ಬೆಂಗಳೂರು,ಸೆ.1-ಗಣೇಶ ಚತುರ್ಥಿಯ ದಿನವಾದ ನಿನ್ನೆ ಒಂದೇ ದಿನ ನಗರದಲ್ಲಿ 1,59 ಲಕ್ಷ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ನಗರದಲ್ಲಿ ಸ್ಥಾಪಿಸಿರುವ ಮೊಬೈಲ್ ಟ್ಯಾಂಕರ್ಗಳು ಹಾಗೂ ಕಲ್ಯಾಣಿ ಮತ್ತು ಹೊಂಡಗಳಲ್ಲಿ ಒಟ್ಟು 1,59,980 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿರುತ್ತದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಸರ್ಜನೆ ಮಾಡಿರುವ ಮಣ್ಣಿನ ಹಾಗೂ ಪ್ಲಾಸ್ಟರ್ ಆಫ್ ಪ್ಯಾರೀಸ್(ಪಿಓಪಿ) ಗಣೇಶ ಮೂರ್ತಿಗಳ ವಿಸರ್ಜನೆ ಮಾಡಿರುವ ವಿವರ ಈ ಕೆಳಕಂಡತಿದೆ. ಪಶ್ಚಿಮ ವಲಯದಲ್ಲಿ 34,471ಮಣ್ಣಿನ ಗಣೇಶ ಮೂರ್ತಿಗಳು ಹಾಗೂ 306 ಪಿಓಪಿ ಗಣೇಶ ಮೂರ್ತಿಗಳು, ದಕ್ಷಿಣ ವಲಯದಲ್ಲಿ 68,521ಮಣ್ಣಿನ ಗಣೇಶ ಮೂರ್ತಿಗಳು, 11,402 ಪಿಓಪಿ ಗಣೇಶ ಮೂರ್ತಿಗಳು, ದಾಸರಹಳ್ಳಿ ವಲಯದಲ್ಲಿ 1,382 ಮಣ್ಣಿನ ಗಣೇಶ ಮೂರ್ತಿಗಳು, 22ಪಿಓಪಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಪೂರ್ವ ವಲಯದಲ್ಲಿ 12750 ಮಣ್ಣಿನ ಗಣೇಶ ಮೂರ್ತಿಗಳು, ಆರ್.ಆರ್.ನಗರದಲ್ಲಿ 14479 ಮಣ್ಣು, 152 ಪಿಓಪಿ ಮೂರ್ತಿಗಳು, ಬೊಮ್ಮನಹಳ್ಳಿ ವಲಯದಲ್ಲಿ 6,136 ಮಣ್ಣು ಹಾಗೂ 131ಪಿಓಪಿ ಮೂರ್ತಿಗಳು, ಯಲಹಂಕ ವಲಯದಲ್ಲಿ 6000 ಮಣ್ಣು ಹಾಗೂ 73 ಪಿಓಪಿ, ಮಹದೇವಪುರ ವಲಯದಲ್ಲಿ 4155 ಮಣ್ಣಿನ ಗಣಪತಿಗಳನ್ನು ವಿಸರ್ಜನೆ ಮಾಡಲಾಗಿದೆ.
ಯಡಿಯೂರು ಕೆರೆಯಲ್ಲೇ ಹೆಚ್ಚು: ದಕ್ಷಿಣ ವಲಯದ ಯಡಿಯೂರು ಕೆರೆಯಲ್ಲಿ ನಿನ್ನೆ ಒಂದೇ ದಿನ 58 ಸಾವಿರಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. 55,500 ಮಣ್ಣಿನ ಮೂರ್ತಿಗಳು, 2300 ಗೋ ಸಗಣಿಯಿಂದ ತಯಾರಿಸಿದ್ದ ಮೂರ್ತಿಗಳು ಹಾಗೂ ಕೇವಲ 200 ರಾಸಾಯನಿಕ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ ಎಂದು ಬೆಂಗಳೂರು ದಕ್ಷಿಣ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಜನ ಹೆಚ್ಚು ಬುದ್ದಿವಂತರಾಗಿದ್ದು, ರಾಸಾಯನಿಕ ಬಳಸುವ ಪಿಓಪಿ ಗಣೇಶ ಮೂರ್ತಿಗಳಿಗಿಂತ ಮಣ್ಣಿನ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹವಾಗಿದೆ.