ಬೆಂಗಳೂರು/ನ್ಯೂಯಾಕ್, ಏ. 1- ಜಾಗತಿಕ ಐಟಿ ದೈತ್ಯ ಕಂಪನಿ ‘ಒರಾಕಲ್’ ತನ್ನ ಇತಿಹಾಸದಲ್ಲೇ ಅತ್ಯಂತ ದೊಡ್ಡ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಕಳೆದ ತ್ರೈಮಾಸಿಕದಲ್ಲಿ ಶೇ 95ರಷ್ಟು ನಿವ್ವಳ ಆದಾಯದ ಹೆಚ್ಚಳ ಮತ್ತು ದಾಖಲೆಯ 17.2 ಬಿಲಿಯನ್ ಆದಾಯ ವನ್ನು ಗಳಿಸಿದ್ದರೂ ಸಹ, ಕಂಪನಿಯು ಸುಮಾರು 30,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಇಂತಹ ಆಘಾತಕಾರಿ ಸಂಗತಿ, ಉದ್ಯೋಗಿಗಳಿಗೆ ಬೆಳಿಗ್ಗೆ 6 ಗಂಟೆಗೆ ಇಮೇಲ್ ಕಳುಹಿಸುವ ಮೂಲಕ ವಜಾ ಮಾಡಲಾಗಿದ್ದು, ಇದು ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ.
ವರದಿಗಳ ಪ್ರಕಾರ, ಈ ವಜಾಗೊಳಿಸುವಿಕೆಯಿಂದ ಭಾರತದ ಮೇಲೆ ಹೆಚ್ಚು ಪರಿಣಾಮ ಉಂಟಾಗಿದ್ದು, ಒಟ್ಟು 30,000 ಉದ್ಯೋಗಿಗಳಲ್ಲಿ ಸುಮಾರು 12,000 ಭಾರತೀಯ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಭಾರತದ ಜೊತೆಗೆ ಮೆಕ್ಸಿಕೋ ಕೂಡ ಈ ನಿರ್ಧಾರದಿಂದ ತೀವ್ರವಾಗಿ ಬಾಧಿತವಾಗಿದೆ. ಎಐ ಮೇಲೆ ಬಹತ್ ಹೂಡಿಕೆ: ಒರಾಕಲ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ಡೇಟಾ ಸೆಂಟರ್‌ಗಳ ನಿರ್ಮಾಣಕ್ಕಾಗಿ ಸುಮಾರು 156 ಬಿಲಿಯನ್ ಹೂಡಿಕೆ ಮಾಡುತ್ತಿದೆ. ಈ ಹೊಸ ತಂತ್ರಜ್ಞಾನಕ್ಕೆ ಹಣ ಹೊಂದಿಸಲು ಮಾನವ ಸಂಪನೂಲದ ವೆಚ್ಚವನ್ನು ಕಡಿತಗೊಳಿಸುತ್ತಿದೆ.
ಕಂಪನಿಯ ಮೇಲೆ ಪ್ರಸ್ತುತ 108 ಬಿಲಿಯನ್‌ಗಿಂತಲೂ ಹೆಚ್ಚು ಸಾಲ ಇದೆ. ಸಾಲದಾತರ ಒತ್ತಡ ಮತ್ತು ನಗದು ಹರಿವನ್ನು ನಿರ್ವಹಿಸಲು ಕಂಪನಿಯು ಈ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಲಾಗುತ್ತಿದೆ. ದೊಡ್ಡ ಪ್ರಮಾಣದ ಉದ್ಯೋಗಿಗಳನ್ನೂ ವಜಾಗೊಳಿಸುವಿಕೆಯ ಮೂಲಕ ಸುಮಾರು 8 ಬಿಲಿಯನ್‌ನಿಂದ 10 ಬಿಲಿಯನ್ ಉಳಿತಾಯ ಮಾಡುವ ಗುರಿಯನ್ನು ಒರಾಕಲ್ ಹೊಂದಿದ್ದು, ಈ ಹಣವನ್ನು ಎಐ ಮೂಲಸೌಕರ್ಯ ಮತ್ತು ಎನ್‌ವಿಡಿಯಾ ಚಿಪ್‌ಗಳ ಖರೀದಿಗೆ ಬಳಸಿಕೊಳ್ಳಲು ಕಂಪನಿ ಯೋಜನೆ ರೂಪಿಸಿದೆ.
ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿ ಮತ್ತು ಒರಾಕಲ್ ಸಂಸ್ಥಾಪಕ ಲ್ಯಾರಿ ಎಲಿಸನ್, ಸುಮಾರು 200 ಬಿಲಿಯನ್ ಮೌಲ್ಯದ ಆಸ್ತಿ ಹೊಂದಿದ್ದಾರೆ. ಹವಾಯಿನ್ ದ್ವೀಪ ‘ಲನೈ’ನ ಶೇ. 98 ರಷ್ಟು ಭಾಗವನ್ನು ತಮ ರಜಾ ಕಾಲದ ಮನೆಗಾಗಿ 300 ಮಿಲಿಯನ್‌ಗೆ ಖರೀದಿಸಿರುವ ಇವರ ಶ್ರೀಮಂತಿಕೆ ಒಂದು ಕಡೆಯಾದರೆ, ಕಂಪನಿಯನ್ನು ಕಟ್ಟಲು ಶ್ರಮಿಸಿದ ಸಾವಿರಾರು ಕುಟುಂಬಗಳನ್ನು ಬೀದಿಗೆ ಹಾಕಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.
ಇದು ಕೇವಲ ಒರಾಕಲ್ ಕಥೆಯಲ್ಲ. ಕಳೆದ ಕೆಲವು ವರ್ಷಗಳಲ್ಲಿ ಗೂಗಲ್ (100 ಬಿಲಿಯನ್ ನಗದು ಹೊಂದಿದ್ದರೂ 12,000 ಉದ್ಯೋಗಿಗ ವಜಾ), ಅಮೆಜಾನ್ (27,000 ಉದ್ಯೋಗಿಗಳ ವಜಾ), ಮತ್ತು ಐಬಿಎಂ ಕಂಪನಿಗಳು ಉದ್ಯೋಗಿಗಳ ಬದಲಾಗಿ ಎಐಗೆ ನತ್ತ ಹಾದಿ ಹಿಡಿದಿವೆ. ಕೋಡ್ ಕಲಿಯಿರಿ, ಕೌಶಲ್ಯ ಹೆಚ್ಚಿಸಿಕೊಳ್ಳಿ ಎಂದು ಹೇಳಿದ ಕಂಪನಿಗಳೇ ಈಗ ಮಾನವನ ಸ್ಥಾನದಲ್ಲಿ ಎಐ ಅನ್ನು ಕೂರಿಸುತ್ತಿವುದು ಐಟಿ ವಲಯದಲ್ಲಿ ಆತಂಕ ಮೂಡಿಸಿದೆ. ಒರಾಕಲ್ ಇಷ್ಟೊಂದು ದೊಡ್ಡ ಹೂಡಿಕೆ ಮಾಡುತ್ತಿರುವ ‘ಓಪನ್‌ಎಐ’ ನಂತಹ ಕಂಪನಿಗಳು ಈಗ ಬೇರೆ ಚಿಪ್‌ಗಳತ್ತ ಗಮನ ಹರಿಸುತ್ತಿರುವುದು ಒರಾಕಲ್‌ಗೆ ಹೊಸ ಅಪಾಯವನ್ನು ತಂದೊಡ್ಡಬಹುದು. ಒಂದು ವೇಳೆ ತಂತ್ರಜ್ಞಾನ ಬೇಗನೆ ಹಳೆಯದಾದರೆ ಒರಾಕಲ್ ಮಾಡಿದ ಶತಕೋಟಿ ಡಾಲರ್ ಹೂಡಿಕೆ ವ್ಯರ್ಥವಾಗುವ ಸಾಧ್ಯತೆಯೂ ಇದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
