ಅಯೋಧ್ಯೆಯ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹ

Social Share

ಲಖ್ನೋ,ಆ.21- ರಾಮಜನ್ಮಭೂಮಿ ಅಯೋಧ್ಯೆಯ ಧನೀಪುರದಲ್ಲಿ ಮಸೀದಿ ನಿರ್ಮಾಣಕ್ಕಾಗಿ ದೇಣಿಗೆ ಸಂಗ್ರಹಿಸಲಾಗಿದೆ ಎಂದು ಇಂಡೋ ಇಸ್ಲಾಮಿಕ್ ಕಲ್ಚರಲ್ ಫೌಂಡೇಷನ್(ಐಐಸಿಎಫ್) ತಿಳಿಸಿದೆ. 2019ರ ನವೆಂಬರ್ 9ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ದಶಕಗಳ ಅಯೋಧ್ಯಾ ರಾಮಜನ್ಮ ವಿವಾದವನ್ನು ಇತ್ಯಥರ್ಗೊಳಿಸಿದೆ.

ತೀರ್ಪಿನ ಭಾಗವಾಗಿ ದನ್ನಿಪುರದಲ್ಲಿ ಐದು ಎಕರೆ ಜಾಗ ನೀಡಲಾಗಿದೆ. ಅದರಲ್ಲಿ ಮೊದಲು ಆಸ್ಪತ್ರೆ ನಿರ್ಮಿಸಲಾಗಿದ್ದು, ಹೊರರೋಗಿಗಳ ವಿಭಾಗವನ್ನು ಶುರು ಮಾಡಲಾಗಿದೆ.

ಮುಂದುವರೆದು ಮಸೀದಿ ಪ್ರಾರ್ಥನಾ ಮಂದಿರ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಲ್ಲಿ ಗ್ರಂಥಾಲಯ, ಸಾಮೂಹಿಕ ಅಡುಗೆ ಕೋಣೆ, ಸಂಶೋಧನಾ ಕೇಂದ್ರಗಳಿವೆ. ಈ ಕೆಲಸಕ್ಕಾಗಿ 5 ಮಂದಿ ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಜಿಫರ್ ಫಾರೂಖಿ ಅವರು ತಂಡದ ನೇತೃತ್ವ ವಹಿಸಿದ್ದಾರೆ ಎಂದು ಫೌಂಡೇಷನ್ ಕಾರ್ಯದರ್ಶಿ ಅತ್ತರ್‍ಹುಸೇನ್ ತಿಳಿಸಿದ್ದಾರೆ.

ತಂಡ ಆ.12ರಂದು ಫಕ್ರೂದಬಾದ್‍ಗೆ ಭೇಟಿ ನೀಡಿದೆ. ಮೊದಲ ದಿನವೇ ಎರಡೂವರೆ ಲಕ್ಷ ಸಂಗ್ರಹವಾಗಿದ್ದು, ಒಂದು ಕೋಟಿ ರೂ. ದೇಣಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ. ಫೌಂಡೇಷನ್ ಈಗಾಗಲೇ 25 ಲಕ್ಷ ರೂ.ಗಳನ್ನು ಸಂಗ್ರಹಿಸಿದೆ. ಒಂದು ತಿಂಗಳ ಒಳಗಾಗಿ ಕಟ್ಟಡದ ನೀಲನಕ್ಷೆಯನ್ನು ಅಯೋಧ್ಯಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗುವುದು. ಅಲ್ಲಿಂದ ಪರವಾನಗಿ ದೊರೆತ ಕೂಡಲೇ ಕೆಲಸ ಆರಂಭಿಸಲಾಗುವುದು ಎಂದು ತಿಳಿಸಿದ್ದಾರೆ.

ಉತ್ತರಪ್ರದೇಶದಲ್ಲಷ್ಟೇ ಅಲ್ಲ ಗುಜರಾತ್, ಮಧ್ಯಪ್ರದೇಶ, ಬಿಹಾರ,ಮಹಾರಾಷ್ಟ್ರ ಸೇರಿ ವಿವಿಧ ರಾಜ್ಯಗಳಲ್ಲೂ ದೇಣಿಗೆ ಸಂಗ್ರಹ ನಡೆದಿದೆ. ಇತರ ಸಮುದಾಯಗಳು ಕೂಡ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ ಎಂದರು.

Articles You Might Like

Share This Article