Tuesday, April 14, 2026
Homeಇದೀಗ ಬಂದ ಸುದ್ದಿಕುಟುಂಬ ರಾಜಕಾರಣ ಬಗ್ಗೆ ಪ್ರತಿಪಕ್ಷಗಳಿಂದ ಪಾಠ ಕಲಿಯಬೇಕಾಗಿಲ್ಲ; ಸಿಎಂ ಸಿದ್ದರಾಮಯ್ಯ

ಕುಟುಂಬ ರಾಜಕಾರಣ ಬಗ್ಗೆ ಪ್ರತಿಪಕ್ಷಗಳಿಂದ ಪಾಠ ಕಲಿಯಬೇಕಾಗಿಲ್ಲ; ಸಿಎಂ ಸಿದ್ದರಾಮಯ್ಯ

ದಾವಣಗೆರೆ,ಏ.1- ಕುಟುಂಬ ರಾಜಕಾರಣದ ವಿಚಾರದಲ್ಲಿ ಪ್ರತಿಪಕ್ಷ ಗಳಿಂದ ಪಾಠ ಕಲಿಯಬೇಕಾದ ಅಗತ್ಯವೇನೂ ಇಲ್ಲ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿ ಪರವಾಗಿ ಪ್ರಚಾರ ಕೈಗೊಳ್ಳುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಬಿ.ಎಸ್‌‍.ಯಡಿಯೂರಪ್ಪ ಮತ್ತು ಅವರ ಮಕ್ಕಳು ರಾಜಕಾರಣದಲ್ಲಿಲ್ಲವೇ? ಹಾಗೆಯೇ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಮಕ್ಕಳು, ಮೊಮಕ್ಕಳು ರಾಜಕಾರಣದಲ್ಲಿಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌‍ನಲ್ಲಿ ಮಾತ್ರ ಕುಟುಂಬ ರಾಜಕಾರಣ ಎಂಬ ಆರೋಪ ಸರಿಯಲ್ಲ. ಎಲ್ಲಾ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಅಸ್ಸಾಂನಲ್ಲಿ ಕಾಂಗ್ರೆಸ್‌‍ ನಾಯಕರನ್ನೇ ಕರೆದುಕೊಂಡು ಹೋಗಿ ಬಿಜೆಪಿಯವರು ಮುಖ್ಯಮಂತ್ರಿ ಮಾಡಿಲ್ಲವೇ? ಎಂದು ಕೇಳಿದರು. ಆರ್ಥಿಕ ಪರಿಸ್ಥಿತಿ ಸುಭದ್ರ: ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಬಜೆಟ್‌ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಸುದೀರ್ಘವಾಗಿ ವಿವರಗಳನ್ನು ಒದಗಿಸಿದ್ದೇನೆ.

ಆದರೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಶ್ವೇತಪತ್ರ ಹೊರಡಿಸಲು ಆಗ್ರಹಿಸಿದ್ದಾರೆ. ಅವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದ್ದರೂ ಇನ್ನೊಬ್ಬರ ತಟ್ಟೆಯ ನೊಣ ಹುಡುಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಯವರು 2014 ರಲ್ಲಿ ಇದ್ದ 53.11 ಲಕ್ಷ ಕೋಟಿ ರೂ. ಸಾಲದ ಪ್ರಮಾಣವನ್ನು ಈಗ 218 ಲಕ್ಷ ಕೋಟಿ ರೂ.ಗೆ ಹೆಚ್ಚಿಸಿದ್ದಾರೆ. ಅವರು ಅಧಿಕಾರಕ್ಕೆ ಬರುವ ಮುನ್ನ ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಎಷ್ಟಿದ್ದವು?, ಈಗ ಎಷ್ಟಿದೆ?, ಬೆಲೆ ಏರಿಕೆಗೆ ಕಾರಣ ಯಾರು? ಎಂದು ಪ್ರಶ್ನಿಸಿದರು. ರಾಜ್ಯದ ಗ್ಯಾರಂಟಿ ಯೋಜನೆಗಳು ಬಡವರಿಗೆ ಅನುಕೂಲವಾಗಿದ್ದು, ಈ ಉಪಚುನಾವಣೆಯಲ್ಲಿ ನಮಗೆ ಅನುಕೂಲವಾಗಲಿದೆ. ಬಿಜೆಪಿಯವರು ಬಡವರ ಗ್ಯಾರಂಟಿ ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದರು ಎಂದರು.

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳಲ್ಲಿ ದೊಡ್ಡ ಅಂತರದಿಂದ ಕಾಂಗ್ರೆಸ್‌‍ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ಈಗಾಗಲೇ ಬಾಗಲಕೋಟೆಯಲ್ಲಿ ಎರಡು ದಿನ ಚುನಾವಣಾ ಪ್ರಚಾರ ನಡೆಸಿದ್ದೇನೆ. ದಾವಣಗೆರೆಯಲ್ಲಿ ಇಂದು ಮತ್ತು ನಾಳೆ ಪ್ರಚಾರ ಮಾಡುತ್ತೇನೆ. ಸರ್ಕಾರದ ಕೆಲಸಗಳು ನಮಗೆ ಸಹಕಾರಿಯಾಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಏ.5 ರಂದು ಜಮೀರ್‌ ಪ್ರಚಾರಕ್ಕೆ : ಕೇರಳ ಚುನಾವಣಾ ಪ್ರಚಾರದಲ್ಲಿರುವ ಸಚಿವ ಜಮೀರ್‌ ಅಹಮದ್‌ ಖಾನ್‌ ಏ.5 ರಂದು ದಾವಣಗೆರೆ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ಏ.6 ಮತ್ತು 7 ರಂದು ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

RELATED ARTICLES

Latest News