Monday, April 13, 2026
Homeರಾಜ್ಯಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್​​: ಏರಿಕೆಯಾಗುತ್ತಾ ನಂದಿನಿ ಉತ್ಪನ್ನಗಳ ಬೆಲೆ: ಡಿ.ಕೆ.ಸುರೇಶ್‌ ಹೇಳಿದ್ದೇನು..?

ಮಧ್ಯಪ್ರಾಚ್ಯ ಯುದ್ಧದ ಎಫೆಕ್ಟ್​​: ಏರಿಕೆಯಾಗುತ್ತಾ ನಂದಿನಿ ಉತ್ಪನ್ನಗಳ ಬೆಲೆ: ಡಿ.ಕೆ.ಸುರೇಶ್‌ ಹೇಳಿದ್ದೇನು..?

ಬೆಂಗಳೂರು,ಮಾ.30- ಇರಾನ್‌-ಇಸ್ರೇಲ್‌, ಅಮೆರಿಕದ ಯುದ್ಧ ಪರಿಣಾಮದಿಂದಾಗಿ ಅಡುಗೆ ಅನಿಲ ಬಳಕೆಯ ಮೇಲೆ ಕೇಂದ್ರ ಸರ್ಕಾರ ಕಡಿವಾಣ ಹಾಕಿದ್ದು, ಸಹಜವಾಗಿ ಹಾಲು ಹಾಗೂ ನಂದಿನಿ ಉತ್ಪನ್ನಗಳ ಬೆಲೆ ಏರಿಕೆ ಮಾಡಬೇಕಾಗಬಹುದು ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್‌ ಸೂಚ್ಯವಾಗಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ತೈಲ ಸರಬರಾಜಿನಲ್ಲಿ ಸಮಸ್ಯೆಯಿಲ್ಲ. ಆದರೆ ಅಡುಗೆ ಅನಿಲವನ್ನು ಶೇ.55ರಷ್ಟು ಮಾತ್ರ ಬಳಕೆ ಮಾಡಬೇಕು ಎಂಬ ನಿರ್ದೇಶನವಿದೆ. ಶೇಕಡಾ ನೂರರಷ್ಟು ಅಡುಗೆ ಅನಿಲ ಬಳಕೆ ಮಾಡಬೇಕಾದರೆ ಶೇ.35ರಷ್ಟು ಹೆಚ್ಚುವರಿ ಶುಲ್ಕ ಪಾವತಿಸುವಂತೆ ಸೂಚನೆ ನೀಡಲಾಗಿದೆ. ಈ ರೀತಿ ಹೆಚ್ಚುವರಿ ಆರ್ಥಿಕ ಹೊರೆಯಾದಾಗ ಅದರ ಹೊರೆ ಗ್ರಾಹಕರ ಮೇಲೆ ಬೀಳುತ್ತದೆ ಎಂದರು.

ಕೇಂದ್ರ ಸರ್ಕಾರ ಸೂಚ್ಯವಾಗಿ ಅಡುಗೆ ಅನಿಲ ಸಿಲಿಂಡರ್‌ ದರ ಏರಿಕೆಯ ನಿರ್ದೇಶನ ನೀಡಿದೆ. ಹೀಗಾಗಿ ಸಹಜವಾಗಿಯೇ ಹಾಲು ಒಕ್ಕೂಟಗಳು ತೊಂದರೆಗೆ ಸಿಲುಕುತ್ತಿವೆ. ಹಾಲು ಹಾಗೂ ನಂದಿನಿ ಉತ್ಪನ್ನಗಳಿಗೆ ಅಡುಗೆ ಅನಿಲ ಬಳಕೆಯ ಬ್ಯಾಯ್ಲರ್‌ಗಳನ್ನು ಉಪಯೋಗಿಸುತ್ತಿದ್ದೇವೆ. ಎಲೆಕ್ಟ್ರಿಕ್‌ ಹಾಗೂ ಸೋಲಾರ್‌ಶಕ್ತಿಯ ಬಾಯ್ಲರ್‌ಗಳನ್ನು ಬಳಸುತ್ತಿಲ್ಲ. ಒಂದು ವೇಳೆ ಪರ್ಯಾಯ ಬಾಯ್ಲರ್‌ಗಳನ್ನು ಉಪಯೋಗಿಸಬೇಕಾದರೆ ಬದಲಾವಣೆ ಮಾಡಿಕೊಳ್ಳಬೇಕು. ಅದಕ್ಕೆ ಟೆಂಡರ್‌ ಕರೆಯುವುದು ಸೇರಿದಂತೆ ಮತ್ತಿತರ ಕಾರಣಗಳಿಗಾಗಿ ವಿಳಂಬವಾಗಲಿದೆ.

ಬೆಂಗಳೂರಿನಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಎದುರಾಗುತ್ತಿದೆ. ಹೊರಭಾಗದಲ್ಲಿ ಉರುವಲು ಬಾಯ್ಲರ್‌ಗಳ ಬಳಕೆಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಒಂದು ವೇಳೆ ಬೆಲೆ ಏರಿಕೆಯಾದರೆ ಜನರಿಗೆ ಇದರ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ದಾವಣಗೆರೆಯಲ್ಲಿ ಯಾರು ಪ್ರಚಾರ ಮಾಡಲಿ, ಮಾಡದಿರಲಿ ಕಾಂಗ್ರೆಸ್‌‍ ಅಭ್ಯರ್ಥಿ ಗೆಲ್ಲುತ್ತಾರೆ. ಸಚಿವ ಜಮೀರ್‌ ಖಾನ್‌ಗೆ ಹೆಚ್ಚಿನ ಬೇಡಿಕೆ ಇರಬಹುದು. ಅದಕ್ಕಾಗಿ ಕರ್ನಾಟಕದ ಕ್ಷೇತ್ರಗಳಿಗಿಂತಲೂ ಕೇರಳದಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದರು.

ದಾವಣಗೆರೆ ಕ್ಷೇತ್ರಕ್ಕೆ ಕಾಂಗ್ರೆಸ್‌‍ ಪಕ್ಷ ಉತ್ತಮ ಅಭ್ಯರ್ಥಿಗೆ ಟಿಕೆಟ್‌ ನೀಡಿದೆ. ಶಾಮನೂರು ಶಿವಶಂಕರಪ್ಪ ಅವರು ಉತ್ತಮ ನಾಯಕರಾಗಿದ್ದರು. ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭಿವೃದ್ಧಿಗೆ ಟಿಕೆಟ್‌ ನೀಡುವ ಬಗ್ಗೆ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಹೇಳಿದರು.

ಗ್ಯಾರಂಟಿ ಘೋಷಣೆಗಳಿಂದ ಅಭಿವೃದ್ಧಿಗೆ ಕುಂಠಿತವಾಗಿದೆ ಎಂಬ ಟೀಕೆಗಳಿದ್ದರೂ ಇವುಗಳಿಂದ ಬಡವರು, ಕೂಲಿಕಾರ್ಮಿಕರು ನೆಮದಿಯಾಗಿದ್ದಾರೆ. ಆಯಾ ರಾಜ್ಯ ಸರ್ಕಾರಗಳು ತಮ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿದರೆ ಆಯಾ ರಾಜ್ಯದ ಜಿಎಸ್‌‍ಡಿಪಿ, ಜೀವನ ಮಟ್ಟ ಮತ್ತು ಆರ್ಥಿಕ ಚಟುವಟಿಕೆಗಳು ಉತ್ತಮಗೊಳ್ಳುತ್ತಿದೆ. ಕರ್ನಾಟಕದಲ್ಲಿ ಗ್ಯಾರಂಟಿಗಳಿಂದಾಗಿ ಗ್ರಾಮೀಣ ಭಾಗದಲ್ಲಿ ಬಡಜನರು ನೆಮದಿಯಾಗಿದ್ದಾರೆ ಎಂದರು.

ಜಾಗತಿಕ ಯುದ್ಧ ಪರಿಸ್ಥಿತಿಯಿಂದಾಗಿ ಈಗಾಗಲೇ ಹಲವಾರು ಬೆಲೆ ಏರಿಕೆಗಳಾಗಿವೆ. ಪರಿಸ್ಥಿತಿಯ ಲಾಭ ಪಡೆದು ಕೆಲವರು ಉದ್ದೇಶ ಪೂರ್ವಕವಾಗಿ ಬೆಲೆ ಏರಿಕೆ ಮಾಡುತ್ತಿದ್ದಾರೆ. ಪೆಟ್ರೋಲಿಯಂ ಉತ್ಪನ್ನಗಳು ಅದರ ಅವಲಂಬಿತ ಚಟುವಟಿಕೆಗಳು ವ್ಯತ್ಯಯಗೊಳ್ಳುತ್ತವೆ. ಮತ್ತಷ್ಟು ಬೆಲೆ ಏರಿಕೆಯಾಗುತ್ತದೆ. ಸದ್ಯಕ್ಕೆ ಬೇಸಿಗೆ ಆಗಿರುವುದರಿಂದ ರಸಗೊಬ್ಬರದ ಬೆಲೆ ಮತ್ತು ಅಭಾವ ಕಂಡುಬಂದಿಲ್ಲ. ಉತ್ತಮ ಮಳೆಯಾಗಿ ಬಿತ್ತನೆ ಚಟುವಟಿಕೆಗಳು ಗರಿಗೆದರೆ ಸಹಜವಾಗಿ ರಸಗೊಬ್ಬರದ ಬೇಡಿಕೆ ಹೆಚ್ಚಾಗುತ್ತದೆ.

ಬೆಲೆ ಏರಿಕೆಯ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡರಿಂದ ಮೂರು ತಿಂಗಳಿಗಾಗುವಷ್ಟು ರಸಗೊಬ್ಬರದ ದಾಸ್ತಾನಿದೆ. ಆನಂತರ ತೊಂದರೆಯಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು, ದಾಸ್ತಾನಿನ ಮೇಲೆ ನಿಗಾ ಇರಿಸಬೇಕು. ಬಿತ್ತನೆ ಚಟುವಟಿಕೆಗಳು ಮತ್ತು ಬಳಕೆ ಮಾಡುವ ರಸಗೊಬ್ಬರದಲ್ಲಿಯೂ ರೈತರಲ್ಲಿ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.
ನಾಯಕತ್ವ ಬದಲಾವಣೆ ಬಗ್ಗೆ ಸದ್ಯಕ್ಕೆ ಚರ್ಚೆ ಅನಗತ್ಯ ಎಂದು ಇದೇ ವೇಳೆ ಅವರು ಸುದ್ದಿಗಾರರಿಗೆ ತಿಳಿಸಿದರು.

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಹಿಂದಿ ಕಲಿಕೆ ವಿಚಾರವಾಗಿ ರಾಜ್ಯ ಸರ್ಕಾರ ಗ್ರೇಡಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಿರುವುದು ಉತ್ತಮ ನಿರ್ಧಾರ. ಭವಿಷ್ಯದ ದೃಷ್ಟಿಯಿಂದ ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿ ಅನಿವಾರ್ಯ ಎಂದರು. ಬಿಜೆಪಿ ನಾಯಕರು ರಾಜ್ಯ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಂಡರೂ ವಿರೋಧಿಸುವುದೇ ಕೆಲಸವಾಗಿದೆ. ಕೇಂದ್ರದ ನಾಯಕರನ್ನು ಮೆಚ್ಚಿಸಲು ಹಿಂದಿ ಭಾಷೆಯ ಪರವಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ತೋರಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಪ್ರಸ್ತುತ ದಿನಗಳಲ್ಲಿ ಗುಣಮಟ್ಟದ ಕಲಿಕೆ ಅಗತ್ಯವಿದೆ. ಭಾಷಾ ಮಾಧ್ಯಮದ ಆಯ್ಕೆಯು ಪೋಷಕರ ಆಯ್ಕೆಯಾಗಿರಬೇಕು. ತೃತೀಯ ಭಾಷೆಯ ಕಾರಣಕ್ಕಾಗಿ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ ಎಂದರು.
ಐಪಿಎಲ್‌ ಕ್ರಿಕೆಟ್‌ನ ಟಿಕೆಟ್‌ ನೀಡುವಂತೆ ಶಾಸಕರು ಕೇಳಿರುವುದು ತಪ್ಪು. ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತವಾದಾಗ ಏನೇಲ್ಲ ಟೀಕೆ ಮಾಡಿದರು ಎಂಬುದು ಗೊತ್ತಿದೆ. ಆಸಕ್ತಿ ಇರುವವರು ದುಡ್ಡು ಕೊಟ್ಟು ಟಿಕೆಟ್‌ ಖರೀದಿಸಬೇಕು. ಕ್ರಿಕೆಟ್‌ ಸಂಸ್ಥೆಯವರು ಮೊದಲಿನಿಂದಲೂ ಟಿಕೆಟ್‌ ನೀಡುತ್ತಾ ಬಂದಿದ್ದಾರೆ. ಬಿಜೆಪಿಯವರು ಟಿಕೆಟ್‌ ಪಡೆದಿದ್ದಾರೆ. ಕ್ರಿಕೆಟ್‌ ರಾಷ್ಟ್ರೀಯ ಕ್ರೀಡೆಯಲ್ಲ. ಅದೊಂದು ವಾಣಿಜ್ಯ ಕ್ರೀಡೆ. ಜನಪ್ರತಿನಿಧಿಗಳು, ಶಾಸಕರು ಆ ಬಗ್ಗೆ ಹೆಚ್ಚಿನ ಒತ್ತು ನೀಡುವುದು ಸರಿಯಲ್ಲ ಎಂದರು.

ಬೆಂಗಳೂರಿನಲ್ಲಿ ಮತ್ತೆ ಹೆಚ್ಚುವರಿ ಕ್ರೀಡಾಂಗಣಗಳು ನಿರ್ಮಾಣವಾಗಬೇಕೆಂದು ನಾನು ಸಂಸತ್‌ ಸದಸ್ಯನಾಗಿದ್ದಾಗ ಒತ್ತಾಯ ಮಾಡಿದ್ದೆ. ಸರ್ಕಾರ ಅದನ್ನು ಪರಿಗಣಿಸಿದೆ. ಆನೇಕಲ್‌ ಬಳಿ 56 ಎಕರೆಯಲ್ಲಿ, ವಿದ್ಯಾರಣ್ಯಾಪುರಂನ ಶಿವರಾಂ ಕಾರಂತರ ಬಡಾವಣೆಯಲ್ಲಿ 40ರಿಂದ 50 ಎಕರೆ ಹಾಗೂ ಬಿಡದಿ ಬಳಿಯೂ ಜಾಗ ಗುರುತಿಸಿ ಸುಸಜ್ಜಿತ ಕ್ರೀಡಾಂಗಣಗಳು ನಿರ್ಮಾಣವಾಗಲು ಜಾಗ ಮೀಸಲಿಡಲು ಪ್ರಯತ್ನಸುವುದಾಗಿ ತಿಳಿಸಿದರು.

RELATED ARTICLES

Latest News