Tuesday, April 14, 2026
Homeರಾಜ್ಯಪರೀಕ್ಷೆಯ ಅವಧಿಯಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿಗೆ ಪೋಷಕರ ವಿರೋಧ

ಪರೀಕ್ಷೆಯ ಅವಧಿಯಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿಗೆ ಪೋಷಕರ ವಿರೋಧ

ಬೆಂಗಳೂರು, ಏ.1- ಶಾಲೆಯ ಅವಧಿ, ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಶಿಕ್ಷಕರಿಗೆ ಜನಗಣತಿ ತರಬೇತಿ ನೀಡುವುದು ಬೇಡ. ಬೇಸಿಗೆ ರಜೆಯ ಸಂದರ್ಭದಲ್ಲಿ ತರಬೇತಿ ನೀಡಲಿ ಎಂದು ಪೋಷಕರು ಒತ್ತಾಯಿಸಿದ್ದಾರೆ. ಸರ್ಕಾರಿ ಶಾಲೆಗಳ ಬಗ್ಗೆ ಅಧಿಕಾರಿಗಳು ಮತ್ತು ನೌಕರರ ಅಸಡ್ಡೆ ಪದೇ ಪದೇ ಕಂಡುಬರುತ್ತಿದೆ. ಏಕೆಂದರೆ, ಬಹುತೇಕ ಅಧಿಕಾರಿಗಳು ಮತ್ತು ನೌಕರರ ಮಕ್ಕಳು (ಮುಖ್ಯವಾಗಿ ಶಿಕ್ಷಕರ) ಖಾಸಗಿ ಶಾಲೆಯಲ್ಲಿ ಓದುವುದರಿಂದ ಸರ್ಕಾರಿ ಶಾಲೆಗಳ ಬಗ್ಗೆ ಕಾಳಜಿ ಇಲ್ಲವಾಗಿದೆ ಎಂದು ಶೃಂಗೇರಿ ತಾಲ್ಲೂಕಿನ ಮೆಣಸೆ ಮಾದರಿ ಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸಂತೋಷ ಕಾಳ್ಯ ಆರೋಪಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ವರ್ಷದ ಶೈಕ್ಷಣಿಕ ಅವಧಿ ಮುಗಿಯುವ ಮತ್ತು ಪರೀಕ್ಷೆಗಳು ಮುಗಿಯುವ ಮೊದಲು, ಪರೀಕ್ಷೆ ನಡೆಯುತ್ತಿರುವಾಗಲೇ ಜನಗಣತಿಯ ತರಬೇತಿಗಾಗಿ ಶೃಂಗೇರಿ ತಾಲೂಕಿನಲ್ಲಿ ಮಾತ್ರ ಶಿಕ್ಷಕರನ್ನು ನಿಯೋಜಿಸಿ ತಸೀಲ್ದಾರ್‌ ಆದೇಶ ಮಾಡಿದ್ದಾರೆ. ಶಿಕ್ಷಣದ ಬಗ್ಗೆ ಕಾಳಜಿ ತೋರಿಸಿಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಬೇಜವಾಬ್ದಾರಿ ತೋರಿಸಿರುವುದು ಬಹುತೇಕ ಪೋಷಕರಿಗೆ ಬೇಸರವುಂಟಾಗಿದೆ ಎಂದಿದ್ದಾರೆ.

ಒಂದುಕಡೆ ಶಾಲಾ ಅವಧಿಯಲ್ಲಿ ಯಾವುದೇ ತರಬೇತಿ ಇತರೆ ಕಾರ್ಯಗಳು ಇರಬಾರದು ಎಂಬ ಸರ್ಕಾರಿ ಆದೇಶವಿದೆ. ಶಿಕ್ಷಣ ಸಚಿವರಿಂದ ದಾಖಲಾತಿ ಆಂದೋಲನ ಜೊತೆಗೆ ಎಸ್‌‍ಡಿಎಂಸಿ ಕ್ರಿಯಾಶೀಲವಾಗಿ ದಾಖಲಾತಿ ಜಾಸ್ತಿ ಮಾಡುವಂತೆ ಕಾರ್ಯಕ್ರಮ ರೂಪಿಸುವಂತೆ ಹೇಳುತ್ತಾರೆ. ಆದರೆ, ಪದೇ ಪದೇ ತರಬೇತಿ ಹೆಸರಲ್ಲಿ, ಇತರೆ ಕೆಲಸಗಳನ್ನು ತರಗತಿ ಅವಧಿಯಲ್ಲಿ ಕೊಡುತ್ತಿರುವುದರಿಂದ ಪೋಷಕರಿಗೆ ಗೊಂದಲ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.

ಮುಂದೆ ಇದೆಲ್ಲಾ ಗಮನಿಸಿ ಸರಿಮಾಡದಿದ್ದರೆ ನೌಕರರ ಸಂಘದಂತೆ ಪೋಷಕರ ಸಂಘವು ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು ಹೋರಾಟ ರೂಪಿಸಬೇಕಾಗುತ್ತದೆ. ಆ ಮೂಲಕ ಸೋಮಾರಿ ಅಧಿಕಾರಿಗಳು ಮತ್ತು ಶಿಕ್ಷಕರ ಕೆಲಸ ನೆನಪಿಸಬೇಕಾಗುತ್ತದೆ. ಡಯೆಟ್‌ನಿಂದ ಈ ವಾರ ಕೆಲವು ಶಾಲೆಗಳಿಂದ ತರಬೇತಿಗೆ ಬರುವಂತೆ ಆದೇಶ ಮಾಡಿದ್ದಾರೆ ಎಂಬ ಮಾಹಿತಿ ಬಂದಿದೆ. ಅವರಿಗೆಲ್ಲ ಏನಾಗಿದೆ? ಬೇಕಿದ್ದರೆ ಬೇಸಿಗೆ ರಜೆಯಲ್ಲಿ ತರಬೇತಿ ಕೊಡಲಿ ಎಂದು ಅವರು ಆಗ್ರಹಿಸಿದ್ದಾರೆ.

ರಜೆಯ ಅವಧಿಯಲ್ಲಿ ತರಬೇತಿ ನೀಡಲಿ: ಪ್ರೌಢ ಶಾಲೆಗಳಲ್ಲಿ 8 ಮತ್ತು 9 ನೇ ತರಗತಿಗಳಿಗೆ ನೇರವಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದಲೇ ಪ್ರಶ್ನೆ ಪತ್ರಿಕೆ ಬರುವ ವ್ಯವಸ್ಥೆ ಈ ವರ್ಷ ಮಾಡಲಾಗಿದೆ. ಹೀಗಾಗಿ ಪರೀಕ್ಷೆ ಕಾರ್ಯ ಮುಗಿದ ಬಳಿಕ ರಜೆಯ ಸಂದರ್ಭದಲ್ಲಿ ಶಿಕ್ಷಕರನ್ನು ತರಬೇತಿಗೆ ನಿಯೋಜಿಸಿ ಎಂದು ಪೋಷಕರಾದ ಕಲಕ್ಕಿ ಪ್ರಶಾಂತ್‌ ತಿಳಿಸಿದ್ದಾರೆ.

ಈ ಪರೀಕ್ಷೆ ಮುಗಿಯುವುದು ಏ. 6 ರಂದು. ಆದರೆ ಏ. 7 ನೇ ತಾರೀಖಿನಿಂದ ಎಸ್‌‍ಎಸ್‌‍ಎಲ್‌ಸಿ ಪರೀಕ್ಷೆ ಮೌಲ್ಯಮಾಪನ ಕಾರ್ಯ ಆರಂಭವಾಗಲಿದೆ. 8 ಮತ್ತು 9 ನೇ ತರಗತಿಗಳ ಕೊನೆಯ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯ ಮುಗಿಸಿ ಅದನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡಲು ಹೇಗೆ ಸಾಧ್ಯ? ಜೊತೆಗೆ ಪ್ರೌಢಶಾಲೆಗಳ ಸಮುದಾಯದತ್ತ ಶಾಲೆ ಏ.9 ರಂದು ಇದೆ. ಇದೊಂದು ಶಾಲಾ ಶೈಕ್ಷಣಿಕ ಪ್ರಕ್ರಿಯೆಯ ಪ್ರಮುಖ ಕಾರ್ಯಕ್ರಮ.ಆದರೆ ಹೆಚ್ಚಿನ ಶಾಲೆಗಳಲ್ಲಿ ಎಲ್ಲಾ ಪ್ರೌಢಶಾಲೆಗಳ ಶಿಕ್ಷಕರನ್ನು ಎಸ್‌‍ಎಸ್‌‍ಎಲ್‌ಸಿ ಮೌಲ್ಯಮಾಪನ ಕಾರ್ಯಕ್ಕೆ ನಿಯೋಜಿಸಲಾಗಿದೆ. ಹಾಗಾದರೆ ಸಮುದಾಯದತ್ತ ಕಾರ್ಯಕ್ರಮ ನಡೆಸಿ ಮಕ್ಕಳ ಪ್ರಗತಿಯನ್ನು ಪೋಷಕರಿಗೆ ತಿಳಿಸುವವರಾರು? ಎಂದು ಪ್ರಶ್ನಿಸಿದ್ದಾರೆ.

ಈ ಹಿಂದೆ ಶಾಲಾ ಹಂತದಲ್ಲಿ 8 ಮತ್ತು 9 ನೇ ತರಗತಿ ವಾರ್ಷಿಕ ಪರೀಕ್ಷೆ ನಡೆಸುತ್ತಿದ್ದರು. ಆಗ ಸ್ಥಳೀಯ ಸಮಸ್ಯೆಗನುಗುಣವಾಗಿ ಪರೀಕ್ಷೆ ದಿನವನ್ನು ನಿಗದಿ ಪಡಿಸುತ್ತಿದ್ದರು. ಆದರೆ, ಆ ಎಲ್ಲ ಜವಾಬ್ದಾರಿಯನ್ನು ಪರೀಕ್ಷಾ ಮಂಡಳಿ ವಹಿಸಿಕೊಂಡಿದ್ದು, ಈ ಎಲ್ಲಾ ಸಮಸ್ಯೆಗೆ ಕಾರಣವಾಗಿದೆ ಎಂಬ ಆರೋಪ ಮಾಡಿದ್ದಾರೆ.

RELATED ARTICLES

Latest News