ಬೆಂಗಳೂರು, ಏ.1- ಎಲ್ಲರ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಹಾಗೂ ಅನೇಕರ ರಾಜಕೀಯ ಭವಿಷ್ಯಕ್ಕೆ ತೊಡರುಗಾಲು ಹಾಕುವ ವಿಧಾನಸಭೆ ಹಾಗೂ ಲೋಕಸಭಾ ಕ್ಷೇತ್ರಗಳ ಕ್ಷೇತ್ರ ಪುನರ್ ವಿಂಗಡಣೆ ನಡೆಯಲಿದ್ದು, ಕರ್ನಾಟಕದ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 336ಕ್ಕೆ ಏರಿಕೆಯಾಗಲಿದೆ. ಕರ್ನಾಟಕದ ಹಾಲಿ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 224 ಇದ್ದು, ಕ್ಷೇತ್ರ ಪುನರ್ ವಿಂಗಡಣೆ ನಂತರ ಇದರ ಸಂಖ್ಯೆ 336ಕ್ಕೆ ಹೆಚ್ಚಳವಾಗಲಿದೆ. ಇದೇ ರೀತಿ 28 ಲೋಕಸಭಾ ಕ್ಷೇತ್ರಗಳ ಸಂಖ್ಯೆಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ರಾಜ್ಯದಲ್ಲಿ ಸಂಸದರ ಕ್ಷೇತ್ರಗಳ ಸಂಖ್ಯೆ ಕೂಡ 42ಕ್ಕೆ ಹಿಗ್ಗಲಿದೆ.
ಪ್ರತಿ ಒಂದು ಲೋಕಸಭಾ ಕ್ಷೇತ್ರಕ್ಕೆ 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಂತೆ ಪುನರ್ ವಿಂಗಡಣೆ ನಡೆಯಲಿದೆ. ಈಗಾಗಲೇ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ -2023( ನಾರಿ ಶಕ್ತಿ ವಂದನಾ ಅಧಿನಿಯಮ್) ಅಂಗೀಕಾರವಾಗಿದೆ.
ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 336ಕ್ಕೆ ಏರಿಕೆಯಾದರೆ ಮೊದಲ ಬಾರಿಗೆ ವಿಧಾನಸಭೆಯಲ್ಲಿ 110 ಮಹಿಳಾ ಸದಸ್ಯರಿಗೆ ಅವಕಾಶ ಸಿಗಲಿದೆ. (ಇದರಲ್ಲಿ ಪರಿಶಿಷ್ಟ ಜಾತಿಯವರಿಗೆ ಶೇ. 17 , ಮತ್ತು ಪರಿಶಿಷ್ಟ ವರ್ಗದವರಿಗೆ ಶೇ.7 ಸೇರಿದಂತೆ ಶೇ. 24 ರಷ್ಟು ಮೀಸಲಾತಿ ನೀಡಬೇಕು.) ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಒದಗಿಸುವ ಕಾಯ್ದೆಯು ಕ್ಷೇತ್ರ ಪುನರ್ ವಿಂಗಡಣೆ ಜೊತೆಗೆ ಅನುಷ್ಠಾನವಾಗಲಿದೆ.
ಮೂಲಗಳ ಪ್ರಕಾರ ಪಂಚರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಮೇ.4ರಂದು ಪ್ರಕಟಗೊಳ್ಳಲಿದೆ. ಬಳಿಕ ಕೇಂದ್ರದ ಎನ್‌ಡಿಎ ಸರ್ಕಾರ ಮೇ 2 ಇಲ್ಲವೇ 3ನೇ ವಾರದಲ್ಲಿ ಸಂಸತ್ತಿನ ಉಭಯ ಸದನಗಳ ವಿಶೇಷ ಅಧಿವೇಶನ ಕರೆಯಲಿದೆ ಎಂದು ತಿಳಿದುಬಂದಿದೆ.
ಕ್ಷೇತ್ರ ಪುನರ್ ವಿಂಗಡಣೆ ಮಸೂದೆ ಅಂಗೀಕಾರವಾದ ನಂತರ ಆಯೋಗವು ಆಯಾ ವಿಧಾನಸಭೆ ಮತ್ತು ಲೋಕಸಭಾ ಕ್ಷೇತ್ರಗಳ ಗಡಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸಲಿದೆ.
ಹಿಗ್ಗಲಿದೆ ರಾಜಧಾನಿಯ ಕ್ಷೇತ್ರಗಳ ಸಂಖ್ಯೆ
ಕ್ಷೇತ್ರ ಪುನರ್ ವಿಂಗಡಣೆಯಾದರೆ ರಾಜಧಾನಿ ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 48ಕ್ಕೆ ಏರಿಕೆಯಾಗಲಿದೆ. ಬೆಂಗಳೂರಿನಲ್ಲಿ ಪ್ರಸ್ತುತ 28 ವಿಧಾನಸಭಾ ಕ್ಷೇತ್ರಗಳಿದ್ದು, ಹೆಚ್ಚುವರಿಯಾಗಿ 20 ಕ್ಷೇತ್ರಗಳು ಹೊಸದಾಗಿ ಸೇರಲಿವೆ.ಅತಿ ದೊಡ್ಡ ಕ್ಷೇತ್ರಗಳಾಗಿರುವ ರಾಜರಾಜೇಶ್ವರಿನಗರ 3, ಯಶವಂತಪುರ 3, ಬೆಂಗಳೂರು ದಕ್ಷಿಣ 3, ಬೊಮನಹಳ್ಳಿ 2, ಮಹಾದೇವಪುರ 3, ಯಲಹಂಕ 2, ರಾಜಾಜಿನಗರ 2, ಹೆಬ್ಬಾಳ 2, ಶಿವಾಜಿನಗರ 2, ಗಾಂಧಿನಗರ 2 , ಕೆ.ಆರ್.ಪುರಂ 3, ಬ್ಯಾಟರಾಯನಪುರ 2 ಸೇರಿದಂತೆ ಒಟ್ಟು 20 ವಿಧಾನಸಭಾ ಕ್ಷೇತ್ರಗಳು ಸೃಜನೆಯಾಗಲಿವೆ. ಬೆಂಗಳೂರು ಹೊರತುಪಡಿಸಿದರೆ 2ನೇ ಅತಿದೊಡ್ಡ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಪ್ರಸ್ತುತ 18 ವಿಧಾನಸಭಾ ಕ್ಷೇತ್ರಗಳಿದ್ದು, ಹೆಚ್ಚುವರಿಯಾಗಿ 7ರಿಂದ 10 ಕ್ಷೇತ್ರಗಳು ಸೃಷ್ಟಿಯಾಗಲಿವೆ.
ಬೆಳಗಾವಿ ಉತ್ತರ ಮತ್ತು ದಕ್ಷಿಣದ ಜೊತೆಗೆ ಹೆಚ್ಚುವರಿಯಾಗಿ ಪೂರ್ವ ಹಾಗೂ ಪಶ್ಚಿಮ ದೊಡ್ಡ ಕ್ಷೇತ್ರವಾಗಿರುವ ಚಿಕ್ಕೋಡಿ, ರಾಯಭಾಗ, ಕಿತ್ತೂರು ಮತ್ತಿತರ ಕ್ಷೇತ್ರಗಳನ್ನು ವಿಭಜನೆ ಮಾಡುವ ಚಿಂತನೆ ಇದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ವಿಧಾನಸಭಾ ಕ್ಷೇತ್ರಗಳ ಪೈಕಿ ಭಾರೀ ಬದಲಾವಣೆಯಾಗುವ ಸಾಧ್ಯತೆಗಳು ಇವೆ. ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ, ನರಸಿಂಹರಾಜ ಕ್ಷೇತ್ರಗಳಲ್ಲಿ ಹೆಚ್ಚುವರಿಯಾಗಿ 3 ಕ್ಷೇತ್ರಗಳ ಸೃಜನೆ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲೂ ಮತ್ತೊಂದು ಹೊಸ ವಿಧಾನಸಭಾ ಕ್ಷೇತ್ರ ರಚನೆಯಾಗಲಿದೆ. ಮೈಸೂರಿಗೆ ಹೊಂದಿಕೊಂಡಿರುವ ಮಡಿಕೇರಿಯಲ್ಲಿ ಸದ್ಯ 2 ವಿಧಾನಸಭಾ ಕ್ಷೇತ್ರಗಳಿವೆ. ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳ ಜೊತೆ ಹೆಚ್ಚುವರಿಯಾಗಿ ಶನಿವಾರಸಂತೆ, ಪೊನ್ನಂಪೇಟೆ ಕ್ಷೇತ್ರಗಳು ಕೂಡ ಅಸ್ತಿತ್ವಕ್ಕೆ ಬರಲಿವೆ.
ಕಲ್ಪತರು ನಾಡು ತುಮಕೂರಿನಲ್ಲಿ ಪ್ರಸ್ತುತ 10 ವಿಧಾನಸಭಾ ಕ್ಷೇತ್ರಗಳಿದ್ದು, ಕ್ಷೇತ್ರ ಪುನರ್ ವಿಂಗಡಣೆ ನಂತರ 4ರಿಂದ 5 ಕ್ಷೇತ್ರಗಳು ಹೊಸದಾಗಿ ಅಸ್ತಿತ್ವಕ್ಕೆ ಬರಲಿವೆ. ತುಮಕೂರು ನಗರ, ಗ್ರಾಮಾಂತರದ ಜೊತೆಗೆ ತುಮಕೂರು ಉತ್ತರ, ಶಿರಾದಲ್ಲಿ ಕಳ್ಳಂಬೆಳ್ಳ, ಚಿಕ್ಕನಾಯಕನಹಳ್ಳಿಯಲ್ಲಿ ಹುಳಿಯಾರು, ಬೆಳ್ಳಾವಿ, ಹೆಬ್ಬೂರು ರಚನೆಯಾಗಲಿವೆ.
ಶಿವಮೊಗ್ಗದಲ್ಲಿ ಶಿವಮೊಗ್ಗ ನಗರ ಅಸ್ತಿತ್ವ ಕಳೆದುಕೊಳ್ಳಲಿದ್ದು, ಶಿವಮೊಗ್ಗ ಉತ್ತರ, ಶಿವಮೊಗ್ಗ ದಕ್ಷಿಣ, ಶಿವಮೊಗ್ಗ ಗ್ರಾಮಾಂತರ ಬದಲಿಗೆ ಹೊಳೆಹೊನ್ನೂರು, ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ, ಆಯನೂರು, ಹೊಸನಗರ ರಚನೆಯಾಗಲಿವೆ.
ದಾವಣಗೆರೆಯಲ್ಲೂ 3 ಹೆಚ್ಚುವರಿ ಕ್ಷೇತ್ರಗಳು ರಚನೆಯಾಗಲಿವೆ. ಹೊನ್ನಾಳಿ ಜೊತೆಗೆ ತಾಲ್ಲೂಕು ಮಾನ್ಯತೆ ಪಡೆದಿರುವ ನ್ಯಾಮತಿ, ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಸೇರಿದಂತೆ ಇನ್ನೆರಡು ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿದೆ. ಚಿಕ್ಕಮಗಳೂರಿನಲ್ಲೂ ಕ್ಷೇತ್ರ ಪುನರ್ ವಿಂಗಡಣೆ ಪರಿಣಾಮ 5ರಿಂದ 8 ಕ್ಷೇತ್ರಗಳು ಏರಿಕೆಯಾಗಲಿವೆ. ಶೃಂಗೇರಿ ಕ್ಷೇತ್ರದಲ್ಲಿರುವ ನರಸಿಂಹರಾಜಪುರ, ಬಿರೂರು ಮತ್ತು ಅಜ್ಜಂಪುರ ಕ್ಷೇತ್ರಗಳು ರಚನೆಯಾಗಲಿವೆ.ಇದೇ ರೀತಿ ದಕ್ಷಿಣಕನ್ನಡ, ಉತ್ತರಕನ್ನಡ, ಧಾರವಾಡ, ಕಲಬುರಗಿ, ಬಳ್ಳಾರಿ, ರಾಯಚೂರು, ಕೊಪ್ಪಳ, ವಿಜಯಪುರ, ಬೀದರ್, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ ಸೇರಿದಂತೆ ಮತ್ತಿತರ ಜಿಲ್ಲೆಗಳಲ್ಲಿ ಕ್ಷೇತ್ರಗಳ ಸಂಖ್ಯೆ ಹೆಚ್ಚಳವಾಗಲಿದೆ.
42 ಲೋಕಸಭಾ ಕ್ಷೇತ್ರಗಳು: ಇನ್ನು ಲೋಕಸಭಾ ಕ್ಷೇತ್ರಗಳಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹಾಲಿ ಇರುವ 3 ಲೋಕಸಭಾ ಕ್ಷೇತ್ರಗಳ ಜೊತೆಗೆ ಹೆಚ್ಚುವರಿಯಾಗಿ 3 ಕ್ಷೇತ್ರಗಳು ರಚನೆಯಾಗಲಿವೆ. ಇದೇ ಮೊದಲ ಬಾರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬೇರ್ಪಟ್ಟು ರಾಮನಗರ, ಮೈಸೂರಿನಿಂದ ಮಡಿಕೇರಿ, ಚಿಕ್ಕಮಗಳೂರು, ವಿಜಯನಗರ, ಶಿರಾ ಇಲ್ಲವೇ ತಿಪಟೂರು, ಶಿರಿಸಿ, ಸೇರಿದಂತೆ ಒಟ್ಟು ಹೆಚ್ಚುವರಿಯಾಗಿ 12 ಲೋಕಸಭಾ ಕ್ಷೇತ್ರಗಳು ಅಸ್ತಿತ್ವಕ್ಕೆ ಬರಲಿವೆ.
ಹಾಲಿ ವಿಧಾನಸಭಾ ಕ್ಷೇತ್ರಗಳು -224
ಕ್ಷೇತ್ರ ಪುನರ್ ವಿಂಗಡಣೆ ನಂತರ -336
ಹಾಲಿ ಲೋಕಸಭಾ ಕ್ಷೇತ್ರಗಳು -28
ಕ್ಷೇತ್ರ ಪುನರ್ ವಿಂಗಡಣೆ ನಂತರ-42
ಮಹಿಳಾ ಶಾಸಕಿಯರ ಸಂಖ್ಯೆ-110
ಲೋಕಸಭಾ ಕ್ಷೇತ್ರಗಳ ವಿಭಜನೆ
ಬೆಂಗಳೂರು- 6
ತುಮಕೂರು-2
ಕಲಬುರಗಿ-2
ಮೈಸೂರು-2
ಬೆಳಗಾವಿ- 3
