ಮನೆ ಬಾಗಿಲಲ್ಲೇ ಉಚಿತವಾಗಿ ಲಭ್ಯವಾಗಲಿವೆ ಜಾತಿ-ಆದಾಯ ಪ್ರಮಾಣ ಪತ್ರ

Social Share

ಬೆಂಗಳೂರು, ಮಾ.9- ಕಂದಾಯ ಇಲಾಖೆಯಿಂದ ನೀಡಲಾಗುವ ಜಾತಿ, ಆದಾಯ ಪ್ರಮಾಣ ಪತ್ರ, ಅಟ್ಲಾಸ್, ಪಹಣಿ ದಾಖಲಾತಿಗಳನ್ನು ಒಂದು ಕವರ್‍ನಲ್ಲಿ ಹಾಕಿ ರಾಜ್ಯದ 45ಲಕ್ಷ ಕುಟುಂಬಗಳಿಗೆ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲು ಮಾರ್ಚ್12 ರಂದು ಕಾರ್ಯಕ್ರಮ ರೂಪಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ಧಾರೆ.
ವಿಧಾನ ಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಭಾಗವಹಿಸಿದ್ದ ಅವರು ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಜೆಡಿಎಸ್ ಶಾಸಕ ಗೋವಿಂದರಾಜು ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಂದಾಯ ಇಲಾಖೆಯಿಂದ 4 ಪುಟಗಳವರೆಗಿನ ಪಹಣಿಗೆ 15ರೂ. ಪ್ರತಿ ಹೆಚ್ಚುವರಿ ಪುಟಕ್ಕೆ 2ರೂ. ನಂತೆ ಮ್ಯುಟೇಷನ್ ಪ್ರತಿಯೊಂದಕ್ಕೆ 25 ರೂ. ಶುಲ್ಕ ಸಂಗ್ರಹಿಸಲಾಗುತ್ತಿದೆ.
2017ರಿಂದ 2022ರವರೆಗೆ 173 ಕೋಟಿ ಶುಲ್ಕ ಸಂಗ್ರಹವಾಗಿದೆ. ಕಂದಾಯ ಇಲಾಖೆಯ ಎಲ್ಲಾ ಸೇವೆಗಳನ್ನು ಉಚಿತವಾಗಿ ನೀಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಆದರೆ ಪ್ರತಿ ಐದು ವರ್ಷಕ್ಕೊಮ್ಮೆ ಕಂದಾಯ ಇಲಾಖೆ ನಾಲ್ಕು ದಾಖಲೆಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡಬೇಕು ಎಂದು ಕಾನೂನಿನಲ್ಲಿದೆ. ಅದನ್ನು ಈ ವರೆಗೂ ಯಾರು ನೋಡಿರಲಿಲ್ಲ. ಇತ್ತೀಚೆಗೆ ತಾವು ಕಲಬುರಗಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸುವಾಗ ಅಲ್ಲಿನ ಕಂದಾಯ ನಿರೀಕ್ಷಿಕರೊಬ್ಬರು ಇದನ್ನು ತಮ್ಮ ಗಮನಕ್ಕೆ ತಂದರು. ಅದನ್ನು ಪರಿಶೀಲಿಸಿ ರಾಜ್ಯಾದ್ಯಂತ ಉಚಿತವಾಗಿ ರೈತರ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ.
ಮಾರ್ಚ್12ರಂದು ಮುಖ್ಯಮಂತ್ರಿಯವರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಎಲ್ಲಾ ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು. ರಾಜ್ಯಾದ್ಯಂತ 719 ಅಟಲ್ ಜನಸ್ನೇಹಿ ಕೇಂದ್ರಗಳಲ್ಲಿ ಕಂದಾಯ ದಾಖಲೆಗಳನ್ನು ವಿತರಣೆ ಮಾಡಲಾಗುತ್ತಿದೆ. ಸರ್ವೇ ಕಾರ್ಯಕ್ಕೆ ಸುಮಾರು ಒಂದು ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ. ಅವನ್ನು ಇತ್ಯರ್ಥ ಪಡಿಸಲು ಈಗಾಗಲೇ 800 ಸರ್ವೇಯರ್‍ಗಳನ್ನು ನೇಮಿಸಲಾಗಿದೆ. ಇನ್ನೂ 800 ಸರ್ವೇಯರ್ ಗಳನ್ನು ನೇಮಿಸಲಾಗುತ್ತಿದೆ ಎಂದರು.
ಸರ್ವೇಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ. ಈ ಮೊದಲು ಜಮೀನಿನ ನಕ್ಷೆಯನ್ನು ಅಧಿಕಾರಿಗಳು ಅಥವಾ ಸಮೀಕ್ಷಾದಾರರು ತಯಾರಿಸಬೇಕು ಎಂಬ ರೂಢಿಯಲ್ಲಿ ಬದಲಾವಣೆ ತರಲಾಗುತ್ತಿದೆ. ಆಸ್ತಿ ಪಾಲು ಅಥವಾ ಇತರ ವೇಳೆ ರೈತರೆ ತಮ್ಮ ಜಮೀನಿನ ನಕ್ಷೆಯನ್ನು ತಯಾರಿಸಿ ಕೊಳ್ಳಬಹುದು. ಅದನ್ನು ಉಪ ನೋಂದಣಿ ಕಚೇರಿಯಲ್ಲಿ ಸಲ್ಲಿಸಬೇಕು. ಅದನ್ನು ಆಧರಿಸಿ ಉಪನೋಂದಣಿ ಕಚೇರಿಯಲ್ಲಿ ಅಪ್ ಲೋಡ್ ಮಾಡಿ, ಆಸ್ತಿ ನೋಂದಣಿ ಮಾಡಿಕೊಡುವ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಎಂದರು.

Articles You Might Like

Share This Article