Saturday, April 11, 2026
Homeಬೆಂಗಳೂರುತೆರಿಗೆ ವಂಚಕರ ಆಸ್ತಿ GBA ವಶಕ್ಕೆ

ತೆರಿಗೆ ವಂಚಕರ ಆಸ್ತಿ GBA ವಶಕ್ಕೆ

ಬೆಂಗಳೂರು, ಮಾ.30- ದಕ್ಷಿಣ ನಗರ ಪಾಲಿಕೆ ಹಾಗೂ ಪೂರ್ವ ನಗರ ಪಾಲಿಕೆಗಳು ಆಸ್ತಿ ತೆರಿಗೆ ಪಾವತಿಸುವಲ್ಲಿ ವಿಫಲರಾಗಿರುವ ಸುಸ್ತಿದಾರರ ಸ್ವತ್ತುಗಳನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಮುಂದಾಗಿವೆ. ಗ್ರೇಟರ್‌ ಬೆಂಗಳೂರು ಆಡಳಿತ ಕಾಯ್ದೆಯ ಪ್ರಕಾರ, ಪ್ರತಿಯೊಬ್ಬ ಸ್ವತ್ತು ಮಾಲೀಕರೂ ಪ್ರತಿ ವರ್ಷ ಆಸ್ತಿ ತೆರಿಗೆ ಪಾವತಿಸುವುದು ಕಡ್ಡಾಯ. ಆದರೆ, ಹಲವು ಬಾರಿ ನೋಟಿಸ್‌‍, ಬೇಡಿಕೆ ಪತ್ರಗಳು ಹಾಗೂ ಮೊಬೈಲ್‌ ಸಂದೇಶಗಳ ಮೂಲಕ ಸೂಚನೆ ನೀಡಿದರೂ ಕೆಲವು ಮಾಲೀಕರು ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದಾರೆ.ಇದರಿಂದಾಗಿ, ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ ಗುರುತಿಸಲಾದ ಕೆಲವು ಸ್ವತ್ತುಗಳನ್ನು ಹರಾಜು ಪ್ರಕ್ರಿಯೆಗೆ ಒಳಪಡಿಸಲಾಗಿತ್ತು.

ಆದರೆ ಹರಾಜಿನಲ್ಲಿ ಬಿಡ್ಡುದಾರರು ಭಾಗವಹಿಸದ ಹಿನ್ನೆಲೆಯಲ್ಲಿ ಈಗ ಪಾಲಿಕೆಯೇ ಆ ಸ್ವತ್ತುಗಳನ್ನು ಖರೀದಿಸಿ ತನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ಮುಂದಾಗಿವೆ. ಮೊದಲ ಹಂತದಲ್ಲಿ ಬೊಮ್ಮನಹಳ್ಳಿ ವಲಯದ 22 ಹಾಗೂ ಜಯನಗರ ವಲಯದ 30 ಸ್ವತ್ತುಗಳನ್ನು ಪಾಲಿಕೆ ವಶಕ್ಕೆ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಪಾಲಿಕೆ ತನ್ನ ನಿಧಿಯಿಂದ ಮೊತ್ತ ಪಾವತಿಸಿ, ಬಾಕಿ ತೆರಿಗೆ ಕಡಿತಗೊಳಿಸಿದ ನಂತರ ಉಳಿದ ಹಣವನ್ನು ಮೂಲ ಮಾಲೀಕರ ಖಾತೆಗೆ ಜಮಾ ಮಾಡಲಿದೆ.

ಇದೇವೇಳೆ, ಬೆಂಗಳೂರು ಪೂರ್ವ ನಗರ ಪಾಲಿಕೆಯಲ್ಲೂ 51 ಆಸ್ತಿ ತೆರಿಗೆ ಬಾಕಿದಾರರ ಸ್ವತ್ತುಗಳನ್ನು ಪಾಲಿಕೆ ಸುಪರ್ದಿಗೆ ಪಡೆಯಲು ತೀರ್ಮಾನಿಸಲಾಗಿದೆ. ಮಹದೇವಪುರ ಮತ್ತು ಕೆ.ಆರ್‌.ಪುರ ವಲಯಗಳಲ್ಲಿ ಈ ಕ್ರಮ ಜಾರಿಯಾಗಲಿದೆ.ಆದರೆ, ಸ್ವತ್ತು ಮಾಲೀಕರಿಗೆ ಇನ್ನೊಂದು ಅವಕಾಶ ನೀಡಲಾಗಿದೆ.

ಒಂದು ತಿಂಗಳೊಳಗೆ ಬಾಕಿ ತೆರಿಗೆ ಪಾವತಿಸಿದರೆ, ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಕ್ರಮದಿಂದ ವಿನಾಯಿತಿ ದೊರೆಯಲಿದೆ.ನಗರ ಪಾಲಿಕೆಗಳು ಸ್ಪಷ್ಟಪಡಿಸಿರುವಂತೆ, ಆಸ್ತಿ ತೆರಿಗೆ ನಗರ ಅಭಿವೃದ್ಧಿಗೆ ಪ್ರಮುಖ ಆದಾಯ ಮೂಲವಾಗಿದ್ದು, ನಾಗರಿಕರು ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸುವುದು ಅಗತ್ಯವಾಗಿದೆ. ತೆರಿಗೆ ಬಾಕಿದಾರರಿಗೆ ಇದು ಅಂತಿಮ ಎಚ್ಚರಿಕೆ ಎಂದು ನಗರಪಾಲಿಕೆ ಎಚ್ಚರಿಕೆ ನೀಡಿದೆ.

RELATED ARTICLES

Latest News