ಬೆಂಗಳೂರು,ಆ.25- ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಕುರಿತು ಗಂಭೀರ ಚಿಂತನೆ ಮಾಡಬೇಕಿದೆ. ಅಧಿಕಾರಿಗಳಿಂದ ಮಾಹಿತಿ ಪಡೆದು, ಯಾವ ಸಂದರ್ಭದಲ್ಲಿ ಏನು ಕ್ರಮ ತೆಗೆದುಕೊಳ್ಳಬೇಕೆಂದು ಸೂಕ್ತ ನಿರ್ಧಾರ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆ ಬಹಳ ಪ್ರಮುಖ ಆಗಿದೆ. ಗಣೇಶ ಕೂರಿಸುವ ಸಂಬಂಧ ಇಂದು ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸಭೆ ಮಾಡುತ್ತಿದ್ದಾರೆ. ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಸಂಬಂಧ ನನಗೆ ಯಾವುದೇ ಮನವಿಗಳು ಬಂದಿಲ್ಲ. ಕಾನೂನು ಸುವ್ಯವಸ್ಥೆ ಮುಖ್ಯವಾಗಿದ್ದು, ಜಿಲ್ಲಾಧಿಕಾರಿಗಳಿಗೆ ಕೊಟ್ಟಿದ್ರೆ ಅವರು ಸೂಕ್ತ ಸೂಚನೆ ಕೊಡ್ತಾರೆ.
ಮುಂದೆ ಕನ್ನಡ ರಾಜ್ಯೋತ್ಸವ ಮಾಡಲು ಆದೇಶ ಹೊರಡಿಸಿದ್ದೇನೆ. ಈಗ ಗಣೇಶೋತ್ಸವದ ಬಗ್ಗೆ ನಾನು ಕೂಡ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದೇನೆ. ಆದರೆ ಗಣೇಶ ಹಬ್ಬ ಆಚರಣೆಗೆ ಇನ್ನು ನಿರ್ಧಾರ ಮಾಡಿಲ್ಲ. ಸೂಕ್ತ ಸಮಯದಲ್ಲಿ ತೀರ್ಮಾನ ಮಾಡುತ್ತೇವೆ.
ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆ ಮಾಡಲು ನನಗೆ ಯಾವುದೇ ಅರ್ಜಿ ಬಂದಿಲ್ಲ ಅಧಿಕಾರಿಗಳಿಗೆ ಅರ್ಜಿ ಬಂದಿದೆ. ಆಗಸ್ಟ್ 15ಂದು ಧ್ವಜಾರೋಹಣ ಸಂದರ್ಭದಲ್ಲಿ ಗೊಂದಲ ಆಗದಂತೆ ನೋಡಿಕೊಂಡಿದ್ದೆವು. ಹೇಗೆ ನಿಭಾಯಿಸಬೇಕು ಎಂದು ನಮಗೆ ಗೊತ್ತಿದೆ ಎಂದರು.
ಈಗ ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಶಾಸಕ ಸಿ.ಟಿ.ರವಿ ಪತ್ರ ಬರೆದ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಸಭೆ ಮಾಡಿ ತೀರ್ಮಾನ ಮಾಡುತ್ತೇವೆ. ಕಾಪೆರ್ರೇಷನ್ ಅಧಿಕಾರಿಗಳು ಗಣೇಶ ಹಬ್ಬದ ಸಂಬಂಧ ಇಂದು ಒಟ್ಟಾರೆ ಸಭೆ ನಡೆಸಲಿದ್ದಾರೆ. ಬಳಿಕ ಸೂಕ್ತ ಸಮಯದಲ್ಲಿ ನಾವು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಸರ್ಕಾರದ ಮೇಲೆ 40% ಕಮಿಷನ್ ಆರೋಪ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದಲ್ಲಿ 24 ಶಾಸಕರು ಇದ್ದಾರೆಂದು ಹೇಳಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ, ಡಿಕೆಶಿಯವರು ಕೂಡ ಇದ್ದಾರೆ ಎಂಬುದು ಸಾಬೀತಾದಂತಾಗಿದೆ ಎಂದು ವ್ಯಂಗ್ಯವಾಡಿದರು.
ಅವರ ಬಳಿ ದಾಖಲೆ ಇದ್ದರೆ ಲೋಕಯುಕ್ತಕ್ಕೆ ಕೊಡಲಿ, ಯಾವ ಮಂತ್ರಿ ಗಳು ಅವರನ್ನು ಬೆದರಿಸುತ್ತಾರೋ ಅವರ ಬಗ್ಗೆಯೂ ಅವರು ಮಾಹಿತಿ ನೀಡಲಿ. ಆದರೆ ದಿನ ಗಾಳಿಯಲ್ಲಿ ಗುಂಡು ಹೊಡೆದರೆ ಏನು ಮಾಡುವುದಕ್ಕೆ ಆಗುತ್ತದೆ ಎಂದು ಪ್ರಶ್ನಿಸಿದರು.