ಬೆಂಗಳೂರು, ಮಾ.30-ನಾಯಿ ಮರಿಗಳ ದತ್ತು ಶಿಬಿರವನ್ನು ಜಯನಗರದ ಶಾಲಿನಿ ಮೈದಾನದಲ್ಲಿ ಬೆಂಗಳೂರು ದಕ್ಷಿಣ ನಗರ ಪಾಲಿಕೆಯು ಯಶಸ್ವಿಯಾಗಿ ಅಯೋಜಿಸಿತ್ತು. ಈ ಶಿಬಿರದಲ್ಲಿ 10 ಬೀದಿ ನಾಯಿ ಮರಿಗಳಿಗೆ ಹೊಸ ಮನೆಗಳು ದೊರೆತಿವೆ. ಪ್ರಾಣಿಪ್ರಿಯರು ಉತ್ಸಾಹದಿಂದ ಭಾಗವಹಿಸಿ ಗಮನ ಸೆಳೆದರು.
ಪಶುಸಂಗೋಪನಾ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀನಾಥ್ ನೇತೃತ್ವದಲ್ಲಿ, ಆಯುಕ್ತ ಕೆ.ಎನ್. ರಮೇಶ್ ಮಾರ್ಗದರ್ಶನದಲ್ಲಿ ಈ ಶಿಬಿರವನ್ನು ನಡೆಸಲಾಗಿದ್ದು, ಸೂಪರ್‌ಟೇಲ್ಸ್, ಕೇರ್, ವಾಟರ್ ಫಾರ್ ವಾಯ್‌್ಸಲೆಸ್ ಮತ್ತು ಫಿಯಾಪೋ ಸಂಸ್ಥೆಗಳು ಸಹಯೋಗ ನಡೆದ ಈ ದತ್ತು ಶಿಬಿರದ ಪ್ರಮುಖ ಉದ್ದೇಶ ಬೀದಿ ನಾಯಿಗಳಿಗೆ ಸುರಕ್ಷಿತ ಆಶ್ರಯ ಒದಗಿಸುವುದರ ಜೊತೆಗೆ, ನಗರದಲ್ಲಿ ನಾಯಿಗಳ ಸಂಖ್ಯೆಯನ್ನು ನಿಯಂತ್ರಿಸುವುದು ಹಾಗೂ ಜನರ ಮನೋಭಾವವನ್ನು ಬದಲಿಸುವುದಾಗಿದೆ.
ಜನರಿಂದ ಲಭಿಸಿದ ಉತ್ತಮ ಪ್ರತಿಕ್ರಿಯೆಯಿಂದ ಪ್ರೇರಿತರಾದ ಪಾಲಿಕೆ, ಇಂತಹ ದತ್ತು ಶಿಬಿರಗಳನ್ನು ತ್ರೈಮಾಸಿಕವಾಗಿ ನಡೆಸುವ ಯೋಜನೆ ರೂಪಿಸಿದೆ. ಮಾನವೀಯತೆ ಮತ್ತು ಪ್ರಾಣಿಪ್ರೀತಿಯೊಂದಿಗಿನ ಈ ಉಪಕ್ರಮ, ನಗರದಲ್ಲಿ ಮಾನವ ಮತ್ತು ಪ್ರಾಣಿಗಳ ನಡುವೆ ಸಮತೋಲನದ ಸಹಬಾಳ್ವೆಗೆ ದಾರಿಯಿಡುತ್ತಿದೆ ಎಂದು ಪಶುಪಾಲನೆ ಇಲಾಖೆ ಅಧಿಕಾರಿ ಶ್ರೀನಾಥ್ ತಿಳಿಸಿದ್ದಾರೆ.
