ಬೆಂಗಳೂರು, ಜ.15- ಜಲಸಂಪನ್ಮೂಲ ಇಲಾಖೆಯ ಎಸ್‍ಸಿ-ಎಸ್‍ಟಿ ಮತ್ತು ಟಿಎಸ್‍ಪಿ ಯೋಜನೆಯಡಿ ಹಂಚಿಕೆಯಾದ ಅನುದಾನದಲ್ಲಿ ಶೇ.50ರಷ್ಟು ಗಂಗಾ ಕಲ್ಯಾಣ, ಶೇ.50ರಷ್ಟು ಮೂಲ ಸೌಕರ್ಯ ಅಭಿವೃದ್ಧಿಗೆ ಬಳಕೆ ಮಾಡಲು ಆದೇಶ ಮಾಡಲಾಗಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ಅವಯಲ್ಲಿ ಜೆಡಿಎಸ್ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅನ್ಯಾಯ ಮಾಡುವ ಪ್ರಶ್ನೆಯೇ ಬರುವುದಿಲ್ಲ. ಶಾಸಕರು ಹೆಚ್ಚು ಅನುದಾನ ಕೇಳಿದ್ದಾರೆ. ಅದರ ಪರಿಶೀಲನೆ ಮಾಡಲಾಗುವುದು ಎಂದರು.
ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ ಅನುಮೋದಿಸಿರುವ ಕ್ರಿಯಾ ಯೋಜನೆ ಅನ್ವಯ ನಿಗಮಗಳ ವ್ಯಾಪ್ತಿಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಬರುವ ಬೇಡಿಕೆಗಳನ್ನು ಅವಲೋಕಿಸಿ ಅನುದಾನ ಹಂಚಿಕೆ ಕುರಿತು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದು ಕ್ರಮ ವಹಿಸಲಾಗುತ್ತದೆ ಎಂದರು. ಹೇಮಾವತಿ ಜಲಾನಯನ ಯೋಜನೆ ವ್ಯಾಪ್ತಿಯ ನಮ್ಮ ಕ್ಷೇತ್ರ ಮುಳುಗಡೆ, ಪುನರ್ವಸತಿ ಎಲ್ಲವೂ ಬರುತ್ತಿದೆ. ಆದರೆ, ಅನುದಾನ ಕಡಿಮೆಯಾಗಿದೆ ಎಂದು ಎಚ್.ಕೆ.ಕುಮಾರಸ್ವಾಮಿ ಆಕ್ಷೇಪಿಸಿದರು.
ವಿಶ್ವೇಶ್ವರಯ್ಯ ನಿಗಮ ವ್ಯಾಪ್ತಿಯಲ್ಲಿ ಹಾಸನದ ಒಂದು ಹಳ್ಳಿಯೂ ಬರುವುದಿಲ್ಲ. ಅಲ್ಲಿ ಹೆಚ್ಚು ಅನುದಾನ ಕೊಟ್ಟು ನಮ್ಮ ಕ್ಷೇತ್ರಕ್ಕೆ ಕಡಿಮೆ ಅನುದಾನವಿದೆ. ಈ ಆರ್ಥಿಕ ವರ್ಷ ಮುಗಿಯಲು ಒಂದೂವರೆ ತಿಂಗಳು ಮಾತ್ರ ಉಳಿದಿದೆ.
ಎಸ್‍ಸಿ-ಎಸ್‍ಟಿ, ಟಿಎಸ್‍ಪಿ ಯೋಜನೆಯಡಿ ಅನುದಾನವನ್ನು ಈ ವರ್ಷ ಮೂಲ ಸೌಕರ್ಯಕ್ಕೆ ನೀಡಿ ಎಂದು ಆಗ್ರಹಿಸಿದರು.
