ನಾಲ್ವರು ಅಂತಾರಾಜ್ಯ ಕಳ್ಳರ ಬಂಧನ, 29 ದ್ವಿಚಕ್ರ ವಾಹನ, ಆಟೋ ವಶ

Social Share

ಬೆಂಗಳೂರು,ಸೆ.17- ದ್ವಿಚಕ್ರ ವಾಹನಗಳ ಹ್ಯಾಂಡಲ್‍ಲಾಕ್ ಮುರಿದು ಕಳ್ಳತನ ಮಾಡಿ ನಂಬರ್ ಪ್ಲೇಟ್ ತೆಗೆದು ತಮಿಳುನಾಡಿನಲ್ಲಿ ಮಾರಾಟ ಮಾಡಿ ಬಂದ ಹಣದಲ್ಲಿ ಮೋಜು ಮಸ್ತಿ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ಕಳ್ಳರನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿ 15 ಲಕ್ಷ ರೂ. ಮೌಲ್ಯದ 29 ದ್ವಿಚಕ್ರ ವಾಹನಗಳು ಮತ್ತು ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ನಗರ ನಿವಾಸಿ ಶಾನ್, ತಮಿಳುನಾಡು ಮೂಲದ ರಂಜಿತ್‍ಕುಮಾರ್, ಶಾಹೇನ್ ಶಾ ಮತ್ತು ಶಿವ ಬಂಧಿತ ಅಂತಾರಾಜ್ಯ ದ್ವಿಚಕ್ರ ವಾಹನ ಕಳ್ಳರು. ಆರೋಪಿಗಳಿಂದ 9 ಹೋಂಡಾ ಡಿಯೋ, ನಾಲ್ಕು ಬಜಾಜ್ ಪಲ್ಸರ್, 3 ಟಿಸಿಎಸ್ ಜುಪಿಟರ್, ಮೂರು ಸುಜುಕಿ ಆಕ್ಸೀಸ್, 2 ಆಕ್ಟೀವಾ ಹೋಂಡಾ, 2 ಹೋಂಡ ಶೈನ್, 1 ರಾಯಲ್ ಎನ್‍ಫೀಲ್ಡ್ ಬೈಕ್ ಸೇರಿದಂತೆ 29 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು, ನಗರದ ವಿವಿಧ ಠಾಣೆಗಳಲ್ಲಿ ಹಾಗೂ ತಮಿಳುನಾಡಿನ ಇತರೆ ಠಾಣೆ ವ್ಯಾಪ್ತಿಗಳಲ್ಲಿ ಕಳ್ಳತನವಾಗಿದ್ದ 30 ಪ್ರಕರಣಗಳು ಪತ್ತೆಯಾದಂತಾಗಿರುತ್ತವೆ.

ಬೆಂಗಳೂರು ನಗರದ ಆರೋಪಿಯ ಸಹಾಯದಿಂದ ತಮಿಳುನಾಡು ರಾಜ್ಯದ ಇನ್ನುಳಿದ ಆರೋಪಿಗಳು ಸೇರಿ ಕೋರಮಂಗಲ, ಮಡಿವಾಳ, ಎಚ್‍ಎಸ್‍ಆರ್ ಲೇಔಟ್, ಹುಳಿಮಾವು, ಬೊಮ್ಮನಹಳ್ಳಿ, ಆನೇಕಲ್ ಹಾಗೂ ತಮಿಳುನಾಡು ರಾಜ್ಯದ ವಿವಿಧ ಕಡೆ ಕಳವು ಮಾಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ.

ಈ ನಾಲ್ವರು ಸೇರಿಕೊಂಡು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್ ಲಾಕ್ ಮುರಿದು ಕಳ್ಳತನ ಮಾಡಿಕೊಂಡು ಹೋಗಿ ಅವುಗಳ ನಂಬರ್ ಪ್ಲೇಟ್ ತೆಗೆದು ನಂತರ ತಮಿಳುನಾಡಿಗೆ ಸಾಗಿಸಿ ತಿರುವಣ್ಣಮಲೈ ಜಿಲ್ಲೆಯ ಸುತ್ತಮುತ್ತಲ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು.

ಮಾರಾಟದಿಂದ ಬಂದ ಹಣದಿಂದ ಮೋಜುಮಸ್ತಿ ಮಾಡುತ್ತಿದ್ದರು. ಆಗ್ನೇಯ ವಿಭಾಗದ ಉಪಪೊಲೀಸ್ ಆಯುಕ್ತ ಸಿ.ಕೆ.ಬಾಬ ಮತ್ತು ಮಡಿವಾಳ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಲಕ್ಷ್ಮಿ ನಾರಾಯಣ ಅವರ ಮಾರ್ಗದರ್ಶನದಲ್ಲಿ ಇನ್‍ಸ್ಪೆಕ್ಟರ್ ನಟರಾಜ್, ಪಿಎಸ್‍ಐ ಮಹೇಶ್ ಮಲ್ಲಯ್ಯ ಅವರನ್ನೊಳಗೊಂಡ ತಂಡ ಆರೋಪಿಗನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಈ ಆರೋಪಿಗಳು ಧರ್ಮಪುರಿಯ ಅರಣ್ಯ ಅಕಾರಿಯೊಬ್ಬರು ರಾಯಲ್ ಎನ್‍ಫೀಲ್ಡ್ ಬೈಕ್ ಕಳ್ಳತನ ಮಾಡಿರುವುದು ಕಂಡುಬಂದಿದೆ. ಈ ಉತ್ತಮ ಕಾರ್ಯವನ್ನು ನಗರ ಪೊಲೀಸ್ ಆಯುಕ್ತರು ಹಾಗೂ ಪೂರ್ವ ವಿಭಾಗದ ಅಪರ ಪೊಲೀಸ್ ಆಯುಕ್ತರು ಪ್ರಶಂಸಿರುತ್ತಾರೆ.

Articles You Might Like

Share This Article