ಪೆನ್ಸಿಲ್ವೇನಿಯಾದ 4 ವಿವಿ ಗಳ ಜತೆ ರಾಜ್ಯದ ನಾಲ್ಕು ವಿವಿ ಒಪ್ಪಂದಕ್ಕೆ ಸಹಿ

Social Share

ಬೆಂಗಳೂರು: ಅಮೆರಿಕದ ಪೆನ್ಸಿಲ್ವೇನಿಯಾ ಪ್ರಾಂತ್ಯದ ಹಲವು ವಿ.ವಿ.ಗಳೊಂದಿಗೆ ಬೆಂಗಳೂರು ನಗರ, ಬೆಂಗಳೂರು, ಮಂಗಳೂರು ಮತ್ತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಅವರ ಸಮ್ಮುಖದಲ್ಲಿ ಮಂಗಳವಾರ ಶೈಕ್ಷಣಿಕ ಒಡಂಬಡಿಕೆಗಳಿಗೆ ಅಂಕಿತ ಹಾಕಿದವು.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರಾಜ್ಯದ ನಾಲ್ಕೂ ವಿ.ವಿ.ಗಳ ಕುಲಪತಿಗಳು, ಪೆನ್ಸಿಲ್ವೇನಿಯಾ ಸ್ಟೇಟ್ ಸಿಸ್ಟಂ ಆಫ್ ಹೈಯರ್ ಎಜುಕೇಶನ್ ನಿಯೋಗದ ಸದಸ್ಯರು ಉಪಸ್ಥಿತರಿದ್ದರು. ಒಡಂಬಡಿಕೆಯ ಬಳಿಕ ನಿಯೋಗದ ಸದಸ್ಯರು ಬೆಂಗಳೂರು ವಿವಿ ಇರುವ ಜ್ಞಾನಭಾರತಿ ಕ್ಯಾಂಪಸ್ ವೀಕ್ಷಿಸಿದರು.

ಉನ್ನತ ಶಿಕ್ಷಣ ಸುಧಾರಣೆಯ ಅಂಗವಾಗಿ ರೂಪ ಪಡೆದಿರುವ ಈ ಉಪಕ್ರಮದ ಅಂಗವಾಗಿ ಬೆಂಗಳೂರು ನಗರ, ಬೆಂಗಳೂರು ಮತ್ತು ಮಂಗಳೂರು ವಿ.ವಿ.ಗಳು ಪೆನ್ಸಿಲ್ವೇನಿಯಾದ ಕಾಮನ್ವೆಲ್ತ್, ಇಂಡಿಯಾನಾ ಮತ್ತು ಕಟ್ಜ್ ಟೌನ್ ವಿ.ವಿ.ಗಳ ಜತೆ ಒಪ್ಪಂದ ಮಾಡಿಕೊಂಡಿವೆ. ಹಾಗೆಯೇ ವಿಟಿಯು ಅಲ್ಲಿನ‌ ಮಿಲ್ಲರ್ಸ್ವಿಲ್ ವಿವಿ ಜತೆ ಒಪ್ಪಂದಕ್ಕೆ ಅಂಕಿತ ಹಾಕಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇದರ ಅನ್ವಯ ಬೆಂಗಳೂರು ನಗರ ವಿ.ವಿ.ಯಲ್ಲಿ ಇಂಗ್ಲಿಷ್, ಕಂಪ್ಯೂಟರ್ ಸೈನ್ಸ್, ಬಿಜಿನೆಸ್ ಅಡ್ಮಿನಿಸ್ಟ್ರೇಶನ್, ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ಮತ್ತು ಸ್ಪೋರ್ಟ್ಸ್ ಸೈಕಾಲಜಿ ವಿಷಯಗಳಲ್ಲಿ ಮತ್ತು ಬೆಂಗಳೂರು ವಿ.ವಿ.ದಲ್ಲಿ ಭೂಗೋಳ ಹಾಗೂ ಜಿಯೋ ಇನ್ಫರ್ಮೇಶನ್ ಸೈನ್ಸ್ ಪದವಿ ಕೋರ್ಸುಗಳ ವಿಭಾಗಗಳಲ್ಲಿ ವಿಚಾರ ವಿನಿಮಯ ನಡೆಯಲಿದೆ. ಇಲ್ಲಿನ ವಿದ್ಯಾರ್ಥಿಗಳು ಆ ದೇಶದ ವಿವಿಗಳಿಗೆ ಹೋಗಿ ವ್ಯಾಸಂಗ ಮಾಡಲು ಅನುಕೂಲವಾಗುವ ಹಾಗೆ ಟ್ವಿನ್ನಿಂಗ್ ಪ್ರೊಗ್ರಾಮ್ ಆರಂಭಿಸುವುದಕ್ಕೂ ಇದು ನೆರವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಹಾಗೆಯೇ ಮಂಗಳೂರು ವಿ.ವಿ.ದಲ್ಲಿ ಸ್ಟ್ರಾಟೆಜಿಕ್ ಕಮ್ಯುನಿಕೇಶನ್ಸ್ ಮತ್ತು ಬಿಜಿನೆಸ್ ಅಡ್ಮಿನಿಸ್ಟ್ರೇಶನ್ ಹಾಗೂ ವಿಟಿಯು ವ್ಯಾಪ್ತಿಯಲ್ಲಿ ಜಿಯೋ ಇನ್ಫರ್ಮೇಶನ್ ಸೈನ್ಸ್ ಡಿಗ್ರಿ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿಚಾರ ವಿನಿಮಯ ಆಗಲಿದೆ ಎಂದು ಅವರು ವಿವರಿಸಿದ್ದಾರೆ.

ಮಿಕ್ಕಂತೆ, ರಾಜ್ಯದ ವಿ.ವಿ.ಗಳಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ಸಂಶೋಧನೆಗಳನ್ನು ಉತ್ತೇಜಿಸಲಾಗುವುದು. ಈ ಮೂಲಕ ಶಿಕ್ಷಣದಲ್ಲಿ ಜಾಗತಿಕ ಗುಣಮಟ್ಟವನ್ನು ತರಲಾಗುವುದು ಎಂದು ಅಶ್ವತ್ಥನಾರಾಯಣ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಕುಲಪತಿಗಳಾದ ಡಾ.ಜಯಕರ್, ಪ್ರೊ.ಲಿಂಗರಾಜ ಗಾಂಧಿ, ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ಪೆನ್ಸಿಲ್ವೇನಿಯಾ ನಿಯೋಗದ ಡಾ. ಪೀಟರ್ ಗಾರ್ಲ್ಯಾಂಡ್, ಡಾ.ಅನಿತಾ ಒಪ್ಪಂದಕ್ಕೆ ಸಹಿ ಹಾಕಿದರು.

ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಪ್ರೊ.ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಆಡಳಿತಾಧಿಕಾರಿ ಡಾ.ತಾಂಡವಗೌಡ ಈ ಸಂದರ್ಭದಲ್ಲಿ ಇದ್ದರು.

Articles You Might Like

Share This Article