ಬೆಂಗಳೂರಲ್ಲಿ ಗಣಪತಿ ಪ್ರತಿಷ್ಠಾಪನೆಗೆ ಯಾವುದೇ ನಿರ್ಬಂಧ ಇಲ್ಲ

Social Share

ಬೆಂಗಳೂರು,ಆ.8- ವಿವಾದಾತ್ಮಕ ಚಾಮರಾಜಪೇಟೆಯ ಈದ್ಗಾ ಮೈದಾನ ಕಂದಾಯ ಇಲಾಖೆ ಸೇರಿದ್ದು, ಇನ್ನು ಮುಂದೆ ಇಲ್ಲಿ ಯಾವುದೇ ರೀತಿಯ ಸಭೆ ಸಮಾರಂಭ ಹಾಗೂ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಕಂದಾಯ ಇಲಾಖೆಯಿಂದ ಅನುಮತಿ ಪಡೆಯಬೇಕೆಂದು ಕಂದಾಯ ಸಚಿವ ಆರ್.ಅಶೋಕ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಇದು ವಕ್ ಇಲಾಖೆಗೆ ಸೇರಿತ್ತು. ಇದೀಗ ನ್ಯಾಯಾಲಯದ ಸೂಚನೆಯಂತೆ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಇದು ಕಂದಾಯ ಇಲಾಖೆಗೆ ಸೇರಿದೆ ಎಂದು ಸ್ಪಷ್ಟಪಡಿಸಿದರು.

ಇಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಭೆ, ಸಮಾರಂಭಗಳು, ನಮಾಜ್, ಪ್ರಾರ್ಥನೆ ಮಾಡುವುದು ಸೇರಿದಂತೆ ಯಾವುದೇ ಕಾರ್ಯಕ್ರಮಗಳನ್ನು ನಡೆಸಬೇಕಾದರೆ ಕಡ್ಡಾಯವಾಗಿ ಕಂದಾಯ ಇಲಾಖೆಯ ಅನುಮತಿ ಪಡೆಯಬೇಕು. ಅನುಮತಿ ಪಡೆಯದೆ ಯಾವುದೇ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೇಳುತ್ತಿದ್ದಾರೆ. ಆದರೆ ನನ್ನ ಬಳಿ ಇದುವರೆಗೂ ಯಾರು ಕೂಡ ಇಂಥದ್ದೇ ಕಾರ್ಯಕ್ರಮ ನಡೆಸುತ್ತೇವೆ ಎಂದು ಮನವಿ ಪತ್ರವನ್ನು ಸಲ್ಲಿಸಿಲ್ಲ. ಯಾವುದಾದರೂ ರ್ನಿಧಿಷ್ಟ ಸಂಘಟನೆಗಳು ಮನವಿ ಮಾಡಿದರೆ ಇಲಾಖೆಯು ಪರಿಶೀಲನೆ ನಡೆಸಲಿದೆ ಎಂದರು. ಚಾಮರಾಜಪೇಟೆಯಲ್ಲಿರುವ ಈ ಮೈದಾನವನ್ನು ಮೊದಲು ಕೆಲವರು ನಿರ್ವಹಣೆ ಮಾಡುತ್ತಿದ್ದಾರೆ.

ಈ ಸ್ವತ್ತಿನ ಮೇಲೆ ಯಾರಾದರೂ ಹಕ್ಕು ಸ್ಥಾಪಿಸುವುದಾದರೆ ದಾಖಲೆಗಳನ್ನು ಸಲ್ಲಿಸಬೇಕೆಂದು ಸೂಚನೆ ನೀಡಿತ್ತು. ಯಾರೊಬ್ಬರೂ ದಾಖಲೆಗಳನ್ನು ಸಲ್ಲಿಸಿಲ್ಲ. ಕಂದಾಯ ಇಲಾಖೆಗೆ ಸೇರಿದ್ದು ಎಂಬುದಕ್ಕೆ ನಮ್ಮ ಬಳಿ ದಾಖಲೆಗಳಿವೆ ಎಂದು ಹೇಳಿದರು. ಯಾರೇ ಏನೇ ಮಾಡಬೇಕಾದರೂ ಇಲಾಖೆಯಿಂದ ಅನುಮತಿ ಪಡೆಯಬೇಕು. ಅನಗತ್ಯವಾಗಿ ಗೊಂದಲ ಸೃಷ್ಟಿಸುವುದನ್ನು ಯಾರೂ ಮಾಡಬಾರದು. ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿದರು.

ಗಣೇಶೋತ್ಸವಕ್ಕೆ ನಿರ್ಬಂಧವಿಲ್ಲ: ಕಳೆದ ಎರಡು ವರ್ಷಗಳಿಂದ ಕೋವಿಡ್‍ನಿಂದ ಗಣಪತಿ ಹಬ್ಬಕ್ಕೆ ನಿಬಂಧನೆಗಳನ್ನು ವಿಧಿಸಲಾಗಿತ್ತು. ಹಬ್ಬಕ್ಕಿಂತ ಜನರ ಪ್ರಾಣ ರಕ್ಷಣೆಯನ್ನು ಪರಿಗಣಿಸಿ ಈ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಎಲ್ಲರೂ ಕೂಡ ಇದಕ್ಕೆ ಸಹಕಾರ ಕೊಟ್ಟಿದ್ದಾರೆ ಎಂದರು.

ಈ ವರ್ಷ ಕೋವಿಡ್ ನಿಯಂತ್ರಣಕ್ಕೆ ಬಂದಿರುವ ಪ್ರತಿ ವಾರ್ಡ್‍ನಲ್ಲಿ ಒಂದು ವಾರ್ಡ್‍ಗೆ ಒಂದೇ ಗಣಪತಿ ಪ್ರತಿಷ್ಠಾಪನೆಗೆ ಅನುಮತಿ ನೀಡಲಾಗಿತ್ತು. ಇದರಿಂದ ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಎಲ್ಲ ವಾರ್ಡ್‍ಗಳಲ್ಲಿ ಎಷ್ಟು ಗಣಪತಿಗಳನ್ನಾದರೂ ಇಡಬಹುದು. ಅಲ್ಲದೆ ಈ ಹಿಂದೆ ಇದ್ದಂತೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಅಶೋಕ್ ಸ್ಪಷ್ಟಪಡಿಸಿದರು.

Articles You Might Like

Share This Article