ಮೈಸೂರು,ಜ.4- ಬಾಲಕನನ್ನು ಸ್ನೇಹಿತರೇ ಕೆರೆಗೆ ತಳ್ಳಿ ಹತ್ಯೆಗೈದಿರುವ ಘಟನೆ ನಂಜನಗೂಡು ತಾಲೂಕಿನ ಹಳೇಪುರ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ನಂಜನಗೂಡು ತಾಲೂಕಿನ ಹೆಮ್ಮರಗಾಲದ ಮಹೇಶ್ ಅಲಿಯಾಸ್ ಮನು (16) ಸ್ನೇಹಿತರಿಂದ ಹತ್ಯೆಯಾದ ಬಾಲಕ.
ಮಹೇಶ್ 10ನೇ ತರಗತಿ ಓದುತ್ತಿದ್ದು, ಈತನ ಮೂವರು ಸ್ನೇಹಿತರು ಕೆರೆ ಬಳಿ ಕರೆದುಕೊಂಡು ಹೋಗಿ ತಳ್ಳಿ ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಪೈಕಿ ಒಬ್ಬಾತ ಚಿಕ್ಕ ವಯಸ್ಸಿನಲ್ಲಿಯೇ ತಾತನಿಂದ ವಾಮಾಚಾರ ಮಾಡುವುದನ್ನು ಕಲಿತಿದ್ದು, ಧನುರ್ ಮಾಸದ ಅಮಾವಾಸ್ಯೆ ದಿನ ಬಲಿ ಕೊಟ್ಟರೆ ಇಷ್ಟಾರ್ಥ ಸಿದ್ಧಿಸುತ್ತವೆ ಎಂಬ ನಂಬಿಕೆಯಿಂದ ಮಹೇಶನನ್ನು ಬಲಿಕೊಟ್ಟಿರಬಹುದು ಎನ್ನಲಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕೆರೆಯ ಬಳಿ ಬಂದು ಶೋಸಿದಾಗ ಮಹೇಶನ ಮೃತದೇಹ ಸಿಕ್ಕಿದೆ. ಅಲ್ಲದೆ ಕೆರೆ ಬಳಿ ವಾಮಾಚಾರ ಪೂಜೆ ಮಾಡಿದ ಕುರುಹುಗಳು ಪತ್ತೆಯಾಗಿದೆ.
ಸ್ಥಳಕ್ಕೆ ಬಂದ ಕೌಲಂದೆ ಪೊಲೀಸರು ಪರಿಶೀಲನೆ ನಡೆಸಿದ್ದು, ಅಪ್ರಾಪ್ತರಾಗಿರುವ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
