ಗಣೇಶನ ಜೊತೆ ಸಾರ್ವಕರ್ ಫೋಟೋ ಇಟ್ಟು ಹಬ್ಬ ಆಚರಣೆಗೆ ಮುಂದಾದ ಸಂಘಟನೆಗಳು

Social Share

ಬೆಂಗಳೂರು,ಆ.20- ಈಗಾಗಲೇ ಒಂದಿಲ್ಲೊಂದು ವಿವಾದಗಳು ಭುಗಿಲೆದ್ದಿರುವ ಸಂದರ್ಭದಲ್ಲೇ ಈ ಬಾರಿಯ ಗಣೇಶೋತ್ಸವವು ಸಂಘರ್ಷಕ್ಕೆ ಎಡೆ ಮಾಡಿಕೊಡುವ ಸಂಭವವಿದೆ. ಏಕೆಂದರೆ ಹಿಂದೂಪರ ಸಂಘಟನೆಗಳು ಗಣೇಶೋತ್ಸವ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾರ್ವಕರ್ ಭಾವಚಿತ್ರವನ್ನು ಹಳ್ಳಿ ಹಳ್ಳಿಗಳಲ್ಲಿ ಇಡಲು ಮುಂದಾಗಿವೆ. ಹೀಗಾಗಿ ರಾಜ್ಯದಲ್ಲಿ ಮತ್ತೊಂದು ಸುತ್ತಿನ ಗಣೇಶ ಸಂಘರ್ಷ ಭುಗಿಲೇಳುವ ಸಾಧ್ಯತೆಗಳಿವೆ.

ಶಿವಮೊಗ್ಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ವೀರ್ ಸಾರ್ವಕರ್ ಭಾವಚಿತ್ರ ಹಾಕಿದ್ದರಿಂದ ಅನ್ಯಕೋಮಿನ ಯುವಕರು ಪ್ರತಿಭಟನೆ ನಡೆಸಿ ದೊಡ್ಡ ರಾದ್ದಂತವನ್ನೇ ಸೃಷ್ಟಿಸಿದ್ದರು. ಗಲಭೆಯಲ್ಲಿ ಓರ್ವ ಯುವಕನಿಗೆ ಚಾಕು ಇರಿಲಾಗಿತ್ತು.
ಈಗ ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಹಿಂದೂಪರ ಸಂಘಟನೆಗಳು ಹಿಂದೂಗಳ ಐಕ್ಯತೆಯ ಹಬ್ಬವೆಂದೇ ಹೇಳಲಾಗುವ ಗಣೇಶೋತ್ಸವದ ಸಂದರ್ಭದಲ್ಲಿ ಸಾರ್ವಕರ್ ಭಾವಚಿತ್ರ ಹಾಕಲು ಮುಂದಾಗಿವೆ.

ಈ ಮೂಲಕ ಸಾರ್ವಕರ್‍ನ್ನು ವಿರೋಧಿಸುತ್ತಿದ್ದ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳಿಗೆ ಠಕ್ಕರ್ ಕೊಡಲು ಹಿಂದೂಪರ ಸಂಘಟನೆಗಳು ಸಿದ್ದತೆ ನಡೆಸಿವೆ ಎಂದು ಹೇಳಲಾಗಿದೆ. ವಿಶೇಷವಾಗಿ ಬಿಜೆಪಿ ಪ್ರಾಬಲ್ಯವಿರುವ ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ಗ್ರಾಮಗಳಲ್ಲೂ ಗಣೇಶೋತ್ಸವದ ವೇಳೆ ಸಾರ್ವಕರ್ ಪ್ರತಿಮೆ ಹಾಕಲು ಚಿಂತನೆ ನಡೆಸಲಾಗಿದೆ.

ಕೆಲವು ಸಂಘಟನೆಗಳಿಗೆ ರಾಜಕೀಯ ಪಕ್ಷವೊಂದರ ಮುಖಂಡರು, ಶಾಸಕರು, ಸಂಸದರು, ಸಚಿವರು ಸೇರಿದಂತೆ ಜನಪ್ರತಿನಿಧಿಗಳೇ ಮುಂದೆನಿಂತು ಸಾರ್ವಕರ್ ಪ್ರತಿಮೆ ಕೂರಿಸಲು ಆರ್ಥಿಕ ನೆರವು ಸೇರಿದಂತೆ ಎಲ್ಲ ರೀತಿಯ ಬಾಹ್ಯ ಬೆಂಬಲವನ್ನು ನೀಡಿದ್ದಾರೆ.

ಇನ್ನು 2023ರ ವಿಧಾನಭೆ ಚುನಾವಣೆಗೆ ಕಣ್ಣಿಟ್ಟಿರುವ ಕೆಲವು ನಾಯಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಹಿಂದೂ ಮತಗಳ ಕ್ರೋಢಿಕರಣಕ್ಕೆ ಮುಂದಾಗಿದ್ದು, ಗಣೇಶಮೂರ್ತಿ ಕೂರಿಸಲು ಹಾಗೂ ಸಾರ್ವಕರ್ ಪ್ರತಿಮೆ ಅಳವಡಿಕೆಗೆ ಯುವಕ ಮಂಡಳಿಗೆ ಹಾಕಿದ ನೆರವನ್ನು ಕೊಡುತ್ತಿದ್ದಾರೆ.

ಸಾರ್ವಕರ್ ಪ್ರತಿಮೆಯನ್ನು ವಿರೋಧಿಸಿದವರಿಗೆ ತಿರುಗೇಟು ನೀಡುವುದು ಇದರ ಉದ್ದೇಶವಾಗಿದೆ. ಹೀಗಾಗಿ ಈ ಬಾರಿಯ ಗಣೇಶೋತ್ಸವ ಹಿಂದೆಂದಿಗಿಂತಲೂ ವಿಭಿನ್ನವಾಗಿರುವುದರಲ್ಲಿ ಸಂಶಯ ಎನ್ನಲಾಗುತ್ತಿದೆ.

Articles You Might Like

Share This Article