Sunday, April 12, 2026
Homeರಾಜ್ಯಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತ್ಯೋತ್ಸವ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರ

ಶ್ರೀ ಶಿವಕುಮಾರ ಸ್ವಾಮಿಗಳ 119ನೇ ಜಯಂತ್ಯೋತ್ಸವ ಸಿದ್ದಗಂಗಾ ಮಠಕ್ಕೆ ಭಕ್ತ ಸಾಗರ

ತುಮಕೂರು,ಏ.1- ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ಪದಭೂಷಣ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವದ ಹಿನ್ನೆಲೆಯಲ್ಲಿ ಶ್ರೀಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಹರಗುರು ಚರಮೂರ್ತಿಗಳ ಸಮುಖದಲ್ಲಿ ಶ್ರೀಗಳ ಗದ್ದುಗೆಗೆ ಮುಂಜಾನೆ ವಿವಿಧ ಪೂಜಾ ಕಾರ್ಯಗಳು ನಡೆದವು.
ಶ್ರೀಗಳ ಗದ್ದುಗೆಯನ್ನು ವಿವಿಧ ಬಗೆಯ ಫಲ-ಪುಷ್ಪಗಳಿಂದ ಅಲಂಕರಿಸಲಾಗಿದ್ದು, ಪ್ರಾತಃಕಾಲದಿಂದಲೇ ವಿವಿಧ ಪೂಜಾ ಕೈಂಕರ್ಯಗಳು ಭಕ್ತಿಭಾವದಿಂದ ನೆರವೇರಿದವು.

ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾರ್ಚನೆ ಸೇರಿದಂತೆ ಮಂತ್ರಘೋಷಗಳು ಮೊಳಗಿದವು. ನಂತರ ರುದ್ರಾಕ್ಷಿ ಮಂಟಪದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಪುತ್ಥಳಿಯನ್ನು ಇರಿಸಿ ಪೂರ್ಣಕುಂಭ ಕಳಸ, ನಂದಿ ಧ್ವಜ, ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾತಂಡಗಳ ವಾದ್ಯ ವೈಭೋಗದೊಂದಿಗೆ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕಿರಿಯ ಶ್ರೀಗಳಾದ ಶಿವ ಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ ಶ್ರೀಗಳ ಸಮುಖದೊಂದಿಗೆ ಮಠದ ಆವರಣದಲ್ಲಿ ರುದ್ರಾಕ್ಷಿ ಮಂಟಪದ ಮೆರವಣಿಗೆ ನಡೆಲಾಯಿತು.

ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು, ಶ್ರೀಮಠದ ವಿದ್ಯಾರ್ಥಿಗಳು ರುದ್ರಾಕ್ಷಿ ಮಂಟಪದ ಮೆರವಣಿಗೆಯನ್ನು ಕಣ್ತುಂಬಿಕೊಂಡು ಶ್ರೀಗಳನ್ನು ಭಕ್ತಿಯಿಂದ ಸರಿಸಿದರು. ತಂಡೋಪತಂಡವಾಗಿ ಶ್ರೀ ಮಠಕ್ಕೆ ಭಕ್ತರ ದಂಡೇ ಹರಿದುಬರುತ್ತಿದ್ದು, ಪೂಜೆಯ ನಂತರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ಸರದಿ ಸಾಲಿನಲ್ಲಿ ನಿಂತು ಭಕ್ತರು ಶ್ರೀಗಳ ಗದ್ದುಗೆಯ ದರ್ಶನ ಪಡೆದು ಪುನೀತರಾದರು.

ಭಕ್ತಾದಿಗಳಿಗಾಗಿ ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದ್ದು, ಬೆಳಿಗ್ಗೆಯಿಂದ ರಾತ್ರಿವರೆಗೂ ಶ್ರೀಮಠದ ಆವರಣದ ವಿವಿಧೆಡೆ ತೆರೆಯಲಾಗಿದ್ದ ದಾಸೋಹ ಭವನದಲ್ಲಿ ನಿರಂತರ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.

RELATED ARTICLES

Latest News