ಅರಮನೆ ಆವರಣದಲ್ಲಿ ಗಜಪಡೆಗೆ ಅದ್ಧೂರಿ ಸ್ವಾಗತ

Social Share

ಮೈಸೂರು,ಆ.10- ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಅರಮನೆ ಆವರಣದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ದಸರಾ ಮಹೋತ್ಸವಕ್ಕೆ ಸಿದ್ಧತೆ ನಡೆದಿದ್ದು, ನಗರದಲ್ಲಿನ ಅಶೋಕಾಪುರಂನಲ್ಲಿರುವ ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಅರಣ್ಯ ಇಲಾಖೆ ವತಿಯಿಂದ ಸಾಂಪ್ರದಾಯಿಕವಾಗಿ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ನಂತರ ದಸರಾ ಗಜಪಡೆ ಅರಮನೆ ಆವರಣ ಪ್ರವೇಶಿಸಿತು.

ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳು ಅರಮನೆ ಆವರಣಕ್ಕೆ ಅರಣ್ಯ ಭವನದಿಂದ 3.5 ಕಿಮೀ ಕಾಲ್ನಡಿಗೆ ಮೂಲಕ ಆಗಮಿಸಿವೆ. ಅರಮನೆ ಆಡಳಿತಮಂಡಳಿ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ನೆರವೇರಿಸಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು. 9.20ರಿಂದ 10ರ ಶುಭ ಲಗ್ನದಲ್ಲಿ ದಸರಾ ಗಜಪಡೆಗಳಿಗೆ ಅರಮನೆ ಆಡಳಿತ ಮಂಡಳಿ ವತಿಯಿಂದ ಪೂಜೆ ನೆರವೇರಿಸಲಾಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್, ಶಾಸಕ ರಾಮದಾಸ್, ಡಿಸಿಎಫ್ ಡಾ.ಕರಿಕಾಳನ್ ಪೂಜೆಯಲ್ಲಿ ಭಾಗಿಯಾಗಿದ್ದರು. ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಚೈತ್ರಾ, ಗೋಪಾಲಸ್ವಾಮಿ, ಕಾವೇರಿ, ಲಕ್ಷ್ಮೀ ಆನೆಗಳಿಗೆ ಜಿಲ್ಲಾಡಳಿತ ವತಿಯಿಂದ ಪುಷ್ಪಾರ್ಚನೆ ಸಲ್ಲಿಸಿ ದಸರಾ ಗಜಪಡೆಗಳಿಗೆ ಗೌರವ ಸಲ್ಲಿಸಲಾಯಿತು.

ಮೊದಲ ಹಂತದಲ್ಲಿ ಗಜಪಯಣದ ಮೂಲಕ ಅಭಿಮನ್ಯು ನೇತೃತ್ವದ 9 ಆನೆಗಳು ಕಾಡಿನಿಂದ ನಾಡಿಗೆ ಆಗಮಿಸಿದ್ದವು. ಕಳೆದ ಭಾನುವಾರದಿಂದ ಅರಣ್ಯ ಭವನದಲ್ಲಿ ವಿಶ್ರಾಂತಿ ಪಡೆಯುತ್ತಿದ್ದವು. ಗಜಪಡೆ ಇಂದು ಕಾಲ್ನಡಿಗೆ ಮೂಲಕ ಅರಣ್ಯ ಭವನದಿಂದ ಮೈಸೂರು ಅರಮನೆಯತ್ತ ಸಾಗಿ ಬಂದಿವೆ.

ಗಜಪಡೆಗೆ ಬೆಲ್ಲ, ಕಾಯಿ, ಹಣ್ಣುಗಳು, ವಿವಿಧ ಬಗೆಯ ಸಿಹಿ ತಿನಿಸುಗಳನ್ನು ನೀಡಿ ಅರಣ್ಯ ಭವನದಿಂದ ಬೀಳ್ಕೊಡಲಾಯಿತು. ಈ ಬಾರಿ ಒಟ್ಟು 14 ಆನೆಗಳು ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ. ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಅರ್ಚಕ ಪ್ರಹ್ಲಾದ್ ರಾವ್ ಸಾಂಪ್ರದಾಯಿಕ ಪೂಜಾ ವಿವಿಧಾನಗಳನ್ನು ನೆರವೇರಿಸಿದರು.

Articles You Might Like

Share This Article