ಈ ಭಾರೀ ಗಣೇಶನ ಜತೆ ಬರ್ತಿದ್ದಾರೆ ಅಪ್ಪು

Social Share

ಬೆಂಗಳೂರು,ಜು.21- ಮತ್ತೆ ಕನ್ನಡಿಗರ ಮನೆ ಮನಗಳನ್ನು ಬೆಳಗಲು ಬರ್ತಿದ್ದಾರೆ ಅಪ್ಪು ಸಾರ್. ಅರೆ, ಇದೇನಿದು ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅವರು ಅಕಾಲಿಕ ಮರಣ ಹೊಂದಿ 9 ತಿಂಗಳು ಕಳೆದಿದೆ. ಈಗ ಅವರು ಮತ್ತೆ ಕನ್ನಡಿಗರ ಮನೆ ಮನ ಬೆಳಗಲು ಹೇಗೆ ಸಾಧ್ಯ ಎಂದು ಅಚ್ಚರಿಪಡುತ್ತಿದ್ದಿರಾ ಹಾಗಾದರೆ ಈ ಸ್ಟೋರಿ ಓದಿ.

ಕಳೆದ ಅಕ್ಟೋಬರ್ 29 ರಂದು ಪುನಿತ್‍ರಾಜ್‍ಕುಮಾರ್ ಅವರು ಅಕಾಲಿಕ ಮರಣ ಹೊಂದಿದ್ದಾಗ ಭಾರತೀಯ ಚಿತ್ರರಂಗವಲ್ಲದೆ ಹಾಲಿವುಡ್ ಮಂದಿ ಕೂಡ ದಿಗ್ಬ್ರಮೆ ವ್ಯಕ್ತಪಡಿಸಿದ್ದರು. ಅಪ್ಪು ಅವರ ಸಾವನ್ನು ಕನ್ನಡಿಗರಂತೂ ಇನ್ನುನಂಬಿಲ್ಲ. ಅವರು ನಮ್ಮೊಂದಿಗೆ ಇನ್ನು ಇದ್ದಾರೆ ಎಂದೇ ಅದೆಷ್ಟೋ ಮಂದಿ ನಂಬಿಕೊಂಡಿದ್ದಾರೆ. ಮಾತ್ರವಲ್ಲ ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ಬಿಡುಗಡೆಯಾಗುವುದನ್ನೆ ಎದುರು ನೋಡುತ್ತಿದ್ದಾರೆ.

ಅಪ್ಪು ನಿಧನ ಹೊಂದಿ 9 ತಿಂಗಳು ಕಳೆದರೂ ಅವರ ವರ್ಚಸ್ಸು ಮಾತ್ರ ಕಡಿಮೆಯಾಗಿಲ್ಲ. ಕನ್ನಡಿಗರ ಹೃದಯ ಸಾಮ್ರಾಜ್ಯದಲ್ಲಿ ರಾರಾಜಿಸುತ್ತಿರುವ ಅಪ್ಪು ಸಾರ್ ಇದೀಗ ದೇವರ ಮೂರ್ತಿಯಾಗಿ ಮೂಡಿ ಬರುತ್ತಿದ್ದಾರೆ.

ಹೌದು ವಿಘ್ನ ನಿವಾರಕ ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಗಣೇಶ ಮೂರ್ತಿಗಳ ತಯಾರಿಕೆ ಭರದಿಂದ ಸಾಗುತ್ತಿದೆ. ಈ ಬಾರಿಯ ವಿಶೇಷ ಎಂದರೆ ಗಣೇಶ ಮೂರ್ತಿಗಳ ಜೊತೆಗೆ ಅಪ್ಪು ಮೂರ್ತಿಯನ್ನು ತಯಾರಿಸಲಾಗುತ್ತಿದೆ.
ಪರಿಸರ ಸ್ನೇಹಿ ವಿನಾಯಕ ಮೂರ್ತಿ ಜತೆ ಅಪ್ಪು ಮೂರ್ತಿಯನ್ನು ಕಲಾವಿದರು ತಯಾರಿಸುತ್ತಿದ್ದಾರೆ.

ಗಣೇಶಮೂರ್ತಿಗಳ ಜೊತೆ ಅಪ್ಪು ಸಾರ್ ಮೂರ್ತಿ ರೆಡಿಯಾಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅವರ ಅಭಿಮಾನಿಗಳು ಗಣೇಶ-ಅಪ್ಪು ಮೂರ್ತಿ ಖರೀದಿಗೆ ಮುಗಿಬಿದ್ದಿದ್ದಾರೆ. ಮೂರ್ತಿಗಳ ಬುಕ್ಕಿಂಗ್ ಕಾರ್ಯ ಭರ್ಜರಿಯಾಗಿ ಸಾಗುತ್ತಿದ್ದು, ಈಗಾಗಲೇ ನೂರಾರು ಮೂರ್ತಿಗಳನ್ನು ಬುಕ್ಕಿಂಗ್ ಮಾಡಲಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾ ಕಾಟದಿಂದ ವ್ಯಾಪಾರವಿಲ್ಲದೆ ಕಂಗಲಾಗಿದ್ದ ಮೂರ್ತಿ ತಯಾರಕರು ಅಪ್ಪು ಜೊತೆಗಿರುವ ಗಣೇಶ ಮೂರ್ತಿಗಳಿಗೆ ಇನ್ನಿಲ್ಲದ ಬೇಡಿಕೆ ಹೆಚ್ಚಾಗಿರುವುದರಿಂದ ಭಾರಿ ಖುಷಿಯಲ್ಲಿದ್ದಾರೆ. ಮಾತ್ರವಲ್ಲ ಭರ್ಜರಿ ವ್ಯಾಪಾರಕ್ಕೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳ ಹರ್ಷ: ಅಪ್ಪು ಸಾರ್ ಎಲ್ಲೂ ಹೋಗಿಲ್ಲ. ನಮ್ಮ ಜೊತೆಗೆ ಇದ್ದಾರೆ. ಈ ಬಾರಿ ಗಣೇಶನ ಜೊತೆಗೆ ಅವರು ನಮ್ಮ ಮನೆಗಳಿಗೆ ಬರ್ತಿದ್ದಾರೆ. ಹೀಗಾಗಿ ಈ ಬಾರಿಯ ಗಣೇಶ ಹಬ್ಬ ನಮಗೆ ವಿಶೇಷವಾದ ಹಬ್ಬ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ ಅಪ್ಪು ಅಭಿಮಾನಿಗಳು.

ಗಣೇಶ ಮೂರ್ತಿ ಜೊತೆಗೆ ಅಪ್ಪು ಅವರ ಮೂರ್ತಿ ತಯಾರಿಸಲು ಮುಂದಾಗಿರುವ ಕಲಾವಿದರಿಗೆ ನಮ್ಮ ಅಭಿನಂದನೆಗಳು ಅವರ ಪರಿಶ್ರಮದಿಂದ ನಾವು ಈ ಬಾರಿ ಇಷ್ಟದೇವರು ಗಣೇಶನಿಗೆ ಪೂಜೆ ಸಲ್ಲಿಸುವುದರ ಜೊತೆಗೆ ಇಷ್ಟದ ಕಲಾವಿದನಿಗೂ ಪೂಜೆ ಸಲ್ಲಿಸಬಹುದಾಗಿದೆ ಎಂದು ಅಪ್ಪು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Articles You Might Like

Share This Article