ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ: ನಾಲ್ವರ ದುರ್ಮರಣ

ತುರುವೇಕೆರೆ, ಮೇ 21- ಅತಿವೇಗ, ಅಜಾಗರೂಕತೆಯಿಂದ ಬಂದ ಬೈಕೊಂದು ಎದುರಿನಿಂದ ಬರುತ್ತಿದ್ದ ಮತ್ತೊಂದು ಬೈಕ್‍ಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸವಾರರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಘಟನೆ ತುರುವೇಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ  ಸಂಭವಿಸಿದೆ.

ಮೃತರನ್ನು ರಂಗನಾಥ, ಶಶಿ, ಭೂತೇಶ್ ಎಂದು ಗುರುತಿಸಲಾಗಿದ್ದು, ಮತ್ತೊಬ್ಬರ ಹೆಸರು ಸದ್ಯಕ್ಕೆ ತಿಳಿದುಬಂದಿಲ್ಲ. ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ನವೀನ್ ಎಂಬುವವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಗುಬ್ಬಿ ತಾಲ್ಲೂಕು, ಸಿಎಸ್ ಪುರ ಹೋಬಳಿಯ ಕಂಬಯ್ಯನಪಾಳ್ಯದ ರವೀಶ್ ಮತ್ತು ರಂಗನಾಥ್ ಸ್ನೇಹಿತರಾಗಿದ್ದು, ಇವರಿಬ್ಬರು ಜಲದಿಗೆರೆ ದೇವಸ್ಥಾನಕ್ಕೆ ತೆರಳಿ ಪೂಜೆ ಮುಗಿಸಿಕೊಂಡು ನಂತರ ಯಡಿಯೂರು ದೇವಾಲಯಕ್ಕೆ ಹೋಗಿ ಊರಿಗೆ ವಾಪಸ್ ಬೈಕ್‍ನಲ್ಲಿ ಮರಳುತ್ತಿದ್ದರು.

ತುರುವೇಕೆರೆ ತಾಲ್ಲೂಕು ಮಾಯಸಂದ್ರ ಹೋಬಳಿ ಶೆಟ್ಟಿ ಗೊಂಡನಹಳ್ಳಿ ಬಳಿ ಸಿಎಸ್ ಪುರ ಕಡೆಯಿಂದ ಅತಿ ವೇಗವಾಗಿ ಬೈಕ್ ಚಾಲನೆ ಮಾಡಿಕೊಂಡು ಬರುತ್ತಿದ್ದ ಸವಾರ ಇವರ ಬೈಕ್‍ಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ಎರಡೂ ಬೈಕ್‍ಗಳಲ್ಲಿದ್ದ ಸವಾರರು ನೆಲಕ್ಕುರುಳಿ ತಲೆಗೆ ಗಂಭೀರ ಪೆಟ್ಟಾದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಬ್ಬಾತ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರವೀಶ್ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಘಟನೆ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ನಾಲ್ವರ ಮೃತದೇಹಗಳನ್ನು ತುರುವೇಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.