ಬೆಂಗಳೂರು,ಏ.1- ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಆಟೋ ಚಾಲಕರ ಮೇಲೆ ಗಂಭೀರವಾಗಿ ತಟ್ಟಿದ್ದು, ಎಲ್‌ಪಿಜಿ ಗ್ಯಾಸ್ ಕೊರತೆ ಹಾಗೂ ದರ ಏರಿಕೆಯಿಂದ ಚಾಲಕರ ತುತ್ತಿನ ಚೀಲಕ್ಕೂ ಹೊಡೆತ ಬಿದ್ದಂತಾಗಿದೆ. ನಗರದಲ್ಲಿ ದಿನದಿಂದ ದಿನಕ್ಕೆ ಆಟೋ ಎಲ್‌ಪಿಜಿ ಗ್ಯಾಸ್ ಸಮಸ್ಯೆ ತೀವ್ರಗೊಳ್ಳುತ್ತಿದ್ದು, ಇಂದು ನಗರದ ಮಲ್ಲೇಶ್ವರಂ, ಯಶವಂತಪುರ, ಜಯನಗರ, ಪದ್ಮನಾಭನಗರ, ವಿಜಯನಗರ, ಮೂಡಲಪಾಳ್ಯ ಸೇರಿದಂತೆ ಮತ್ತಿತರ ಭಾಗಗಳಲ್ಲಿರುವ ಎಲ್‌ಪಿಜಿ ಬಂಕ್‌ಗಳು ಬಂದ್ ಆಗಿದ್ದು, ಪರಿಸ್ಥಿತಿ ಗಂಭೀರವಾಗಿದೆ.
ಮತ್ತೊಂದೆಡೆ ಎಲ್‌ಪಿಜಿ ದರದಲ್ಲೂ ಭಾರೀ ಏರಿಕೆಯಾಗಿದ್ದು, ಲೀಟರ್‌ಗೆ ಸುಮಾರು 100 ರೂ.ಗಳವರೆಗೆ ಹೆಚ್ಚಳವಾಗಿದೆ ಎಂಬ ಆರೋಪಗಳು ಕೇಳಬರುತ್ತಿವೆ. ಇದರಿಂದ ಆಟೋ ಚಾಲಕರ ಆದಾಯ ಕುಸಿದಿದ್ದು, ಬದುಕು ಸಾಗಿಸುವುದು ಕಷ್ಟಕರವಾಗಿದೆ.
ಒಂದು ಕಡೆ ಆಟೋ ಲೋನ್ ಕಟ್ಟೋದಾ?, ಮತ್ತೊಂದು ಕಡೆ ಮನೆ ಬಾಡಿಗೆ, ಸಂಸಾರ, ಮಕ್ಕಳ ಶಾಲೆಯ ಫೀಸ್ ಕಟ್ಟೋದಾ? ಎಂದು ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೂಡಲಪಾಳ್ಯದಲ್ಲಿರುವ ಎಲ್‌ಪಿಜಿ ಬಂಕ್ ಮುಂದೆ ಇಂದು ಬೆಳಿಗ್ಗೆ ಆಟೋಗಳು ಸಾಲುಗಟ್ಟಿ ನಿಂತಿದ್ದವು. ಅದೇ ರೀತಿ ಹಳೇ ಗುಡ್ಡದಹಳ್ಳಿ, ಮಲ್ಲೇಶ್ವರಂ, ಯಶವಂತಪುರ ಸೇರಿದಂತೆ ಮತ್ತಿತರ ಬಂಕ್ ಬಳಿ ಚಾಲಕರು ಎಲ್‌ಪಿಜಿಗಾಗಿ ಜಾತಕಪಕ್ಷಿಗಳಂತೆ ನೆತ್ತಿ ಸುಡುವ ಬಿಸಿಲಿನಲ್ಲೂ ಕಾಯುತ್ತಾ ನಿಂತಿದ್ದ ದೃಶ್ಯಗಳು ಕಂಡುಬಂದವು. ಕೆಲವು ಬಂಕ್‌ಗಳಲ್ಲಿ ನೋ ಸ್ಟಾಕ್ ಎಂಬ ಬೋರ್ಡ್‌ಗಳನ್ನು ಹಾಕಿದ್ದು ಚಾಲಕರು, ಬಂಕ್ ಮಾಲೀಕರು ಮತ್ತು ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ನಡೆಸಿದ ಪ್ರಸಂಗಗಳು ನಡೆದವು.
ಸ್ಟಾಕ್ ಇಲ್ಲ, ಸ್ಟಾಕ್ ಬಂದರೆ ಕೊಡೋಕೆ ನಮಗೇನಂತೆ ? ಎಂದು ಬಂಕ್ ಮಾಲೀಕರು ತಿಳಿಸಿದರೂ ಸಹ ಕೆಲ ಆಟೋ ಚಾಲಕರು ವಾಗ್ವಾದಕ್ಕೆ ಇಳಿದು ಪ್ರತಿಭಟನೆ ಕೂಡಾ ನಡೆಸಿದರು. ಈ ನಡುವೆ ಕೆಲವು ಬಂಕ್‌ಗಳಲ್ಲಿ ಪೊಲೀಸರು ಮಧ್ಯಪ್ರವೇಶಿಸಿ ಚಾಲಕರನ್ನು ಮನವೊಲಿಸಲು ಹರಸಾಹಸ ಪಡಬೇಕಾಯಿತು. ಪ್ರತೀ ಆಟೋಗೆ 400 ರೂ. ವೌಲ್ಯದ ಎಲ್‌ಪಿಜಿ ಮಾತ್ರ ನೀಡಲಾಗುತ್ತಿದೆ ಎಂಬ ಮಾಹಿತಿ ದೊರೆತಿದ್ದು, ಒಟ್ಟಿನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಆಟೋ ಚಾಲಕರ ಜೀವನ ಕಠಿಣ ಹಂತ ತಲುಪಿದೆ. ಕೂಡಲೇ ಸರ್ಕಾರಗಳು ಕ್ರಮ ಕೈಗೊಳ್ಳಬೇಕೆಂದು ಚಾಲಕರು ಒತ್ತಾಯಿಸಿದ್ದಾರೆ. ಇಲ್ಲವಾದರೆ ಲಾಕ್‌ಡೌನ್‌ನಲ್ಲಿ ಬೆಂಗಳೂರು ತೊರೆದಂತೆ ಈಗಲೂ ಸಹ ರಾಜಧಾನಿ ತೊರೆಯಬೇಕಾಗುತ್ತದೆ ಎಂಬ ಮಾತುಗಳು ಚಾಲಕರ ವಲಯದಲ್ಲಿ ಕೇಳಿಬರುತ್ತಿದೆ.
ಆಟೋರಿಕ್ಷಾಗಳಿಗೆ ಅನಿಲ ಸಮಸ್ಯೆ ಇಲ್ಲ
ದಾವಣಗೆರೆ,ಏ.1-ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಸಮಸ್ಯೆ ಇಲ್ಲ, ಆದರೂ ವಿನಾಕಾರಣ ಆತಂಕಕ್ಕೊಳಗಾಗಿ ಕ್ಯೂ ನಿಲ್ಲಲಾಗುತ್ತಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೋಂದಾಯಿತ ಆಟೋ ರಿಕ್ಷಾಗಳಿಗೆ ಅನಿಲ ಪೂರೈಕೆ ಮಾಡಲಾಗುತ್ತಿದೆ. ಪ್ರತಿದಿನ 3 ಸಾವಿರ ಸಿಲಿಂಡರ್ ಬಳಕೆ ಮಾಡಲಾಗುತ್ತಿದೆ. ಅಷ್ಟೂ ಸಿಲಿಂಡರ್‌ಗಳನ್ನು ಒದಗಿಸಲಾಗುತ್ತಿದೆ. ಹೀಗಾಗಿ ಆಟೋ ರಿಕ್ಷಾದವರು ವಿನಾಕಾರಣ ಆತಂಕಕ್ಕೆ ಒಳಗಾಗಬಾರದು ಎಂದು ಅವರು ಮನವಿ ಮಾಡಿದರು.
ಎಚ್‌ಪಿಸಿಎಲ್, ಬಿಪಿಸಿಎಲ್, ಐಪಿಸಿಎಲ್ ಸಂಸ್ಥೆಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಆದರೆ ಖಾಸಗಿ ಅನಿಲ ಪೂರೈಕೆ ಏಜೆನ್ಸಿಗಳು ದರವನ್ನು ಹೆಚ್ಚಿಸಿರುವುದರಿಂದ ಗೊಂದಲ ಉಂಟಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದು, ಖಾಸಗಿ ಏಜೆನ್ಸಿಗಳು ದರ ಹೆಚ್ಚಳ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ ಎಂದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ದರದಲ್ಲೇ ಅನಿಲ ಹಾಗೂ ತೈಲವನ್ನು ನೀಡಬೇಕು ಎಂದ ಅವರು, ಇಸ್ರೇಲ್-ಇರಾನ್ ನಡುವಿನ ಯುದ್ಧ ಪರಿಸ್ಥಿತಿಯಿಂದಾಗಿ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕೆಲವೊಂದು ವ್ಯತ್ಯಯಗಳಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಕೋರಿದರು.
