ರಷ್ಯಾ-ಉಕ್ರೇನ್ ಸಂಘರ್ಷ ಕುರಿತು ಜಿ-20 ಸಮ್ಮೇಳನದಲ್ಲಿ ಮೋದಿ ಪ್ರಸ್ತಾಪ

Social Share

ಬಾಲಿ,ನ.15- ಉಕ್ರೇನ್ ಮತ್ತು ರಷ್ಯಾ ಸಂಘರ್ಷದ ಕುರಿತು ಜಿ-20 ಸಮ್ಮೇಳನದಲ್ಲಿ ಪ್ರಸ್ತಾಪ ಮಾಡಿರುವ ಪ್ರಧಾನಿ ನರೇಂದ್ರಮೋದಿ ಅವರು, ಶಾಂತಿ ಪಾಲನೆಗಾಗಿ ಕದನ ವಿರಾಮ ಮತ್ತು ರಾಜತಾಂತ್ರಿಕ ಮಾರ್ಗಗಳಿಗೆ ಮರಳುವಂತೆ ಒತ್ತಾಯಿಸಿದ್ದಾರೆ. ಇದೇ ವೇಳೆ ರಷ್ಯಾ ಮೇಲೆ ವಿಧಿಸಲಾಗಿರುವ ಹಲವು ನಿರ್ಬಂಧಗಳ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಹವಾಮಾನ ಬದಲಾವಣೆ, ಕೋವಿಡ್-19, ಉಕ್ರೇನ್ ಬೆಳವಣಿಗೆಗಳು ಮತ್ತು ಜಾಗತಿಕ ಸಮಸ್ಯೆಗಳ ಕುರಿತು ಪ್ರಧಾನಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ, ವಿಶ್ವದಲ್ಲಿ ಸರಬರಾಜು ಸರಪಳಿಗೆ ಧಕ್ಕೆಯಾಗಲು ಅವಕಾಶ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ.

ಡಿಸೆಂಬರ್ 1ರಿಂದ ಭಾರತ ಜಿ-20 ಶೃಂಗದ ಅಧ್ಯಕ್ಷತೆ ವಹಿಸುತ್ತಿರುವುದನ್ನು ಪ್ರಧಾನಿ ಇದೇ ವೇಳೆ ಪ್ರಸ್ತಾಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಬುದ್ದ, ಗಾಂಧಿ ಅವರ ಪವಿತ್ರ ನೆಲದಲ್ಲಿ ನಾವು ಭೇಟಿ ಮಾಡುತ್ತೇವೆ. ವಿಶ್ವ ಶಾಂತಿಗಾಗಿ ಪ್ರಬಲ ಸಂದೇಶವನ್ನು ರವಾನೆ ಮಾಡುತ್ತೇವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಸಮ್ಮೇಳನದಲ್ಲಿ ಪ್ರಧಾನಿಯವರು ಆಹಾರ ಮತ್ತು ಇಂಧನ ಭದ್ರತೆ ಕುರಿತು ಆದ್ಯತೆ ಮೇರೆಗೆ ಚರ್ಚೆ ಮಾಡಿದ್ದು, ಜಾಗತಿಕ ಸಮಸ್ಯೆಗಳಿಂದಾಗಿ ಆರ್ಥಿಕ ದುರ್ಬಲ ನಾಗರಿಕರಿಗೆ ಅಗತ್ಯ ವಸ್ತುಗಳು ಮತ್ತು ಸೇವೆಗಳ ಲಭ್ಯತೆಯಲ್ಲಿ ಹಿನ್ನಡೆಯಾಗುತ್ತಿದೆ. ಇದು ಪ್ರತಿಯೊಂದು ದೇಶವನ್ನು ಕಾಡುತ್ತಿದೆ ಎಂದಿದ್ದಾರೆ.

ಚೀನಾದೊಂದಿಗೆ ಯಾವುದೇ ಶೀತಲ ಸಮರ ಇಲ್ಲ : ಬಿಡೆನ್

ಭಾರತ ವಿಶ್ವದಲ್ಲೇ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ದೇಶ. ಹಾಗಾಗಿ ಇಂಧನ ಭದ್ರತೆ ಅತಿಮುಖ್ಯವಾಗಿದೆ ಎಂದು ಸ್ಪಷ್ಟಪಡಿಸಿರುವ ಅವರು, ಮಾರುಕಟ್ಟೆಯಲ್ಲಿ ಇಂಧನ ಸರಬರಾಜು ಮತ್ತು ಸ್ಥಿರತೆಗೆ ಅಡ್ಡಿಯಾಗುವಂತಹ ಯಾವುದೇ ನಿರ್ಬಂಧಗಳನ್ನು ತಾವು ಬೆಂಬಲಿಸುವುದಿಲ್ಲ ಎಂದು ಜಾಗತಿಕ ನಾಯಕರ ಮುಂದೆ ಸ್ಪಷ್ಟಪಡಿಸಿದ್ದಾರೆ.

ಸಮಾವೇಶದಲ್ಲಿ ಅಮೆರಿಕದ ಅಧ್ಯಕ್ಷ ಜೊಬಿಡೆನ್, ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್, ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾರ್ವೋ ಮತ್ತಿತರರು ಭಾಗವಹಿಸಿದ್ದರು.

ರಷ್ಯಾದಿಂದ ಇಂಧನ ಹಾಗೂ ಅನಿಲ ಖರೀದಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ನಿರ್ಬಂಧ ವಿಧಿಸಿವೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ನಿರ್ಬಂಧಗಳಿವೆ ವಿರೋಧ ವ್ಯಕ್ತಪಡಿಸುವುದಾಗಿ ಒತ್ತಿ ಹೇಳಿದ್ದಾರೆ.

ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ ಬಳಿಕ ಜಾಗತಿಕವಾಗಿ ಹಲವು ರಾಷ್ಟ್ರಗಳು ನಿರ್ಬಂಧಗಳನ್ನು ಹೇರಲು ಆರಂಭಿಸಿದವು. ಆದರೆ ಭಾರತ ಈ ಸಂದರ್ಭವನ್ನು ಬಳಕೆ ಮಾಡಿಕೊಂಡು ರಷ್ಯಾದಿಂದ ರಿಯಾಯ್ತಿ ದರದಲ್ಲಿ ಇಂಧನವನ್ನು ಖರೀದಿಸಿದೆ.

2030ರ ವೇಳೆಗೆ ನಮ್ಮ ವಿದ್ಯುತ್‍ನ ಅರ್ಧದಷ್ಟು ನವೀಕೃತ ಇಂಧನ ಮೂಲಗಳಿಂದ ದೊರೆಯುವಂತಾಗಲಿದೆ. ಈ ವಿದ್ಯುತ್ ಶಕ್ತಿಯ ಪರಿವರ್ತನೆ ಮತ್ತು ಒಳಗೊಳ್ಳುವಿಕೆಗೆ ಕಾಲಮಿತಿಯ ಹಾಗೂ ಕೈಗೆಟುಕುವ ಹಣಕಾಸು ಸೌಲಭ್ಯ, ಸುಸ್ಥಿರ ತಂತ್ರಜ್ಞಾನದ ನೆರವನ್ನು ಮುಂದುವರೆದ ರಾಷ್ಟ್ರಗಳು ನೀಡಬೇಕು ಎಂದು ಹೇಳಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ಸಂಘರ್ಷವನ್ನು ಹಲವಾರು ಬಾರಿ ಪ್ರಸ್ತಾಪಿಸಿದ ಪ್ರಧಾನಿಯವರು, ಕದನ ವಿರಾಮ ಮತ್ತು ರಾಜತಾಂತ್ರಿಕತೆಯ ಮೂಲಕ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕಿದೆ.

ಗುರುವಾರದಿಂದ 108 ಆಂಬ್ಯುಲೆನ್ಸ್ ಸೇವೆ ಸ್ಥಗಿತ..!?

ಕಳೆದ ಶತಮಾನದಲ್ಲಿ ವಿಶ್ವದ 2ನೇ ಯುದ್ಧದಿಂದಾಗಿ ಹಲವು ರಾಷ್ಟ್ರಗಳಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಪ್ರಧಾನಿ ವಿವರಿಸಿದ್ದಾರೆ. ಆ ಬಳಿಕ ಜಾಗತಿಕ ನಾಯಕರು ಶಾಂತಿ ಪಾಲನೆಗಾಗಿ ಗಂಭೀರ ಪ್ರಯತ್ನಗಳನ್ನು ಮಾಡಿದ್ದಾರೆ. ಈಗ ನಾವು ಮತ್ತೆ ಅದರತ್ತಲೇ ಮುಖ ಮಾಡಬೇಕಿದೆ ಎಂದಿದ್ದಾರೆ.

ಕೋವಿಡೋತ್ತರದಲ್ಲಿ ಹೊಸ ಜಗತ್ತಿನ ನಿರ್ಮಾಣದ ಜವಾಬ್ದಾರಿ ನಮ್ಮ ಹೆಗಲ ಮೇಲಿದೆ. ಇದಕ್ಕಾಗಿ ಸಮಗ್ರವಾದ ಮತ್ತು ಎಲ್ಲರನ್ನು ಒಳಗೊಳ್ಳುವ ಬದ್ದತೆಯನ್ನು ಪ್ರದರ್ಶನ ಮಾಡಬೇಕಿದೆ. ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಭದ್ರತೆಯ ದೃಢೀಕರಣಗೊಳಿಸಬೇಕಿದೆ ಎಂದು ಹೇಳಿದ್ದಾರೆ.

ಜಿ-20 ಶೃಂಗ ನಿರ್ವಹಣೆಯಲ್ಲಿ ನಾಯಕತ್ವ ವಹಿಸಿದ ಇಂಡೋನೇಷ್ಯಾ, ಜಾಗತಿಕ ಪರಿಸರದ ಸವಾಲುಗಳನ್ನು ವಿಶ್ಲೇಷಣೆ ನಡೆಸಲು ಉತ್ತಮ ಅವಕಾಶ ಕಲ್ಪಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ.

ಎಲ್ಲರೂ ಒಟ್ಟಾಗಿ ಸರಬರಾಜು ಸರಪಳಿಯನ್ನು ಪುನರ್ ಸ್ಥಾಪಿಸಬೇಕಿದೆ. ಇಲ್ಲದೇ ಹೋದರೆ ಬಡವರಿಗೆ ಅಗತ್ಯ ವಸ್ತುಗಳನ್ನು ಖರೀದಿಸುವ ಸಾಮಥ್ರ್ಯವೆ ಇಲ್ಲವಾಗುತ್ತದೆ. ಇದರಿಂದಾಗಿ ಜಗತ್ತು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಬಡ ವರ್ಗಗಳಿಗೆ ಸುಸ್ಥಿರ ಸುಧಾರಣೆಗಳನ್ನು ಸೃಷ್ಟಿಸುವಲ್ಲಿ ವಿಫಲವಾಗುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಜಿ-20 ಶೃಂಗದತ್ತ ಆಶಾಭಾವನೆಗಳು ಹೆಚ್ಚಾಗಿದೆ. ನಾವು ಸಮರ್ಥವಾದ ಪರಿಹಾರಗಳನ್ನು ಕಂಡುಕೊಳ್ಳಬೇಕಿದೆ. ಕೋವಿಡ್ ಬಳಿಕ ಭಾರತದಲ್ಲಿ ಆಹಾರ ಭದ್ರತೆಯನ್ನು ಖಾತ್ರಿಪಡಿಸಲಾಗಿದೆ.

ದೇಶದ 130 ಕೋಟಿ ಜನರು ಹಸಿವಿನಿಂದ ತೊಂದರೆ ಅನುಭವಿಸದಂತೆ ಎಚ್ಚರಿಕೆ ವಹಿಸಲಾಗಿದೆ. ಅಲ್ಲದೆ ಬೇರೆ ದೇಶಗಳಿಗೂ ಅಗತ್ಯ ಆಹಾರಧಾನ್ಯಗಳನ್ನು ಪೂರೈಸಲಾಗಿದೆ. ಪ್ರಸ್ತುತ ರಸಗೊಬ್ಬರದ ಕೊರತೆ ಮತ್ತು ಅದರಿಂದಾಗಿ ಎದುರಾಗುವ ಆಹಾರ ಭದ್ರತೆಯ ಸವಾಲನ್ನು ನಿಭಾಯಿಸಬೇಕಾಗಿದೆ. ಇದಕ್ಕೆ ನಾವು ಅಂತಾರಾಷ್ಟ್ರೀಯ ಪರಿಹಾರಗಳನ್ನು ಕಂಡುಕೊಳ್ಳಬೇಕು.

ಜಿ-20 ಶೃಂಗಸಭೆಗೆ ಆಗಮಿಸಿದ್ದ ಕಾಂಬೋಡಿಯಾ ಪ್ರಧಾನಿಗೆ ಕೊರೋನಾ ಪಾಸಿಟಿವ್

ಆಹಾರ ಧಾನ್ಯಗಳ ಸರಬರಾಜು ಸುಸ್ಥಿರತೆಗೆ ಪರಸ್ಪರ ಒಪ್ಪಂದಗಳನ್ನು ಮಾಡಿಕೊಳ್ಳಬೇಕು. ನೈಸರ್ಗಿಕ ಕೃಷಿ, ಪೌಷ್ಠಿಕತೆಯ ಮರುಗಳಿಕೆ ಸಿರಿಧಾನ್ಯಗಳು ಸೇರಿದಂತೆ ಸಾಂಪ್ರದಾಯಿಕ ಆಹಾರ ಪದ್ದತಿಗಳನ್ನು ಪುನರ್ ಪತಿಷ್ಠಾಪಿಸಬೇಕಿದೆ ಎಂದಿದ್ದಾರೆ.

ಸಿರಿಧಾನ್ಯಗಳು ಅಪೌಷ್ಠಿಕತೆ ಮತ್ತು ದೇಶದ ಹಸಿವನ್ನು ನೀಗಿಸಲು ಸಮರ್ಥವಾಗಿದೆ. ಹೀಗಾಗಿ ಮುಂದಿನ ವರ್ಷ ಅಂತಾರಾಷ್ಟ್ರೀಯ ಸಿರಿಧಾನ್ಯ ಮೇಳವನ್ನು ವೈಭವೀಕರಿಸಬೇಕಿದೆ ಎಂದು ಹೇಳಿದ್ದಾರೆ.

ತೆಲುಗು ಸೂಪರ್ ಸ್ಟಾರ್ ಕೃಷ್ಣ ಇನ್ನಿಲ್ಲ..!

ಜಿ-20 ಶೃಂಗದಲ್ಲಿ ಅರ್ಜೆಂಟೈನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಸೌತ್‍ಕೋರಿಯ, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ಟರ್ಕಿ, ಇಂಗ್ಲೆಂಡ್ ಮತ್ತು ಬ್ರಿಟನ್ ರಾಷ್ಟ್ರಗಳು ಭಾಗವಹಿಸಿವೆ.

Articles You Might Like

Share This Article