ತುಮಕೂರು,ಮಾ.31-ನಾಳೆ ಸಿದ್ಧಗಂಗಾ ಮಠದಲ್ಲಿ ನಡೆಯಲಿರುವ ಕರ್ನಾಟಕ ರತ್ನ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ 119 ನೇ ಜಯಂತಿ ಹಾಗೂ ಗುರುವಂದನಾ ಮಹೋತ್ಸವಕ್ಕೆ ಸಿದ್ದತಾ ಕಾರ್ಯಗಳು ಭರದಿಂದ ಸಾಗಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶ್ರೀ ಮಠಕ್ಕೆ ಆಗಮಿಸುತ್ತಿರುವುದು ಹೆಮೆಯ ಸಂಗತಿಯಾಗಿದ್ದು, ಬೆಂಗಳೂರಿನಿಂದ-ತುಮಕೂರು ವಿವಿಯ ಹೆಲಿ ಪ್ಯಾಡ್‌ಗೆ ಆಗಮಿಸಲಿದ್ದು, ಈ ಹಿನ್ನೆಲೆಯಲ್ಲಿ ಹೆಲಿ ಪ್ಯಾಡ್‌ನಲ್ಲಿ ರಕ್ಷಣಾ ಇಲಾಖೆಯ ಹೆಲಿಕಾಫ್ಟರ್‌ಗಳು ತಾಲೀಮು ನಡೆಸಿವೆ.
ರಸ್ತೆ ಮಾರ್ಗದಲ್ಲಿ ಶ್ರೀ ಮಠಕ್ಕೆ ಭೇಟಿ ನೀಡಲಿರುವ ರಾಷ್ಟ್ರಪತಿಗಳು ಶ್ರೀ ಶಿವಕುಮಾರ ಸ್ವಾಮೀಜಿಯವರ ಗದ್ದಿಗೆಯ ದರ್ಶನ ಪಡೆದು, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಮಠದಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಪ್ರತಿ ವರ್ಷದಂತೆ ಈ ವರ್ಷವು ಗುರುವಂದನೆ ನಿಮಿತ್ತ ಬೆಳಗ್ಗೆಯಿಂದ ರಾತ್ರಿ ವರೆಗೂ ಶ್ರೀ ಮಠದ ಆವರಣದ ವಿವಿಧೆಡೆ ದಾಸೋಹ ವ್ಯವಸ್ಥೆ ಕಲ್ಪಿಸಲಾಗಿದೆ.
ಮಠದಲ್ಲಿ ಸೌಧೆ, ಅಡಿಕೆ ಸಿಪ್ಪೆ, ಉರುವಲಾಗಿ ಬಳಸುತ್ತಿದ್ದು, ದಾಸೋಹಕ್ಕೆ ಯಾವುದೇ ತೊಂದರೆಯಾಗಿಲ್ಲ. ಈ ಭಾರಿ ದಾಸೋಹದಲ್ಲಿ ಬೂಂದಿ, ಪಾಯಸ, ಚಿತ್ರನ್ನ, ಹೆಸರುಬೇಳೆ, ಕೂಟು, ಅನ್ನಸಂಬಾರ್, ಮಜ್ಜಿಗೆ ಇರಲಿದ್ದು ಇತರೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಕಾರ್ಯಕ್ರಮಕ್ಕೆ ವಿವಿಧ ಮಠದ ಶ್ರೀಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು, ಸಂಸದರು ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದು, ವೇದಿಕೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
sri Shivakumara Swamiji Guru Vandana program
