ಬೆಂಗಳೂರು, ಫೆ.14- ಕೋಟ್ಯಂತರ ರೂ. ಲೋನ್ ಕೊಡಿಸುವುದಾಗಿ ನಂಬಿಸಿ ಗಾರ್ಮೆಂಟ್ಸ್ ಉದ್ಯಮಿಯಿಂದ ಮುಂಗಡವಾಗಿ 1 ಕೋಟಿ ಹಣ ಪಡೆದು ವಂಚಿಸಿದ್ದ ಐದು ಮಂದಿ ರಾಜ್ಯ ಹಾಗೂ ಅಂತಾರಾಜ್ಯ ಆರೋಪಿಗಳನ್ನು ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 87.73 ಲಕ್ಷ ಹಣವನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಮುಂಬೈ ಮತ್ತು ಮಧ್ಯ ಪ್ರದೇಶ ಮೂಲದ ಐದು ಮಂದಿ ಆರೋಪಿಗಳು ನಗರದ ಐಷಾರಾಮಿ ಹೊಟೇಲ್‍ಗಳಲ್ಲಿ ತಂಗಿ ಲೋನ್ ಕೊಡಿಸುವುದಾಗಿ ನಂಬಿಸುತ್ತಿದ್ದರು. ಮೈಸೂರು ಮೂಲದ ಗಾರ್ಮೆಂಟ್ಸ್ ಉದ್ಯಮಿ ವಿನ್ಸೆಂಟ್ ಎಂಬುವವರಿಗೆ ಗಾರ್ಮೆಂಟ್ಸ್ ಉದ್ಯಮಕ್ಕಾಗಿ 100 ಕೋಟಿ ಲೋನ್ ಕೊಡಿಸುವುದಾಗಿ ನಂಬಿಸಿ ಅವರಿಂದ ಕಮಿಷನ್ ರೂಪದಲ್ಲಿ ಒಂದು ಕೋಟಿ ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದರು.
ನಂತರ ಇವರು ಮೊಬೈಲ್ ಸಂಪರ್ಕಕ್ಕೂ ಸಿಗದೆ, ಲೋನ್ ಕೊಡಿಸದೆ ವಂಚಿಸಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಗ್ನೇಯ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಶ್ರೀನಾಥ್ ಎಂ.ಜೋಷಿ ಮತ್ತು ಎಲೆಕ್ಟ್ರಾನಿಕ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪವನ್ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಠಾಣೆ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ನೇತೃತ್ವದಲ್ಲಿ ಸಬ್‍ಇನ್ಸ್‍ಪೆಕ್ಟರ್ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು.
ಈ ತಂಡ ಆರೋಪಿಗಳ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಐದು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಆರೋಪಿಗಳಿಂದ 22.94 ಲಕ್ಷ ಹಾಗೂ 64.79 ಲಕ್ಷ ಹಣವನ್ನು ಆರೋಪಿಗಳಿಗೆ ಸಂಬಂಸಿದ ಬ್ಯಾಂಕ್ ಖಾತೆಗಳಿಂದ ಫ್ರೀಜ್ ಮಾಡಿಸಿ ಒಟ್ಟು 87.73 ಲಕ್ಷ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಇನ್ನೂ ಎರಡು-ಮೂರು ಕಡೆಗಳಲ್ಲಿ ಈ ರೀತಿಯ ವಂಚನೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಆ ನಿಟ್ಟಿನಲ್ಲಿ ಇನ್ಸ್‍ಪೆಕ್ಟರ್ ಅನಿಲ್‍ಕುಮಾರ್ ಅವರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ.
