ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆಗಳಿಗೆ ಬೀಳುತ್ತಾ ಬ್ರೇಕ್!

Social Share

ಬೆಂಗಳೂರು,ಜು.22- ನಗರದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ, ರ‍್ಯಾಲಿ ನಡೆಸಲು ಬ್ರೇಕ್ ಬೀಳುವ ಸಾಧ್ಯತೆಗಳಿವೆ.
ಪ್ರತಿನಿತ್ಯ ಒಂದಿಲ್ಲ ಒಂದು ಪ್ರತಿಭಟನೆ ನಡೆಯುವ ಫ್ರೀಡಂ ಪಾರ್ಕ್ ಸುತ್ತಮತ್ತು ಹಲವಾರು ಕಾಲೇಜುಗಳಿದ್ದು, ಪ್ರತಿಭಟನಾ ಕಾರರ ಕೂಗಾಟ ಕಿರುಚಾಟದಿಂದ ವಿದ್ಯಾರ್ಥಿಗಳು ಪಾಠ ಕೇಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆಯಂತೆ.

ಹೀಗಾಗಿ ಪಾರ್ಕ್ ಸುತ್ತಮುತ್ತ ಇರುವ ಕಾಲೇಜುಗಳ ಆಡಳಿತ ಮಂಡಳಿಯವರು ಕೋರ್ಟ್ ಮೆಟ್ಟಿಲೇರಲು ತೀರ್ಮಾನಿಸಿದ್ದಾರೆ.
ಪಾರ್ಕ್ ಸುತ್ತಮುತ್ತ ಮಹಾರಾಣಿ ಆಟ್ರ್ಸ್, ಮಹಾರಾಣಿ ವಾಣಿಜ್ಯ ಕಾಲೇಜ್, ಹೋಮ್‍ಸೈನ್ಸ್ ಹಾಗೂ ಮ್ಯಾನೇಜ್‍ಮೆಂಟ್ ಕಾಲೇಜುಗಳಿವೆ.

ಈ ನಾಲ್ಕು ಕಾಲೇಜಿನಲ್ಲಿ ಸರಿಸುಮಾರು 4 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮಾತ್ರವಲ್ಲ ಆಗಾಗ ಪರೀಕ್ಷೆಗಳು ನಡೆಯುತ್ತಿರುತ್ತವೆ. ಸಮೀಪದ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನೆ ನಡೆಸುವ ಪ್ರತಿಭಟನಾಕಾರರ ದಿಕ್ಕಾರ ಘೋಷಣೆಗಳಿಂದ ಗಮನವಿಟ್ಟು ಪಾಠ ಆಲಿಸಲು ಸಾಧ್ಯವಿಲ್ಲ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.

ಸಾವಿರಾರು ವಿದ್ಯಾರ್ಥಿಗಳಿಗೆ ಆಗುತ್ತಿ ರುವ ಈ ತೊಂದರೆ ತಪ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಕಾಲೇಜು ಆಡಳಿತ ಮಂಡಳಿ ತೀರ್ಮಾನಿಸಿದೆ. ಪ್ರತಿಭಟನಾಕಾರರು ಮೈಕ್ ಬಳಸಿ ಭಾಷಣ ಮಾಡುವುದರ ಜೊತೆಗೆ ಘೋಷಣೆ ಕೂಗುವುದರಿಂದ ಒಂದೊಂದು ಬಾರಿ ಪಾಠ ಮಾಡಲು ನಮಗೆ ಸಾಧ್ಯವಾಗಿಲ್ಲ. ಹೀಗಾಗಿ ಪಾರ್ಕ್ ಬಳಿ ಪ್ರತಿಭಟನೆಗೆ ಅವಕಾಶ ನೀಡದಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮಹಾರಾಣಿ ಕ್ಲಸ್ಟರ್ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಮಂಜುನಾಥ್ ತಿಳಿಸಿದ್ದಾರೆ.

ನಗರದ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆ ಪ್ರದೇಶಗಳಲ್ಲಿ ಪ್ರತಿಭಟನೆಗೆ ಅವಕಾಶ ನೀಡಬಾರದು ಎಂದು ಉಚ್ಛ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಪ್ರತಿಭಟನೆಗಳಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ನ್ಯಾಯಾಲಯದ ಗಮನಕ್ಕೆ ತರಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಪ್ರತಿಭಟನೆಗಳಿಂದ ವಿದ್ಯಾರ್ಥಿಗಳ ಪಾಠ ಪ್ರವಚನಗಳಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಫ್ರೀಡಂ ಪಾರ್ಕ್ ಆಡಳಿತ ಮಂಡಳಿಯವರು ಭರವಸೆ ನೀಡಿದ್ದಾರೆ.

Articles You Might Like

Share This Article