ಬೆಂಗಳೂರು, ಏ.1- ವಿಶ್ವ ವಿಖ್ಯಾತ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ರಾತ್ರಿ 12.30ಕ್ಕೆ ದ್ರೌಪದಿ ಕರಗ ರಥೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆಯಲಿದೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಈ ಬಾರಿಯ ಕರಗ ಅದ್ದೂರಿಯಾಗಿ ನಡೆಯಲಿದೆ. ಕಳೆದ ಒಂದು ವಾರದಿಂದ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿದ್ದು, ಧರ್ಮರಾಯಸ್ವಾಮಿ ದೇವಾಲಯ ನವ ವಧುವಿನಂತೆ ಕಂಗೊಳಿಸುತ್ತಿದೆ.ಕರಗ ಸಾಗುವ ಮಾರ್ಗದುದ್ದಕ್ಕೂ ರಸ್ತೆ ಸ್ವಚ್ಛತೆ, ಅಗಲೀಕರಣ, ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಅಲಂಕಾರ ಮಾಡಲಾಗಿದೆ.
ಈ ಬಾರಿ ಕೂಡ ಜ್ಞಾನೇಂದ್ರ ಅವರು ಕರಗ ಹೊರುವ ಜವಾಬ್ದಾರಿ ಹೊತ್ತಿದ್ದಾರೆ.ಕರಗ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣ ಮತಾನಾಡಿ ಯಾವುದೇ ಗೊಂದಲ ಇಲ್ಲ. ಕರಗ ಸಂಪ್ರದಾಯದಂತೆ ಮಸ್ತಾನ್ ದರ್ಗಾಕ್ಕೆ ಹೋಗುತ್ತದೆ. ಎಲ್ಲಾ ಧರ್ಮದವರು ಒಂದಾಗಿ ಈ ಉತ್ಸವವನ್ನು ಆಚರಿಸುತ್ತಾರೆ. ಈ ಬಾರಿ ಕೂಡ ಶಾಂತಿಯುತವಾಗಿ ಅದ್ದೂರಿಯಾಗಿ ನಡೆಯಲಿದೆ ಎಂದು ತಿಳಿಸಿದರು.
ರೂಟ್ ಮ್ಯಾಪ್ : ಇಂದು ರಾತ್ರಿ ಕರಗ ತಾಯಿ ಮೆರವಣಿಗೆ ಧರ್ಮರಾಯ ದೇಗುಲ ಪ್ರದಕ್ಷಿಣೆಯಿಂದ ಆರಂಭವಾಗಿ, ಕುಂಬಾರಪೇಟೆ ರಸ್ತೆ , ರಾಜಮಾರ್ಕೆಟ್ ಸರ್ಕಲ್, ಸಿಟಿ ಮಾರ್ಕೆಟ್, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮೂಲಕ ಕಾಟನ್ ಪೇಟೆ, ಮಸ್ತಾನ್ ಸಾಬ್ ದರ್ಗಾ , ಬಳೇಪೇಟೆ, ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಸಾಗಲಿದೆ.
ನಾಳೆ ಬೆಳಗ್ಗೆ 8 ಗಂಟೆಗೆ ಕಬ್ಬನ್ ಪೇಟೆ ಮಾರ್ಗವಾಗಿ ವಾಪಾಸ್ ಧರ್ಮರಾಯಸ್ವಾಮಿ ದೇಗುಲ ಪ್ರವೇಶ ಮಾಡಲಿದೆ.
ಸೆಕ್ಯುರಿಟಿ ವ್ಯವಸ್ಥೆ :ಕರಗ ಮಹೋತ್ಸವಕ್ಕಾಗಿ ಜಿಬಿಎ, ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಸುಮಾರು ಒಂದು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ. ಡಿಸಿಪಿ ನೇತೃತ್ವದಲ್ಲಿ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, 3 ತುಕಡಿಗಳು ಸಹ ನಿಯೋಜಿಸಲಾಗಿದೆ.
ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.ಸಿಎಂ ಹಾಗೂ ಡಿಸಿಎಂ ಕೂಡ ಕರಗ ಉತ್ಸವಕ್ಕೆ ಭಾಗವಹಿಸುವ ಸಾಧ್ಯತೆ ಇದೆ ಎಂದು ಅಧ್ಯಕ್ಷರು ತಿಳಿಸಿದರು.
ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಸಿದ್ಧತೆಗಳು ಜೋರಾಗಿದ್ದು, ಲಕ್ಷಾಂತರ ಭಕ್ತರು ದ್ರೌಪದಿ ಕರಗವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.ಬೆಂಗಳೂರು ಕರಗದ ಸಂಭ್ರಮಕ್ಕೆ ನಗರವೇ ಸಾಕ್ಷಿಯಾಗಲಿದ್ದು, ಸಾಂಸ್ಕೃತಿಕ ಐಕ್ಯತೆಯ ಪ್ರತೀಕವಾಗಿ ಈ ಮಹೋತ್ಸವ ಮತ್ತೊಮ್ಮೆ ಮೆರೆಯಲಿದೆ.
