ವಾಹನಗಳ ಹ್ಯಾಂಡ್‍ಲಾಕ್ ಮುರಿದು ಕಳವು ಮಾಡುತ್ತಿದ್ದ ನಾಲ್ವರು ಸೆರೆ

Social Share

ಬೆಂಗಳೂರು, ಫೆ.15- ದ್ವಿಚಕ್ರ ವಾಹನಗಳ ಹ್ಯಾಂಡ್‍ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ ನಾಲ್ವರು ಅಂತರ್ ರಾಜ್ಯ ಬೈಕ್ ಕಳ್ಳರನ್ನು ಕೋಣನಕುಂಟೆ ಠಾಣೆ ಪೊಲೀಸರು ಬಂಧಿಸಿ 9 ಲಕ್ಷ ರೂ. ಮೌಲ್ಯದ 18 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಬನ್ನೇರುಘಟ್ದ ಅರಕೆರೆಯ ಲಕ್ಷ್ಮೀಔಟ್ ನಿವಾಸಿಗಳಾದ ಶ್ರೀನಿವಾಸ(25), ವಿಕ್ರಮ್ ಕುಮಾರ್(23), ಸಲೀಂ(21) ಮತ್ತು ತಮಿಳುನಾಡು ಮೂಲದ ಬಸಪ್ಪ(22) ಬಂಧಿತ ಆರೋಪಿಗಳು.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪಿನಗರ 8ನೆ ಹಂತ, ಜಂಬೂಸವಾರಿ ದಿಣ್ಣೆ-ಕೊಟ್ಟಿಗೆರೆ ರಸ್ತೆಬಸ್ ನಿಲ್ದಾಣದ ಬಳಿಯಿರುವ ಖಾಲಿ ಜಾಗದ ಬಳಿ ಫೆ.6ರಂದು ರಾತ್ರಿ 11.30ರ ಸುಮಾರಿನಲ್ಲಿ ಐದು ಮಂದಿ ಮಾರಕಾಸ್ತ್ರಗಳನ್ನಿಟ್ಟುಕೊಂಡು ದರೋಡೆಗೆ ಸಿದ್ಧತೆ ಮಾಡಿಕೊಂಡು ಹೊಂಚು ಹಾಕುತ್ತಿದ್ದರು.
ಈ ಬಗ್ಗೆ ಕೋಣನಕುಂಟೆ ಠಾಣೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿದೆ. ತಕ್ಷಣ ಇನ್ಸ್‍ಪೆಕ್ಟರ್ ನಂಜೇಗೌಡ, ಸಬ್ ಇನ್ಸ್‍ಪೆಕ್ಟರ್‍ಗಳಾದ ವಿನಯ್, ಅರುಣ್‍ಕುಮಾರ್‍ಮತ್ತು ಸಿಬ್ಬಂದಿ ತಂಡ ಕಾರ್ಯಾಚರಣೆ ಕೈಗೊಂಡು ನಾಲ್ವರನ್ನು ಬಂಸುವಲ್ಲಿ ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಆರೋಪಿ ಜಗದೀಶ ಅಲಿಯಾಸ್ ಗಾಂಜಾ ಜಗ್ಗ ಎಂಬಾತ ಪರಾರಿಯಾಗಿದ್ದು , ಶೋಧ ಮುಂದುವರೆದಿದೆ.
ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಸುಮಾರು 2 ವರ್ಷಗಳಿಂದ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹೊಂಚು ಹಾಕಿ ಮನೆಗಳ ಮುಂದೆ , ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ 15 ಹೊಂಡಾ ಡಿಯೋ, 2 ಸುಜುಕಿ ಆಕ್ಸಿಸ್, ಹೊಂಡಾ ಆಕ್ಟಿವಾ ದ್ವಿಚಕ್ರ ವಾಹನಗಳ ಹ್ಯಾಂಡ್‍ಲಾಕ್‍ಗಳನ್ನು ಮುರಿದು ಕಳ್ಳತನ ಮಾಡಿದ್ದಾಗಿ ಬಾಯ್ಬಿಟ್ಟಿ ದ್ದಾರೆ.
ಈ ಬೈಕ್‍ಗಳನ್ನು ಆರೋಪಿ ಬಸಪ್ಪನಿಂದ ಪರಿಚಯಸ್ಥರಿಗೆ ಮಾರಾಟ ಮಾಡಿಸಿ ಬಂದ ಹಣವನ್ನು ಆರೋಪಿಗಳು ಮೋಜು ಮಸ್ತಿಗೆ ಬಳಸಿಕೊಳ್ಳುತ್ತಿದ್ದುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ. ಕಳ್ಳತನ ಮಾಡಿದ ವಾಹನಗಳನ್ನು ಮಾರಾಟ ಮಾಡುವುದು ಕಷ್ಟವಾಗುತ್ತಿದ್ದರಿಂದ ಸುಲಭವಾಗಿ ಹಣ ಗಳಿಸುವ ದುರುದ್ದೇಶದಿಂದ ದರೋಡೆಗೆ ಹೊಂಚು ಹಾಕುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಆರೋಪಿಗಳ ಬಂಧನದಿಂದ ಕೋಣನಕುಂಟೆ ಪೊಲೀಸ್ ಠಾಣೆಯ 6 ಪ್ರಕರಣ, ಪುಟ್ಟೇನಹಳ್ಳಿ 5, ಹುಳಿಮಾವು2, ಜೆಪಿನಗರ 2 ಹಾಗೂ ಮೈಕೋ ಲೇಔಟ್, ಬೇಗೂರು ಹಾಗೂ ಬಂಜೇಪಾಳ್ಯ ಪೊಲೀಸ್ ಠಾಣೆಯ ತಲಾ ಒಂದು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

Articles You Might Like

Share This Article