ನಾಲ್ವರು ಆರೋಪಿಗಳು ಸಿಸಿಬಿ ಬಲೆಗೆ : 98 ಲಕ್ಷ ಮೌಲ್ಯದ ಚಿನ್ನಾಭರಣ ವಶ

Social Share

ಬೆಂಗಳೂರು, ಅ.28- ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿ 98 ಲಕ್ಷ ರೂ. ಮೌಲ್ಯದ ಒಂದು ಕೆಜಿ 985 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಮಹಮ್ಮದ್ ಸದ್ದಾಂ(36), ಸಯ್ಯದ್ ತರಬೇಜ್‍ಪಾಷಾ(32) ಮತ್ತು ಅಬೀದ್ ಅಜಂ(31) ಮತ್ತು ರಂಜಿತ್ ಸಿಂಗ್ ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ಬೆಂಗಳೂರು, ಮೈಸೂರು ಮತ್ತು ಹಾಸನ ಜಿಲ್ಲೆಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕನ್ನಗಳವು ಮಾಡಿದ್ದ ಒಟ್ಟು 12 ಪ್ರಕರಣಗಳನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಸುಮಾರು ಐದಾರು ವರ್ಷಗಳಿಂದ ಮೂವರು ಆರೋಪಿಗಳು ಕಳ್ಳತನ ಪ್ರವೃತ್ತಿಯಲ್ಲಿ ತೊಡಗಿ ಬೆಂಗಳೂರಿನ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಹಗಲು ವೇಳೆ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆಯಿಂದ ಗೊತ್ತಾಗಿದೆ.

ವಿಜಯೇಂದ್ರಗೆ ಸಿಎಂ ಸ್ಥಾನ ಸಿಗಲೆಂದು ಅಶ್ವಮೇಧ ಯಾಗ

ಮಹಮ್ಮದ್ ಸದ್ದಾಂ, ಸಯ್ಯದ್ ತರಬೇಜ್‍ಪಾಷಾ ಮತ್ತು ಅಬೀದ್ ಅಜಂ ಈ ಮೂವರು ಆರೋಪಿಗಳು ಈ ಹಿಂದೆ ಸಿಟಿ ಮಾರ್ಕೆಟ್, ಡಿಜೆ ಹಳ್ಳಿ ಮತ್ತು ಹಾಸನ ಟೌನ್ ಪೊಲೀಸ್ ಠಾಣೆಯ ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದು, ಜೈಲಿನಿಂದ ಬಿಡುಗಡೆ ನಂತರವೂ ಮತ್ತೆ ಕಳವು ಪ್ರಕರಣದಲ್ಲಿ ಭಾಗಿಯಾಗಿರುವುದು ವಿಚಾರಣೆಯಿಂದ ಗೊತ್ತಾಗಿದೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಕಪಾಟಿನ ನಕಲಿ ಕೀ ಮಾಡಿಟ್ಟುಕೊಂಡು ಮಾಲಿಕರಿಗೆ ತಿಳಿಯದೆ ಕಳೆದ ಐದಾರು ವರ್ಷಗಳಿಂದ ಕಳ್ಳತನ ಮಾಡಿದ್ದ ಆರೋಪಿ ರಂಜಿತ್ ಸಿಂಗ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಮಾಲಿಕರಿಗೆ ಅನುಮಾನ ಬಂದಿದ್ದರಿಂದ ಆರೋಪಿ ಕೆಲಸ ಬಿಟ್ಟು ರಾಜಸ್ತಾನದಲ್ಲಿ ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಸಿಸಿಬಿ ಗೆ ವಹಿಸಿದ್ದರು.

ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸತತ ಪರಿಶ್ರಮ ಪಟ್ಟು ಎರಡೂ ಪ್ರಕರಣಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಆರೋಪಿಗಳನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನವರಂಗಿ ಆಟವಾಡಲು ಹೋಗಿ ಪೊಲೀಸ್ ಅತಿಥಿಯಾದ ಬಾಲಿವುಡ್ ನಿರ್ಮಾಪಕ

ಆರೋಪಿಗಳಿಂದ ಸುಮಾರು 98 ಲಕ್ಷ ರೂ. ಬೆಲೆ ಬಾಳುವ ಒಂದು ಕೆಜಿ 980 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುತ್ತಾರೆ. ಸಿಸಿಬಿ ಅಪರಾಧ ದಳದ ಉಪಪೊಲೀಸ್ ಆಯುಕ್ತ ಡಾ. ಶರಣಪ್ಪ ಹಾಗೂ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಎಸಿಪಿ ರೀನಾ ಸುವರ್ಣಾ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಹಜರೇಶ್ ಕಿಲ್ಲೇದಾರ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುತ್ತಾರೆ.

Articles You Might Like

Share This Article