ಬೆಂಗಳೂರಿನ ಗಾಂಧಿನಗರದಿಂದ ಸ್ಪರ್ಧಿಸಲು ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಭರ್ಜರಿ ತಯಾರಿ

Social Share

ಬೆಂಗಳೂರು,ಸೆ.17- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪ್ರಮುಖ ನಾಯಕರು ಹೊಸ ಹೊಸ ಕ್ಷೇತ್ರಗಳತ್ತ ಕಣ್ಣಿಟ್ಟಿದ್ದು, ಸದ್ದಿಲ್ಲದೆ ಸಮಾಜಸೇವೆ ಮೂಲಕ ಮತದಾರರ ಓಲೈಕೆಗೆ ಮುಂದಾಗಿದ್ದಾರೆ. ಪಕ್ಷದಿಂದ ಸ್ಪಧಿಸುವುದಾದರೆ ಹೊಸ ಕ್ಷೇತ್ರಗಳಿಂದ ಕಣಕ್ಕಿಳಿಯಬೇಕೆಂದು ವರಿಷ್ಠರು ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರಗಳಲ್ಲಿ ಕೆಲಸಗಳನ್ನು ಪ್ರಾರಂಭಿಸಿದ್ದಾರೆ.

ಕೋಲಾರ ಜಿಲ್ಲೆ ಮಾಲೂರಿನಿಂದ ಸ್ರ್ಪಧಿಸಿ ಸಚಿವರೂ ಆಗಿದ್ದ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರು ಈ ಬಾರಿ ಬೆಂಗಳೂರಿನಿಂದ ಸ್ರ್ಪಧಿಸಲು ಒಲವು ತೋರಿದ್ದಾರೆ. ರಾಜಧಾನಿ ಬೆಂಗಳೂರಿನ ಗಾಂಧಿನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವ ಅವರು ಮತದಾರರ ಸೆಳೆಯಲು ನಾನಾ ರೀತಿಯ ಸೇವಾ ಕಾರ್ಯಗಳನ್ನು ಕ್ಷೇತ್ರದಲ್ಲಿ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಭರಪೂರ ಕೊಡುಗೆ ಘೋಷಿಸಿದ ಸಿಎಂ ಬೊಮ್ಮಾಯಿ

ವರಿಷ್ಠರು ಗಾಂಧಿನಗರದಿಂದ ಟಿಕೆಟ್ ನೀಡುವ ಭರವಸೆ ನೀಡಿದ್ದರಿಂದ ಕೃಷ್ಣಯ್ಯ ಶೆಟ್ಟಿ ಗಾಂಧಿನಗರ ಕ್ಷೇತ್ರದ 12 ಕಡೆ ಕ್ಯಾಂಟೀನ್‍ಗಳನ್ನು ತೆರೆದಿದ್ದಾರೆ. ಈಗಾಗಲೇ ನಾಲ್ಕು ಕ್ಯಾಂಟೀನ್‍ಗಳು ಆರಂಭವಾಗಿದ್ದು, ಉಳಿದ 8 ಕ್ಯಾಂಟೀನ್‍ಗಳು ಪ್ರಾರಂಭ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಈ ಹಿಂದೆ ಸಚಿವರಾಗಿದ್ದ ವೇಳೆ ತಿರುಪತಿಯಿಂದ ಲಾಡು, ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಗಂಗಾಜಲ ತರಿಸಿದ್ದ ಅವರು ಗಾಂಧಿನಗರದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಉಚಿತ ಗಣೇಶಮೂರ್ತಿ ವಿತರಣೆ, ಬಡ ಮಕ್ಕಳಿಗೆ ಪುಸ್ತಕ ವಿತರಣೆ, ಸಮವಸ್ತ್ರ, ಉಚಿತ ಆರೋಗ್ಯ ತಪಾಸಣೆ ಶಿಬಿರ, ಮಹಿಳೆಯರಿಗೆ ಹೊಲಿಗೆ ಯಂತ್ರ ಹಲವು ರೀತಿಯಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದೇ ಕ್ಷೇತ್ರದ ಮೇಲೆ ಬಿಜೆಪಿ ಯುವ ಮೋರ್ಚ ನಾಯಕ ಹಾಗೂ ಮಾಜಿ ಸಚಿವ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಕಣ್ಣಿಟ್ಟಿದ್ದಾರೆ. ಕೃಷ್ಣಯ್ಯ ಶೆಟ್ಟಿ ಮಾತ್ರವಲ್ಲದೆ ಇದೇ ರೀತಿ ಅನೇಕ ಆಕಾಂಕ್ಷಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಟಿಕೆಟ್ ಸಿಗಬಹುದೆಂಬ ಖಾತ್ರಿಯಿಂದ ಮತದಾರರನ್ನು ಸೆಳೆಯಲು ಭರಪೂರ ಉಡುಗೊರೆಗಳನ್ನು ಕೊಡುತ್ತಿದ್ದಾರೆ. ಹಬ್ಬ ಹರಿದಿನಗಳನ್ನೇ ಕಾಯುತ್ತಿರುವ ಆಕಾಂಕ್ಷಿಗಳು ತಾ ಮುಂದು, ನಾ ಮುಂದು ಎಂಬಂತೆ ಸ್ಪರ್ಧೆಗೆ ಬಿದ್ದವರಂತೆ ಆಕರ್ಷಕ ಕೊಡುಗೆಗಳ್ನು ಕೊಟ್ಟು ಮತದಾರರನ್ನು ಸೆಳೆಯುತ್ತಿದ್ದಾರೆ.

Articles You Might Like

Share This Article