ಮೇಕೆದಾಟು ವಿಚಾರ ಸರ್ಕಾರದ ವಿರುದ್ಧ ಎಂ.ಬಿ.ಪಾಟೀಲ್ ಆರೋಪ

Social Share

ಬೆಂಗಳೂರು,ಜ.12-ಮೇಕೆದಾಟು ಯೋಜನೆ ವಿಷಯದಲ್ಲಿ ಬಿಜೆಪಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದು, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉಡಾಫೆ ವರ್ತನೆ ತೋರಿಸುತ್ತಿದ್ದಾರೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದ್ದಾರೆ. ನಗರದ ಖಾಸಗಿ ಹೋಟೆಲ್‍ನಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೋಜನೆಯ ಇತಿಹಾಸ, ಆರಂಭ, ಪ್ರಗತಿ ಸೇರಿದಂತೆ ಸಮಗ್ರ ವಿವರಗಳನ್ನು ದಾಖಲಾತಿ ಮತ್ತು ದಿನಾಂಕ ಸಹಿತವಾಗಿ ವಿವರಿಸಿದರು.
1997-98ರಲ್ಲೇ ಈ ಯೋಜನೆ ಪ್ರಸ್ತಾಪವಾಗಿತ್ತು. ಆದರೆ ಕಾವೇರಿ ನದಿನೀರಿನ ವಿವಾದ ನ್ಯಾಯಾಲಯದಲ್ಲಿದ್ದರಿಂದ ಇದು ಪ್ರಗತಿಯಾಗಿರಲಿಲ್ಲ. ನ್ಯಾಯಾೀಕರಣದ ತೀರ್ಪು ಪ್ರಕಟವಾಗಿ ಅದಕ್ಕೆ ಕೇಂದ್ರ ಸರ್ಕಾರ ಅಸೂಚನೆ ಹೊರಡಿಸಿದ ಮೇಲೆ ಸಿದ್ದರಾಮಯ್ಯನವರ ಸರ್ಕಾರದಲ್ಲಿ ನಾನು ಜಲಸಂಪನ್ಮೂಲ ಸಚಿವನಾಗಿದ್ದೆ.
ರಾಜ್ಯದ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸುವ ಕಾನೂನು ತಂಡದ ನೇತೃತ್ವ ವಹಿಸಿದ್ದ ಪಾಲಿ ನಾರಿಮನ್ ಅವರನ್ನು ತಾವು ಭೇಟಿಯಾಗಿ ಪ್ರಶ್ನಿಸಿದ್ದ ವೇಳೆ, ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಯಾರೂ ಅಡ್ಡಿಪಡಿಸಲು ಸಾದ್ಯವಿಲ್ಲ. ನೀವು ಮುಂದುವರೆಯಿರಿ ಎಂದು ಸಲಹೆ ನೀಡಿದ್ದರು.
ನಂತರ ತಾವು ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು, ಅವರ ಸಲಹೆ ಮೇರೆಗೆ ಅಧಿಕಾರಿಗಳ ಸಭೆ ಕರೆದು ಯೋಜನೆಯ ಔಚಿತ್ಯ ವಿವರಿಸಿ ವಿಸ್ತೃತ ಯೋಜನಾ ವರದಿ ತಯಾರಿಸಲು ಕ್ರಮ ಕೈಗೊಳ್ಳಲಾಯಿತು. ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡಿದ ಬಳಿಕ ಯೋಜನಾ ವರದಿ ತಯಾರಾಗಿದೆ. ಅದನ್ನು ಒಳಗೊಂಡಂತೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಾಗ ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಯೋಜನಾ ವರದಿ ಜೊತೆಗೆ ಔಚಿತ್ಯ ವರದಿಯನ್ನೂ ಕೂಡ ಸಲ್ಲಿಸಲಾಗಿದೆ. ಕೇಂದ್ರ ಜಲಶಕ್ತಿ ಆಯೋಗ 2007ರ ಮಾರ್ಗಸೂಚಿಗಳ ಪ್ರಕಾರ ಔಚಿತ್ಯ ವರದಿ ಬದಲಾವಣೆ ಮಾಡಿಕೊಡುವಂತೆ ಕೇಳಿದ್ದು, ಅದನ್ನೂ ಮಾಡಿದ್ದೇವೆ. ಕೊನೆಗೆ ಜಲಶಕ್ತಿ ಆಯೋಗವೇ ಇದು ಕುಡಿಯುವ ನೀರು ಮತ್ತು ವಿದ್ಯುತ್ ಉತ್ಪಾದನೆ ಯೋಜನೆಯಾಗಿರುವುದರಿಂದ 2007ರ ಮಾರ್ಗಸೂಚಿ ಅನ್ವಯ ಅಗತ್ಯವಿಲ್ಲ. ಈ ಮೊದಲಿನ ವಿಸ್ತೃತ ಯೋಜನಾ ವರದಿಯನ್ನು ಆಧರಿಸಿಯೇ ಯೋಜನೆಯನ್ನು ಕೈಗೊಳ್ಳಬಹುದು ಎಂದು ಅನುಮತಿ ನೀಡಿದೆ.
ರಾಜ್ಯ ಸರ್ಕಾರದಿಂದ ಯಾವುದೇ ವಿಳಂಬವಿಲ್ಲದೆ ಕಾಲಕ್ಕೆ ಅನುಗುಣವಾಗಿ ಕ್ರಮ ಕೈಗೊಳ್ಳಲಾಯಿತು. 2017ರಲ್ಲಿ ತಯಾರಿಸಲಾಗಿದ್ದ ವಿಸ್ತೃತ ಯೋಜನೆಯನ್ನು 2019ರಲ್ಲಿ ಡಿ.ಕೆ.ಶಿವಕುಮಾರ್ ಸಚಿವರಾಗಿದ್ದಾಗ ಅಂದಾಜು ವೆಚ್ಚವನ್ನು ಪರಿಷ್ಕರಣೆ ಮಾಡಿ 5900 ಕೋಟಿ ರೂ.ಗಳಿಂದ 9000 ಕೋಟಿಗಳಿಗೆ ಹೆಚ್ಚಳ ಮಾಡಲಾಗಿದೆ. ಆಗಿನ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಸಭೆ ಮಾಡಿ ಯೋಜನೆ ದಶಕಗಳಿಂದಲೂ ವಿಳಂಬವಾಗಿದೆ ಎಂದು ಅಭಿಪ್ರಾಯಪಟಿದ್ದರು.
ನಮ್ಮ ಅವಧಿಯಲ್ಲಿ ವಿಳಂಬವಾಗಿದೆ ಎಂದು ಹೇಳಿಲ್ಲ. ಜವಾಬ್ದಾರಿಯುತ ಸಚಿವರಾಗಿರುವ ಕಾರಜೋಳ ಅವರು ಅಂತರ ರಾಜ್ಯ ನದಿ ವಿವಾದದ ಸೂಕ್ಷ್ಮತೆಯನ್ನು ಮರೆತು ಅನಾಮಧೇಯ ಜಾಹಿರಾತು ನೀಡಿದ್ದಾರೆ. ನಂತರ ಜಾಹೀರಾತನ್ನು ತಾವೇ ನೀಡಿದ್ದಾಗಿ ಸಮರ್ಥಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಬಿಜೆಪಿ ಸರ್ಕಾರ ಎರಡೂವರೆ ವರ್ಷ ಏನೇನು ಮಾಡದೆ ನಿದ್ದೆ ಮಾಡುತ್ತಿದ್ದು, ಈಗ ಅನಗತ್ಯವಾಗಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು. ಮಾಜಿ ಸಚಿವ ಬಿ.ಎಲ್.ಶಂಕರ್ ಅವರು ಮಾತನಾಡಿ, ಈ ಮೊದಲು ಸಿದ್ದರಾಮಯ್ಯನವರ ಸರ್ಕಾರ ಪ್ರಧಾನಿಯವರಿಗೆ ನೀಡಿರುವ ಮನವಿ ನೆನೆಗುದಿಗೆ ಬಿದ್ದಿದೆ.
ಅದನ್ನು ಆಧರಿಸಿ ಕಾವೇರಿ ವ್ಯಾಪ್ತಿಗೊಳಪಡುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಸಂಧಾನ ಮೂಲಕ ವಿವಾದವನ್ನು ಇತ್ಯರ್ಥಪಡಿಸಬಹುದು. ಆದರೆ ಆರು ವರ್ಷ ಕಳೆದರೂ ಪ್ರಧಾನಿಯವರು ಈ ಬಗ್ಗೆ ಕ್ರಮ ಕೈಗೊಳ್ಳದೆ ಮೌನವಾಗಿರುವುದು ಏಕೆ ಎಂದು ಪ್ರಶ್ನಿಸಿದರು.
ಈ ಹಿಂದೆ ಅಂತರ ರಾಜ್ಯ ನದಿ ವಿವಾದವನ್ನು ಪ್ರಧಾನಿ ಇಂದಿರಾಗಾಂಧಿ ಅವರು ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶಗಳ ಜೊತೆ ಸಮಾಲೋಚನೆ ನಡೆಸಿ ಬಗೆಹರಿಸಿದ್ದರು. ಆದರೆ ಈಗಿನ ಪ್ರಧಾನಿ ಈ ವಿಷಯದಲ್ಲಿ ಮೌನವಹಿಸಿದ್ದಾರೆ ಎಂದು ಹೇಳಿದರು.
ಪಾದಯಾತ್ರೆ ಕುರಿತಂತೆ ಹೈಕೋರ್ಟ್‍ನಲ್ಲಿ ನಡೆಯುತ್ತಿರುವ ವಿಚಾರಣೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ಎಲ್ಲರ ಹಕ್ಕು ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದನ್ನು ಆಧರಿಸಿ ಪಾದಯಾತ್ರೆ ನಡೆಸುತ್ತಿರುವುದಾಗಿ ಸಮರ್ಥಿಸಿಕೊಂಡರು.

Articles You Might Like

Share This Article