ಬೆಂಗಳೂರು,ಏ.1- ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ದೊಡ್ಡ ಅಭಿಯಾನವನ್ನು ನಡೆಸುತ್ತೇವೆ ಎಂದು ಕನ್ನಡ ಚಳವಳಿ ಮುಖಂಡರಾದ ಸಾ.ರಾ.ಗೋವಿಂದು ಹಾಗೂ ಕರವೇ ಅಧ್ಯಕ್ಷ ಶಿವರಾಮೇಗೌಡ ತಿಳಿಸಿದ್ದಾರೆ. ಪ್ರೆಸ್‌ಕ್ಲಬ್‌ನಲ್ಲಿಂದು ಮಾತನಾಡಿದ ಅವರು, ಈಗಾಗಲೇ ಪ್ರಾಥಮಿಕ ಶಿಕ್ಷಣದಲ್ಲಿ ಹಿಂದಿ ಭಾಷೆ ಹೇರಿಕೆಯ ವಿರುದ್ಧ ಹೋರಾಟಕ್ಕೆ ರಾಜ್ಯಸರ್ಕಾರ ಸ್ಪಂದಿಸಿದೆ. ಅದಕ್ಕೆ ನಾವು ಅಭಿನಂದನೆ ಸಲ್ಲಿಸುತ್ತೇವೆ.
ಇದೇ ರೀತಿ ಬ್ಯಾಂಕ್‌ಗಳಲ್ಲಿ ಪರಭಾಷಿಗರ ಹಾವಳಿ ಹಾಗೂ ಬ್ಯಾಂಕಿನ ಚಲನ್‌ಗಳು ಸೇರಿದಂತೆ ವಿವಿಧೆಡೆ ಹಿಂದಿ ಬಳಕೆಯಾಗುತ್ತದ್ದು, ಅದನ್ನು ಕೂಡಲೇ ನಿಲ್ಲಿಸಬೇಕು. ಕನ್ನಡ ಭಾಷೆಯಲ್ಲೇ ಎಲ್ಲಾ ವ್ಯವಹಾರಗಳು ನಡೆಯಬೇಕು ಎಂದು ಸಾ.ರಾ.ಗೋವಿಂದು ಹೇಳಿದರು.
ಈಗಾಗಲೇ ಹಲವು ಕೇಂದ್ರ ಸರ್ಕಾರಿ ಕಚೇರಿಗಳಲ್ಲಿ ಹಿಂದಿ ಭಾಷೆಗಳಲ್ಲಿ ವ್ಯವಹಾರಗಳು ನಡೆಯುತ್ತಿವೆ ಮತ್ತು ಕನ್ನಡಿಗರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಮತ್ತು ಉದ್ಯೋಗಿಗಳಿಗೂ ನಾನಾ ರೀತಿಯ ಕಿರುಕುಳ ನೀಡಲಾಗುತ್ತಿದೆ. ಇದರ ವಿರುದ್ಧ ನಾವು ರಾಜಾಜಿನಗರದಿಂದಲೇ ದೊಡ್ಡ ಹೋರಾಟವನ್ನು ಆರಂಭಿಸುತ್ತೇವೆ ಎಂದು ಹೇಳಿದರು.
ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಹಿಂದಿ ಹೇರಿಕೆಗೆ ನಾವು ಬಿಡುವುದಿಲ್ಲ. ಈಗಾಗಲೇ ರೈಲ್ವೆ ಇಲಾಖೆಯಲ್ಲಿಯೂ
ಕೂಡ ಕನ್ನಡಿಗ ಉದ್ಯೋಗಿಗಳನ್ನು ವಂಚಿಸಲಾಗುತ್ತಿದೆ. ಇದರ ವಿರುದ್ಧವೂ ದನಿ ಎತ್ತಿದ್ದೇವೆ. ಮುಂದಿನ ದಿನಗಳಲ್ಲಿ ದೊಡ್ಡ ಅಭಿಯಾನ ನಡೆಸುತ್ತೇವೆ ಎಂದು ಶಿವರಾಮೇಗೌಡ ಹೇಳಿದರು.
ಸದ್ಯದಲ್ಲಿಯೇ ರಾಜಾಜಿನಗರದಿಂದ ಹೋರಾಟಕ್ಕೆ ಚಾಲನೆ ನೀಡಲಾಗುತ್ತಿದ್ದು, ರಾಜ್ಯಾದ್ಯಂತ ಇದು ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವಾರು ಕನ್ನಡಪರ ಸಂಘಟನೆಗಳ ಮುಖಂಡರು ಪಾಲ್ಗೊಂಡಿದ್ದರು.
