿ 7.25ರ ಸುಮಾರಿನಲ್ಲಿ ಅಯೂಬ್ಖಾನ್ ನಮಾಜ್ ಮುಗಿಸಿಕೊಂಡು ಮಸೀದಿಯಿಂದ ಮನೆ ಬಳಿ ಹೋಗುತ್ತಿರುವುದನ್ನೇ ಕಾದು ಹೊಂಚು ಹಾಕಿ ಕೈಯಲ್ಲಿ ಚಾಕು ಹಿಡಿದು, ಬಾರೋ ಇವತ್ತು ಸರಿಯಾಗಿ ಮಾಡುತ್ತೇನೆ, ನೀನು ಇದ್ದರೆ ನನ್ನ ಆಸೆ ಈಡೇರಲ್ಲ ಎಂದು ಬೈದು ಗಲಾಟೆ ಮಾಡಿದ್ದಾನೆ.

ತಕ್ಷಣ ನಾಜಿಮಾಖಾನಂ ಅವರು ತಮ್ಮ ಮಕ್ಕಳಾದ ಸಿದ್ದಿಕ್ಖಾನ್, ಜುನೇದಖಾನ್ ಜೊತೆ ಕೆಳಗೆ ಬಂದು ಮತೀನ್ನನ್ನು ತಡೆಯಲು ಮುಂದಾಗಿದ್ದಾರೆ.ಆ ವೇಳೆ ಮತೀನ್ ತನ್ನ ಬಳಿಯಿದ್ದ ಚಾಕುವಿನಿಂದ ಅಯೂಬ್ಖಾನ್ ಅವರ ಹೊಟ್ಟೆಗೆ ಚುಚ್ಚಿ ಚಾಕು ಸಮೇತ ಸ್ಥಳದಿಂದ ಪರಾರಿಯಾಗಿದ್ದಾನೆ.ಗಂಭೀರ ಗಾಯಗೊಂಡ ಅಯೂಬ್ಖಾನ್ ಅವರನ್ನು ಪತ್ನಿ, ಮಕ್ಕಳು ನೆರೆ ಹೊರೆಯವರ ಸಹಾಯದಿಂದ ಕಾರಿನಲ್ಲಿ ಕರೆದೊಯ್ದು ಎದುರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು.

ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೆ ಬೆಳಗಿನ ಜಾವ 12.10ರಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಚಾಮರಾಜಪೇಟೆ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಮತೀನ್ಗಾಗಿ ಶೋಧ ಕೈಗೊಂಡಿದ್ದಾರೆ.

Articles You Might Like

Share This Article