ಬೆಂಗಳೂರು,ಫೆ.13-ಹ್ಯಾಂಡಲ್‍ಲಾಕ್ ಮುರಿದು ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಕೋಣನಕುಂಟೆ ಠಾಣೆ ಪೊಲೀಸರು 9 ಲಕ್ಷ ರೂ. ಬೆಲೆ ಬಾಳುವ ಒಟ್ಟು 18 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ಟ ಮುಖ್ಯರಸ್ತೆಯ ನಿವಾಸಿಗಳಾದ ಶ್ರೀನಿವಾಸ್(25), ವಿಕ್ರಮ್ ಕುಮಾರ(23), ಸಲೀಂ(21) ಮತ್ತು ತಮಿಳುನಾಡಿನ ಡೆಂಕಣಿಕೋಟೆ ನಿವಾಸಿ ಬಸಪ್ಪ(25) ಬಂಧಿತ ಆರೋಪಿಗಳು.
ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಬಂಧನಕ್ಕೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಜೆಪಿನಗರದ 8ನೇ ಹಂತದ ಜಂಬುಸವಾರಿ ದಿಣ್ಣೆ-ಗೊಟ್ಟಿಗೆರೆ ರಸ್ತೆಯ ಬಸ್ ನಿಲ್ದಾಣದ ಬಳಿ ಐವರು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ನಾಲ್ವರನ್ನು ಬಂಸಿದ್ದು, ಮತ್ತೊಬ್ಬ ಪರಾರಿಯಾಗಿದ್ದಾನೆ.
ಈ ಆರೋಪಿಗಳು ಎರಡು ವರ್ಷಗಳಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಮನೆಗಳ ಮುಂದೆ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳವು ಮಾಡುತ್ತಿದ್ದರು. ಇವರೆಗೂ 15 ಹೋಂಡಾ ಡಿಯೋ ಎರಡು ಸುಜುಕಿ ಆಕ್ಸಿಸ್, ಒಂದು ಹೋಂಡಾ ಆಕ್ವೀವಾ ಕಳವು ಮಾಡಿದ್ದ ಆರೋಪಿಗಳು ಇವುಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಮೋಜುಮಸ್ತಿಗೆ ಬಳಸುತ್ತಿದ್ದರು.
ಆರೋಪಿಗಳ ಬಂಧನದಿಂದ ಕೋಣನಕುಂಟೆ ಠಾಣೆಯ 6 ದ್ವಿಚಕ್ರ ವಾಹನ ಕಳವು ಪ್ರಕರಣ, ಪುಟ್ಟೇನಹಳ್ಳಿಯ 5 ದ್ವಿಚಕ್ರ ವಾಹನ ಕಳವು ಪ್ರಕರಣ, ಹುಳಿಮಾವು ಜೆಪಿನಗರ ಠಾಣೆ ವ್ಯಾಪ್ತಿಯ ತಲಾ 2 ಪ್ರಕರಣ, ಮೈಕೋಲೇಔಟ್, ಬೇಗೂರು ಹಾಗೂ ಬಂಡೆಪಾಳ್ಯದ ತಲಾ ಒಂದು ಪ್ರಕರಣ ಪತ್ತೆಯಾಗಿದೆ.
ಕಾರ್ಯಾಚರಣೆಯಲ್ಲಿ ಬೆಂಗಳೂರು ದಕ್ಷಿಣ ವಿಭಾಗ ಉಪಪೊಲೀಸ್ ಆಯುಕ್ತ ಹರೀಶ್ ಪಾಂಡೆ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯಪುರ ಉಪವಿಭಾಗ ಎಸಿಪಿ ಶಿವಕುಮಾರ್, ಕೋಣನಕುಂಟೆ ಪೊಲೀಸ್ ಠಾಣೆ ಇನ್‍ಸ್ಪೆಕ್ಟರ್ ನಂಜೇಗೌಡ ನೇತೃತ್ವದಲ್ಲಿ ಪೊಲೀಸ್ ಸಬ್ ಇನ್‍ಸ್ಪೆಕ್ಟರ್‍ಗಳಾದ ವಿನಯ್ ಕೆ.ಎಲ್ ಮತ್ತು ಅರುಣ್‍ಕುಮಾರ್.ಎಂ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
