ಬೆಂಗಳೂರು, ಮಾ.31- ಪ್ರೀತಿಸಿ ಮದುವೆಯಾಗಿದ್ದ ಅಂತರ್ ಧರ್ಮೀಯ ಟೆಕ್ಕಿಗಳು ದುರಂತ ಅಂತ್ಯ ಕಂಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಟೆಕ್ಕಿಗಳನ್ನು ಭಾನುಚಂದ್ರರೆಡ್ಡಿ (34) ಹಾಗೂ ಅವರ ಪತ್ನಿ ಸಹಿದಾ ಸಿರಾಜ್ (31) ಎಂದು ಗುರುತಿಸಲಾಗಿದೆ. ಇವರಿಬ್ಬರೂ ತೆಲಂಗಾಣದ ಹೈದರಾ ಬಾದ್ ಮೂಲದವರು.
ಭಾನುಚಂದ್ರರೆಡ್ಡಿ ಅಮೆರಿಕದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರೆ ಸಹಿದಾ ಕೂಡ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು, ನಗರದ ಪ್ರತಿಷ್ಠಿತ ಟೆಕ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರಿಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು ಮತ್ತು ಅಂತರ್‌ಧರ್ಮೀಯರಾದ್ದರಿಂದ ಅವರು ಮದುವೆಯಾಗಿದ್ದನ್ನು ಪೋಷಕರಿಂದ ಮುಚ್ಚಿಟ್ಟಿದ್ದರು.
ಥಣಿಸಂದ್ರ ಮುಖ್ಯರಸ್ತೆಯ ಭಾರತಿಸಿಟಿಯಲ್ಲಿರುವ ನಿಕಿಹೋಮ್ ಅಪಾರ್ಟ್‌ಮೆಂಟ್‌ನ 8ನೇ ಮಹಡಿಯ ಫ್ಲಾಟ್‌ನಲ್ಲಿ ಕಳೆದ ಆರು ತಿಂಗಳಿನಿಂದ ವಾಸವಾಗಿದ್ದರು. ಕಳೆದ ಆರು ತಿಂಗಳ ಹಿಂದೆ ಎಐ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಕೆಲಸ ಕಳೆದುಕೊಂಡಿದ್ದ ಭಾನುಚಂದ್ರರೆಡ್ಡಿ ಭಾರತಕ್ಕೆ ಮರಳಿ ಇದೇ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದರು. ಬೇರೆಲ್ಲೂ ಕೆಲಸ ಸಿಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಅವರು ನೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ಸಹಿದಾ ಅವರು ತಮ್ಮ ಕುಟುಂಬಸ್ಥರನ್ನು ನೋಡಲು ಹೈದರಾಬಾದ್‌ಗೆ ತೆರಳಿದ ಸಂದರ್ಭದಲ್ಲಿ ಭಾನುಚಂದ್ರರೆಡ್ಡಿ ತಮ್ಮ ಫ್ಲಾಟ್‌ನಲ್ಲಿ ಒಬ್ಬರೇ ಇದ್ದ ಅವರು ತಮ್ಮ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದರು. ಇತ್ತ ನಿನ್ನೆ ಹೈದರಾಬಾದ್‌ನಿಂದ ನಗರಕ್ಕೆ ಆಗಮಿಸಿ ಮನೆಗೆ ಬಂದು ನೋಡಿದಾಗ ಪತಿ ಆತಹತ್ಯೆ ಮಾಡಿಕೊಂಡಿರುವುದನ್ನು ಕಂಡು ಆಘಾತಗೊಂಡಿದ್ದಾರೆ.
ಈ ನೋವಿನಲ್ಲೇ ಅಪಾರ್ಟ್‌ಮೆಂಟ್‌ನ 11ನೇ ಮಹಡಿಗೆ ತೆರಳಿ ಅಲ್ಲಿಂದ ಕೆಳಗೆ ಬಿದ್ದ ಆತಹತ್ಯೆಗೆ ಶರಣಾಗಿದ್ದಾರೆ. ಘಟನೆ ನಂತರ ಫ್ಲಾಟ್‌ನ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ಇಡೀ ವೃತ್ತಾಂತ ಬೆಳಕಿಗೆ ಬಂದಿದೆ. ಸಹಿದಾ ಅವರು ರಾಜಕೀಯ ನಂಟು ಹೊಂದಿರುವ ಕುಟುಂಬದಿಂದ ಬಂದಿದ್ದು, ಇವರ ಸೋದರ, ಸಹೋದರಿಯರಿಗೆ ಈಗಾಗಲೇ ಮದುವೆಯಾಗಿದ್ದು, ಇವರಿಗೆ ಮದುವೆ ತಯಾರಿಯನ್ನು ಕುಟುಂಬಸ್ಥರು ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಕೊತ್ತನೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
