Tuesday, April 14, 2026
Homeರಾಷ್ಟ್ರೀಯವಿಶ್ವದಲ್ಲೇ ಅತಿದೊಡ್ಡ ಡಿಜಿಟಲ್‌ ಜನಗಣತಿ ನಾಳೆಯಿಂದ ಶುರು

ವಿಶ್ವದಲ್ಲೇ ಅತಿದೊಡ್ಡ ಡಿಜಿಟಲ್‌ ಜನಗಣತಿ ನಾಳೆಯಿಂದ ಶುರು

ನವದೆಹಲಿ, ಮಾ.31- ಹದಿನಾರು ವರ್ಷಗಳ ನಂತರ ಭಾರತದಲ್ಲಿ ಇದೇ ಮೊದಲ ಬಾರಿಗೆ ನಾಳೆಯಿಂದ ಬೃಹತ್‌ ಜನಗಣತಿ ನಡೆಯಲಿದೆ. ರಿಜಿಸ್ಟ್ರಾರ್‌ ಜನರಲ್‌ ಮತ್ತು ಸೆನ್ಸಸ್‌‍ ಕಮಿಷನರ್‌ ಮೃತ್ಯುಂಜಯ್‌ ಕುಮಾರ್‌ ನಾರಾಯಣ್‌ ಅವರು ಇದು ಭಾರತದ ಮೊದಲ ಪೂರ್ಣ ಡಿಜಿಟಲ್‌ ಸೆನ್ಸಸ್‌‍ ( 2027) ಆಗಿರಲಿದೆ ಎಂದು ತಿಳಿಸಿದ್ದಾರೆ.

ಇದು ವಿಶ್ವದಲ್ಲೇ ಅತಿದೊಡ್ಡ ಗಣತಿ ಕಾರ್ಯವಾಗಲಿದೆ. ಭಾರತದಲ್ಲಿ ಇಲ್ಲಿಯವರೆಗೆ 15 ಸೆನ್ಸಸ್‌‍ಗಳು ನಡೆದಿವೆ. ಸ್ವಾತಂತ್ರ್ಯದ ನಂತರ 7 ಸೆನ್ಸಸ್‌‍ ಆಗಿವೆ. ಕಳೆದ ಬಾರಿ ಸೆನ್ಸಸ್‌‍ ನಡೆದದ್ದು 2011ರಲ್ಲಿ. ಸಾಮಾನ್ಯವಾಗಿ ಪ್ರತೀ ದಶಕಕ್ಕೊಮ್ಮೆ ಈ ಕಾರ್ಯ ನಡೆಯುತ್ತದೆ. ಈ ಬಾರಿ ಸ್ವಲ್ಪ ವಿಳಂಬವಾಗಿದೆ. 2027ರಲ್ಲಿ ನಡೆಯಲಿರುವುದು 16ನೇ ಸೆನ್ಸಸ್‌‍ ಆಗಿರುತ್ತದೆ. ಪೂರ್ಣ ಡಿಜಿಟಲ್‌ ವೇದಿಕೆ ಬಳಸಿ ನಡೆಯುವ ಮೊದಲ ಜನಗಣತಿ ಇದು ಎನ್ನುವ ದಾಖಲೆ ಆಗಲಿದೆ.

ಈ ಬಾರಿಯ ಜನಗಣತಿ ಎರಡು ಹಂತದಲ್ಲಿ ನಡೆಯಲಿದೆ. ಮೊದಲ ಹಂತದಲ್ಲಿ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಆಗಲಿದೆ. ಮನೆಗಳ ಸ್ಥಿತಿ, ಸೌಲಭ್ಯ, ಆಸ್ತಿಪಾಸ್ತಿ ಇತ್ಯಾದಿ ಮಾಹಿತಿ ಕಲೆಹಾಕಲಾಗುತ್ತದೆ. ಮೊದಲ ಹಂತದ ಸೆನ್ಸಸ್‌‍ ಏಪ್ರಿಲ್‌ 1ರಿಂದ ಸೆಪ್ಟೆಂಬರ್‌ 30ರವರೆಗೂ ನಡೆಯುತ್ತದೆ. ಎರಡನೇ ಹಂತದಲ್ಲಿ ಜನಗಣತಿ ನಡೆಯಲಿದೆ. ಇಲ್ಲಿ ಜನರ ಸಾಮಾಜಿಕ ಆರ್ಥಿಕ ಹಾಗೂ ಶೈಕ್ಷಣಿಕ ದತ್ತಾಂಶವನ್ನು ಕಲೆಹಾಕಲಾಗುತ್ತದೆ. ಜನರ ಜಾತಿ, ಉಪಜಾತಿ ಇತ್ಯಾದಿ ಮಾಹಿತಿಯನ್ನೂ ಪಡೆಯಲಾಗುತ್ತದೆ.

ಈ ಡಿಜಿಟಲ್‌ ಗಣತಿ ಕಾರ್ಯದಲ್ಲಿ 30 ಲಕ್ಷದಷ್ಟು ಗಣತಿದಾರರು, ಮೇಲುಸ್ತುವಾರಿಗಳು ಮತ್ತು ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ. ಗಣತಿಗೆಂದೇ ಮೊಬೈಲ್‌ ಆ್ಯಪ್‌ಗಳನ್ನು ಅಬಿವೃದ್ಧಿಪಡಿಸಲಾಗಿದೆ. ಗಣತಿದಾರರು ಈ ಆ್ಯಪ್‌ಗಳಲ್ಲಿ ದತ್ತಾಂಶವನ್ನು ತುಂಬಲಿದ್ದಾರೆ. ಹಾಗೆಯೇ, ಜನರು ಸ್ವಯಂ ಆಗಿ ತಮ್ಮ ದತ್ತಾಂಶ ನೀಡಲು ಆನ್‌ಲೈನ್‌‍ ಪೋರ್ಟಲ್‌ವೊಂದು ಇದೆ. ಇದು 16 ಭಾಷೆಗಳಲ್ಲಿರುತ್ತದೆ.ಜನರು ತಮ್ಮ ಹಾಗೂ ತಮ್ಮ ಕುಟುಂಬದವರ ವಿವರವನ್ನು ಆನ್‌ಲೈನ್‌ನಲ್ಲೇ ತುಂಬಬಹುದು. ಆಗ ಒಂದು ಗಣತಿ ಐಡಿ ಸಿಗುತ್ತದೆ. ಮನೆಗಳಿಗೆ ಗಣತಿದಾರರು ಬಂದಾಗ ಈ ಐಡಿಯನ್ನು ಪರಿಶೀಲಿಸಿ, ಮಾಹಿತಿ ದೃಢಪಡಿಸುತ್ತಾರೆ.

ಕರ್ನಾಟಕ, ಮಿಜೋರಾಮ್‌‍, ದೆಹಲಿ, ಗೋವಾ, ಒಡಿಶಾ ಮೊದಲಾದ ಕೆಲ ರಾಜ್ಯಗಳಲ್ಲಿ ಏಪ್ರಿಲ್‌ 1ರಿಂದ 15ರವರೆಗೆ ಸ್ವ ಗಣತಿಗೆ ಕಾಲಾವಕಾಶ ಇರುತ್ತದೆ. ನಂತರ ಏಪ್ರಿಲ್‌ 16ರಿಂದ ಮೇ 15ರವರೆಗೆ ಗಣತಿದಾರರು ಮನೆ ಮನೆಗಳಿಗೆ ತೆರಳಿ ಸೆನ್ಸಸ್‌‍ ಕಾರ್ಯ ಮಾಡಲಿದ್ದಾರೆ.

ಇತರ ಕೆಲ ರಾಜ್ಯಗಳಲ್ಲಿ ಏಪ್ರಿಲ್‌ 16ರಿಂದ ಆರಂಭವಾಗಿ ಮೇ 30ರವರೆಗೂ ಗಣತಿ ಕಾರ್ಯ ನಡೆಯಲಿದೆ.ಸರ್ಕಾರ ಈ ಗಣತಿ ಯೋಜನೆಗೆ 11,718.24 ಕೋಟಿ ರೂ ಹಂಚಿಕೆ ಮಾಡಿದೆ. 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಎಲ್ಲಾ ನಗರ, ಪಟ್ಟಣ, ಗ್ರಾಮಗಳಲ್ಲಿ ಸರ್ವೆ ಮಾಡಲಾಗುತ್ತದೆ.

RELATED ARTICLES

Latest News