ಥಾಣೆ, ಮಾ.30: ರಷ್ಯಾದಲ್ಲಿ ಉತ್ತಮ ಉದ್ಯೋಗ ಕೊಡಿಸುವ ನೆಪದಲ್ಲಿ ವ್ಯಕ್ತಿಯಿಂದ 2.92 ಲಕ್ಷ ರೂ.ಪಡೆದು ವಂಚಿಸಿದ ಆರೋಪದ ಮೇಲೆ ಇಲ್ಲಿ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು ಬಡ್ಲಾಪುರ (ಪೂರ್ವ) ನಿವಾಸಿ 38 ವರ್ಷದ ವ್ಯಕ್ತಿಗೆ ಟ್ರಾವೆಲ್ ಸಂಸ್ಥೆಯ ಮೂಲಕ ರಷ್ಯಾದಲ್ಲಿನ ಮಾಲ್‌ನಲ್ಲಿ ಉದ್ಯೋಗ ಒದಗಿಸುವುದಾಗಿ ಭರವಸೆ ನೀಡಿದ್ದರು.
ಉದ್ಯೋಗ ವೀಸಾ ಜೊತೆಗೆ ಪಾಸ್‌ಪೋರ್ಟ್, ವೀಸಾ ಮತ್ತು ಟಿಕೆಟ್ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿ, ಕಳೆದ 2025ರ ನವೆಂಬರ್‌ನಿಂದ ಈ ವರ್ಷದ ಜನವರಿ ತನಕ ಅರಿಂದ ರೂ. 2.92 ಲಕ್ಷ ಹಣವನ್ನು ಪಡೆದಿದ್ದಾರೆ. ನಂತರ ದೂರುದಾರ ವ್ಯಕ್ತಿಯನ್ನು ಉದ್ಯೋಗ ವೀಸಾ ಬದಲು ತಾತ್ಕಾಲಿಕ ವೀಸಾದ ಮೇಲೆ ವಿದೇಶಕ್ಕೆ ಕಳುಹಿಸಲಾಗಿದೆ ಎಂದು ಭಿವಂಡಿ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರಷ್ಯಾಕ್ಕೆ ತಲುಪಿದ ಬಳಿಕ ಭರವಸೆ ನೀಡಿದ ಕೆಲಸ ನೀಡದೆ ಶೌಚಾಲಯ ಸ್ವಚ್ಚತೆ ಸೇರಿ ಕಠಿಣ ಕೆಲಸ ಮಾಡಿಸಲಾಗಿದೆ ಎಂದು ದೂರುದಾರ ಆರೋಪಿಸಿದ್ದಾನೆ. ಜೊತೆಗೆ ಪಡೆದ ಹಣವನ್ನೂ ಆರೋಪಿಗಳು ಹಿಂತಿರುಗಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಪೊಲೀಸರು ಇಬ್ಬರು ಪುರುಷರು ಹಾಗೂ ಒಬ್ಬ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ತಲೆಮರೆಸಿಕೊಂಡಿದ್ದು ಹುಡುಕಾಟ ಮುಂದುವರಿದಿದ್ದು, ಸಂಬಂಧಿಸಿದ ಟ್ರಾವೆಲ್ ಏಜೆನ್ಸಿಯ ಪಾತ್ರವನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
