ಬೆಂಗಳೂರು, ಮಾ.31- ಯುದ್ಧಗಳ ನೆಪವೊಡ್ಡಿ ಕೇಂದ್ರ ಸರ್ಕಾರವು ದೇಶದಲ್ಲಿ ಉಂಟಾಗುತ್ತಿರುವ ಬೆಲೆ ಏರಿಕೆಯ ಸಮಸ್ಯೆಯನ್ನು ಕಡೆಗಣಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ. ಪಕ್ಷದ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದ ವಿದೇಶಾಂಗ ನೀತಿಯ ವೈಫಲ್ಯಗಳಿಂದಾಗಿ ಬಡ ಜನರ ಬದುಕು ದುಸ್ತರವಾಗಿದೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಿಂದ ಸೌದೆ ಒಲೆಗೆ ಪರಿವರ್ತನೆಯಾಗಬೇಕಾಗಿದೆ. ಅಡುಗೆ ಅನಿಲದ ಕೊರತೆಯಿಂದಾಗಿ ವಿದ್ಯುತ್ ಒಲೆಗಳನ್ನು ಬಳಸಬೇಕಾಗಿದೆ. ರಾಜ್ಯದಲ್ಲಿ ಶೇ. 10ರಷ್ಟು ವಿದ್ಯತ್ ಬೇಡಿಕೆ ಹೆಚ್ಚಾಗಿದೆ. ಸೌದೆ ಲಭ್ಯವಿಲ್ಲದ ನಗರ ಪ್ರದೇಶದಲ್ಲಿ ಅದರ ಬಳಕೆ ಕಷ್ಟವಾಗಿದೆ. ವಾಣಿಜ್ಯ ಬಳಕೆಯ ಗ್ಯಾಸ್‌ನಿಂದ ಕೆಜಿಗೆ 60 ರಿಂದ 115 ರೂ.ಗೆ ಹೆಚ್ಚಳವಾಗಿದೆ. ರೈಲು ಪ್ರಯಾಣ ದರ, ಟೋಲ್ ಶುಲ್ಕವನ್ನು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಬೆಲೆ ಏರಿಕೆಯ ಯುದ್ಧ ಮಾಡುತ್ತಿದೆ ಎಂದು ಹೇಳಿದರು.
ಅಡುಗೆ ಅನಿಲದ ಸಮರ್ಪಕ ಪೂರೈಕೆ ಇಲ್ಲದೆ ಸಾಮಾನ್ಯ ಜನರಿಗೆ ಹಾಗೂ ಹೋಟೆಲ್ ಉದ್ಯಮಕ್ಕೆ ಬಹಳ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ನಮಗೆ ಇಂದು ಸೌದೆ ಭಾಗ್ಯ ನೀಡಿದೆ. ಅಡುಗೆ ಅನಿಲದಿಂದ ಹಿಡಿದು ಪೆಟ್ರೋಲ್, ಡೀಸೆಲ್ ಹಾಗೂ ಇನ್ನಿತರ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಇಂದು ಗಗನಕ್ಕೇರಿದೆ. ಇಂತಹ ಕಷ್ಟದ ದಿನಗಳಲ್ಲಿ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ನಮ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜನರಿಗೆ ಆಸರೆಯಾಗಿವೆ ಎಂದರು.
ಇಂದಿನಿಂದ ಟೋಲ್ ದರ ಕೂಡ ಏರಿಕೆಯಾಗಿದೆ. ಈಗಾಗಲೇ ಪೆಟ್ರೋಲ್ ದರ ಏರಿಕೆಯಿಂದ ತತ್ತರಿಸಿರುವ ಜನರಿಗೆ ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಹೊಸ ಹೊರೆಯನ್ನು ಹೊರಿಸಿದೆ. ಸುಮಾರು 900ಕ್ಕೂ ಹೆಚ್ಚು ಅಗತ್ಯ ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಮೂಲಕ, ಈ ಬಡ ಜನವಿರೋಧಿ ಸರ್ಕಾರವು ಸಾಮಾನ್ಯ ಜನರ ಬದುಕನ್ನು ಮತ್ತಷ್ಟು ಕಷ್ಟಕ್ಕೆ ದೂಡಿದೆ ಎಂದು ಕಿಡಿ ಕಾರಿದರು.
ಸಂಕಷ್ಟದ ಸಮಯದಲ್ಲಿ ಜನರ ಬದುಕನ್ನು ಆರ್ಥಿಕ ಸವಾಲುಗಳಿಂದ ಹೇಗೆ ಮುಕ್ತಗೊಳಿಸಬೇಕು ಎಂಬ ಯೋಜನೆ ರೂಪಿಸಬೇಕಾದ ಕೇಂದ್ರ ಸರ್ಕಾರವು, ಏಪ್ರಿಲ್ ಒಂದರಿಂದಲೇ ವಿವಿಧ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನರನ್ನು ಏಪ್ರಿಲ್ ಫೂಲ್ ಮಾಡಿದೆ. ಈ ಮೂಲಕ ಜನಸಾಮಾನ್ಯರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳಿದೆ ಎಂದು ತರಾಟೆಗೆ ತೆಗೆದುಕೊಂಡರು.
ಮೋದಿಯವರು ಅಚ್ಛೇ ದಿನಗಳು ಬರುತ್ತವೆ ಎಂದು ಹೇಳಿದ್ದರು. ಏನಾಯಿತು ಆ ಭರವಸೆ? ನೀವು ನೀಡಿದ ಆ ಅಚ್ಛೇ ದಿನಗಳು ಈಗ ಎಲ್ಲಿವೆ? ಈಗ ಅಚ್ಛೇ ದಿನಗಳು ಹೋಗಿ ಕಚ್ಚಾ ದಿನಗಳು ಬಂದಿವೆ ಎಂದು ಹೇಳಬೇಕೇ? ಎಂದರು.
