ತೌಕ್ತೆ ಚಂಡಮಾರುತ: ರಾಜ್ಯದಲ್ಲಿ ಭಾರೀ ಮಳೆಗೆ ನಾಲ್ಕು ಬಲಿ

ಬೆಂಗಳೂರು- ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಅಬ್ಬರಕ್ಕೆ ಸಿಲುಕಿ ಇದುವರೆಗೆ ನಾಲ್ಕು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 73 ಗ್ರಾಮಗಳ ಮೇಲೆ ಪರಿಣಾಮ ಬೀರಿದೆ ಎಂದು ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ತಿಳಿಸಿದೆ.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ತೌಕ್ತೆ ಚಂಡಮಾರುತ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೂ ಅಪ್ಪಳಿಸಲಿದ್ದು ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಚಂಡಮಾರುತದ ಪರಿಣಾಮವಾಗಿ ಭಾರೀ ಮಳೆ ಮಂಗಳೂರಿನಾದ್ಯಂತ ಸುರಿಯುತ್ತಿದೆ. ರಾಜ್ಯ ಹವಾಮಾನ ಇಲಾಖೆ ಇನ್ನು ಮೂರು ದಿನಗಳ ಕಾಲ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಿದೆ. ರಕ್ಷಣೆಗೆ ಜಿಲ್ಲೆಗೆ ಎನ್ ಡಿಆರ್ ಎಫ್ ತಂಡ ಧಾವಿಸಿದೆ.

ಕಾಪುವಿನಲ್ಲಿ‌ ಕಿರೋಜ್ ಕಂಪೆನಿಗೆ ಸೇರಿದ ಕೋರಂಗಲ ಎಕ್ಸ್ ಪ್ರೆಸ್ ವೆಸಲ್ ಬೋಟ್ ನವಮಂಗಳೂರು ಬಂದರು ಪ್ರವೇಶಕ್ಕೆ ಮೊದಲೇ ಚಂಡಮಾರುತದ ಪ್ರಭಾವಕ್ಕೆ ಸಿಲುಕಿದ ಪರಿಣಾಮ ಅಪಘಾತ ಸಂಭವಿಸಿದೆ‌. ನವ ಮಂಗಳೂರು ಬಂದರು ಪ್ರವೇಶಕ್ಕೆ ಎರಡು ಗಂಟೆಗಳ ಕಾಲವಕಾಶ ನೀಡಿದ್ದು ಅದಕ್ಕೆ ಮೊದಲೇ ಚಂಡ ಮಾರುತದ ಪ್ರತಾಪಕ್ಕೆ ಬಲಿಯಾಗಿದೆ.ನವಮಂಗಳೂರು ಬಂದರು ಬಳಿ ಆಕ್ಯಂರ್ ಹಾಕಿ ನಿಲ್ಲಿಸಿದ್ದ ವೆಸೆಲ್ ಬೋಟ್ ಅಲೆಗಳ ಪ್ರತಾಪಕ್ಕೆ ಸಿಲುಕಿ ಕಾಪು ತೀರಕ್ಕೆ ಬಂದು ತಲುಪಿದೆ. ಈ ಬಗ್ಗೆ ಕರಾವಳಿ ಕಾವಲು ಪಡೆಗೆ ಬೆಳಗ್ಗೆ 8.30 ಕ್ಕೆ ಮಾಹಿತಿ ದೊರಕಿದೆ.

ಕಾಪು ಲೈಟ್ ಹೌಸ್ ಬಳಿಯ ಬಂಡೆಯ ಮೇಲೆ ಸಿಲುಕಿಕೊಂಡಿರುವ ಕೋರಂಗಲ್ ಎಕ್ಸ್ ಪ್ರೆಸ್ ವೆಸೆಲ್ ಬೋಟ್ ನಲ್ಲಿ‌ ಸಿಲುಕಿರುವವರ ರಕ್ಷಣೆಗೆ ಕರಾವಳಿ ಕಾವಲು ಪಡೆ, ಉಡುಪಿ ಜಿಲ್ಲಾ ಪೊಲೀಸ್ ಪಡೆ, ಕೀರೋಸ್ ಕಂಪೆನೆಯ ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಮುಲ್ಲಾ ಖಾನ್ (ಕ್ಯಾಪ್ಟನ್), ಗೌರವ್ ಕುಮಾರ್ (ಸೆಕೆಂಡ್ ಕ್ಯಾಪ್ಟನ್), ಶಾಂತನು ಎ.ವಿ., ರಾಹುಲ್, ದೀಪಕ್, ಪ್ರಶಾಂತ್, ತುಷಾರ್, ಲಕ್ಷ್ಮೀ ನಾರಾಯಣ್, ರೂಡ್ ಅಹಮದ್ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕೀ ರೋಸ್ ಕಂಪೆನಿಯ ಮ್ಯಾನೇಜರ್ ವೇಲು ತಿಳಿಸಿದ್ದಾರೆ.

ಮಲೆನಾಡು ಭಾಗಗಳಲ್ಲಿ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಸೇರಿದಂತೆ ಕೆಲವು ಕಡೆಗಳಲ್ಲಿ 20 ಸೆಂಟಿ ಮೀಟರ್ ಗಳಿಗೂ ಅಧಿಕ ಮಳೆಯಾಗುವ ಸಾಧ್ಯತೆಯಿದೆ. ಕಳೆದ 24 ಗಂಟೆಯಿಂದ ಮೂರು ಕರಾವಳಿ ಜಿಲ್ಲೆಗಳು ಮತ್ತು ಮೂರು ಮಲೆನಾಡು ಜಿಲ್ಲೆಗಳಲ್ಲಿ ಅವ್ಯಾಹತವಾಗಿ ಮಳೆಯಾಗುತ್ತಿದೆ.

ಭಾರತೀಯ ಹವಾಮಾನ ಇಲಾಕೆ ಟೌಕ್ಟೇ ಚಂಡಮಾರುತ ಹಿನ್ನೆಲೆಯಲ್ಲಿ ಮಂಗಳೂರು, ಕಾರವಾರ, ಮಲ್ಪೆ, ಭಟ್ಕಳ, ಹೊನ್ನಾವರ ಹಾಗೂ ಕೇರಳದ ತಿರುವನಂತಪುರಗಳಿಗೆ ಮುನ್ನೆಚ್ಚರಿಕೆ ಘೋಷಿಸಿದೆ. ಮಲ್ಪೆ ಬೀಚ್ ಬಳಿ ಚಂಡಮಾರುತದ ರಭಸಕ್ಕೆ ತೀರದಲ್ಲಿರುವ ಮೀನುಗಾರಿಕೆ ದೋಣಿಗಳು ಹಾನಿಗೊಳಗಾಗಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಇಂದು ಕೂಡ ಮಳೆ ಮುಂದುವರಿದಿದೆ. ಅನೇಕ ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಮನೆಗಳು, ತೆಂಗು, ಕಂಗು ತೋಟಗಳಿಗೂ ನೀರು ನುಗ್ಗಿದೆ, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ.
ಉಡುಪಿ ಜಿಲ್ಲೆಯಲ್ಲಿ ತೌಕ್ತೆ ಚಂಡಮಾರುತದ ಅಬ್ಬರದಿಂದ ಜಿಲ್ಲೆಯಲ್ಲಿ ಈವರಗೆ ಸುಮಾರು 40 ಮನೆಗಳಿಗೆ ಹಾನಿಯಾಗಿದೆ.

ಈಗಾಗಲೇ ಬೈಂದೂರು, ಮರವಂತೆ ಭಾಗದಲ್ಲಿ ಇರುವ ಅಂದಾಜು 75 ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ರಾತ್ರಿಯಿಡೀ ಧಾರಾಕಾರ ಗಾಳಿ, ಮಳೆ ಸುರಿದಿದೆ. ಜಿಲ್ಲೆಯಲ್ಲಿ ಇಂದು ಕೂಡಾ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಮಂಗಳೂರಿನಲ್ಲೂ ಬಿಟ್ಟು ಬಿಟ್ಟು ಮಳೆ ಅಬ್ಬರಿಸುತ್ತಿದೆ. ಸಮುದ್ರದ ಅಲೆಗಳ ಅಬ್ಬರ ಕೂಡಾ ಇನ್ನೂ ಕಡಿಮೆಯಾಗಿಲ್ಲ. ಭಾರೀ ಗಾತ್ರದ ಅಲೆಗಳಿಂದ ತೀರ ಪ್ರದೇಶದಲ್ಲಿ ಆತಂಕ ಮುಂದುವರೆದಿದೆ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನಲ್ಲಿ ಭಾರಿ ಮಳೆಯಾಗುತ್ತಿದೆ. ತಾಲೂಕಿನ ವನ್ನಳ್ಳಿ ಗ್ರಾಮದಲ್ಲಿ ಭಾರೀ ಗಾಳಿ ಬೀಸುತ್ತಿದೆ. ಗಂಟೆಗೆ 60 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರವು ಜೋರಾಗಿದೆ. ಹೀಗಾಗಿ ಸಮುದ್ರ ತೀರದ ಜನರು ಆತಂಕದಲ್ಲಿದ್ದಾರೆ.

ಬೆಳಗಾವಿ ನಗರದಲ್ಲಿ ಬೆಳಿಗ್ಗೆಯಿಂದ ಭಾರಿ ಗಾಳಿ ಮತ್ತು ಜಿಟಿ ಜಿಟಿ ಮಳೆಯಾಗುತ್ತಿದೆ. ಲಾಕ್​ಡೌನ್​ ಹಿನ್ನೆಲೆ ಬೆಳಗ್ಗೆ 10ರವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿತ್ತು. ಆದರೆ ನಿರಂತರವಾಗಿ ಜೋರು ಗಾಳಿ, ಮಳೆ ಹಿನ್ನೆಲೆ ಜನ ಮನೆಯಿಂದ ಹೊರ ಬಂದಿಲ್ಲ. ಇನ್ನು ರಾಮನಗರ ಜಿಲ್ಲೆಯಾದ್ಯಂತ ಮೋಡ ಕವಿದ ವಾತಾವರಣ ಕಂಡುಬಂದಿದೆ. ಜಿಲ್ಲೆಯ ಕೆಲವು ಕಡೆ ತುಂತುರು ಮಳೆಯಾಗಿದೆ.

ಮಡಿಕೇರಿ, ಗೋಣಿಕೊಪ್ಪಲು, ಸಿದ್ದಾಪುರ, ಪೊನ್ನಂಪೇಟೆ, ವಿರಾಜಪೇಟೆ, ನಾಪೋಕ್ಲು, ಭಾಗಮಂಡಲ ಹಾಗೂ ತಲಕಾವೇರಿ ಭಾಗದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಳೆದ ಕೆಲವು ದಿನಗಳಿಂದಲೂ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿತ್ತು. ಈಗ ಚಂಡಮಾರುತದ ಪರಿಣಾಮ ಮತ್ತೆ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯ ಪ್ರಮುಖ ಕಾವೇರಿ ನದಿ ಹಾಗೂ ಹಳ್ಳ-ಕೊಳ್ಳಗಳಲ್ಲಿ ನೀರಿನಮಟ್ಟ ಸ್ವಲ್ಪ ಏರಿಕೆಯಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಗುಡ್ಡಗಾಡು ಪ್ರದೇಶದ ಜನರಲ್ಲಿ ಮತ್ತೆ ಅತಂಕ ಮನೆ ಮಾಡಿದೆ. ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪಗಳು ಸಂಭವಿಸಿದ ಕೊಡಗಿನಲ್ಲಿ ಇದೀಗ ಚಂಡಮಾರುತ ಪರಿಣಾಮದಿಂದಾಗಿ ಜನರಲ್ಲಿ ಅತಂಕ ಮನೆಮಾಡಿದೆ.

ಗಾಳಿ ಹೆಚ್ಚಾಗಿರುವ ಪರಿಣಾಮದಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮರಗಳು ಧರೆಗುರುಳುತ್ತಿದ್ದು, ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗದ ಜನರು ರಾತ್ರಿ ಕತ್ತಲೆಯಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಗೆ ಈಗಾಗಲೇ ಎನ್‍ಡಿಅರ್‍ಎಫ್ ತಂಡ ಅಗಿಮಿಸಿದ್ದು, ಮಳೆ ಅನಾಹುತ ಸಂಭವಿಸುವ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಲು ಈಗಾಗಲೇ ತಯಾರಿ ನಡೆಸುತ್ತಿದ್ದಾರೆ.

ತೌಕ್ತೆ ಚಂಡಮಾರುತದ ಪರಿಣಾಮ ಚಿಕ್ಕಮಗಳೂರಿನಲ್ಲಿ ಇಂದು ಕೂಡ ತುಂತುರು ಮಳೆ ಮುಂದುವರೆದಿದೆ. ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ತುಂತುರು ಮಳೆಜಿಲ್ಲೆಯ ಕೊಟ್ಟಿಗೆಹಾರ, ಚಾರ್ಮಾಡಿ ಘಾಟ್, ಬಾಳುರು, ನೀಡುವಾಳೆ, ಗಬಗಲ್, ಕೆಳಗೂರು, ಜಾವಳಿ, ಸುಂಕಸಾಲೆ, ಬಾರತಿ ಬೈಲ್, ಸಬ್ಬೆನಹಳ್ಳಿ, ಹೊರಟ್ಟಿ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ, ಜಯಪುರ, ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗುತ್ತಿದೆ. ಬೆಳ್ಳಂಬೆಳಗ್ಗೆ ಜಿಟಿಜಿಟಿ ಮಳೆ ಹಿನ್ನೆಲೆ ರಸ್ತೆಗಿಳಿಯಲು ಜನರು ಹಿಂದೆಟು ಹಾಕುತ್ತಿದ್ದಾರೆ. ಜಿಲ್ಲಾದ್ಯಂತ ಮಂಜು ಮುಸುಕಿದ ವಾತಾವರಣವಿದ್ದು, ಚಳಿಯ ವಾತಾವರಣ ನಿರ್ಮಾಣವಾಗಿದೆ.ಜಿಲ್ಲೆಯಲ್ಲಿ ಎರಡು ದಿನ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಲೆನಾಡು ಭಾಗದ ಜನರು ಎಚ್ಚರದಿಂದ ಇರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.

#ಮಾಹಿತಿ ಪಡೆದ ಸಿಎಂ

ಕರಾವಳಿ ಭಾಗದಲ್ಲಿ ‘ತೌಕ್ತೆ’ ಚಂಡಮಾರುತದಿಂದ ಉಂಟಾಗಿರುವ ಹಾನಿ‌ ಮತ್ತು ಸದ್ಯದ ಪರಿಸ್ಥಿತಿಯ ಬಗ್ಗೆ ‌ಆ ಭಾಗದ ಜಿಲ್ಲಾಧಿಕಾರಿಗಳಿಂದ ಭಾನುವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾಹಿತಿ ಪಡೆದರು. ಚಂಡಮಾರುತದಿಂದ ಹಾನಿಗೆ ಒಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಪರಿಹಾರ ಹಾಗು ರಕ್ಷಣಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಸಚಿವರುಗಳಿಗೆ ಕರೆ ಮಾಡಿ ಸೂಚನೆ ನೀಡಿದರು.

‘ರಾಜ್ಯ ಸರ್ಕಾರದಿಂದ ಏನೇ ತುರ್ತು ನೆರವು ಬೇಕಿದ್ದರೂ ಸಂಬಂಧಪಟ್ಟ ಸಚಿವರುಗಳಿಗೆ ಕರೆ ಮಾಡಿ ತಿಳಿಸಿ. ಅಥವಾ ನೇರವಾಗಿ ನನಗೆ ಕರೆ ಮಾಡಿ. ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಿ’ ಎಂದೂ ಮುಖ್ಯಮಂತ್ರಿ ಸಲಹೆ ನೀಡಿದರು.