ಗಬ್ದೆದ್ದು ನಾರಲಿದೆ ಸಿಲಿಕಾನ್‍ ಸಿಟಿ ಬೆಂಗಳೂರು

ಬೆಂಗಳೂರು, ಮೇ 20- ಮಳೆಯಿಂದಾಗಿ ಲೇಕ್ ಸಿಟಿಯಾಗಿರುವ ಸಿಲಿಕಾನ್ ಸಿಟಿ ಮತ್ತೆ ಗಾರ್ಬೇಜ್ ಸಿಟಿಯಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ.
ಮೊನ್ನೆ ರಾತ್ರಿ ಸುರಿದ ರಕ್ಕಸ ಮಳೆಯಿಂದಾಗಿ ನಗರದ ಕಸ ಸಂಗ್ರಹಿಸುವ ಕ್ವಾರಿಗಳು ನೀರಿನಿಂದ ತುಂಬಿ ಹೋಗಿರುವುದರಿಂದ ಕಸ ಹಾಕಲಾಗದೆ ಕ್ವಾರಿಗಳ ಬಳಿಯೇ ಕಸದ ಲಾರಿಗಳು ಸಾಲುಗಟ್ಟಿ ನಿಲ್ಲುವಂತಾಗಿದೆ.

ನಗರದ ಕಸ ಹಾಕಲಾಗುವ ಮಿಟ್ಟಗಾನಹಳ್ಳಿ ಹಾಗೂ ಕಣ್ಣಳ್ಳಿ ಕ್ವಾರಿಗಳು ನೀರಿನಿಂದ ತುಂಬಿ ಹೋಗಿವೆ. ಈ ಎರಡು ಕ್ವಾರಿಗಳಲ್ಲಿ ಮಾತ್ರ ನಗರದ ಕಸ ಹಾಕಲಾಗುತಿತ್ತು. ಈ ಕ್ವಾರಿಗಳನ್ನು ಹೊರತುಪಡಿಸಿದರೆ ನಗರದ ಕಸ ಹಾಕಲು ಬೇರೆ ಘಟಕಗಳು ಇಲ್ಲದಿರುವುದರಿಂದ ಸಮಸ್ಯೆ ಉಲ್ಬಣಗೊಂಡಿದೆ.
ಮಿಟ್ಟಗಾನಹಳ್ಳಿ ಹಾಗೂ ಕಣ್ಣಳ್ಳಿ ಕ್ವಾರಿಗಳ ಮುಂದೆ ನಿನ್ನೆಯಿಂದ ಕಸ ಹಾಕುವ ನೂರಾರು ಲಾರಿಗಳು ಕಿಮೀಗಟ್ಟಲೆ ಸಾಲುಗಟ್ಟಿ ನಿಂತಿವೆ. ಕ್ವಾರಿಯಲ್ಲಿನ ನೀರು ಕಡಿಮೆಯಾಗದಿರುವುದರಿಂದ ಇದುವರೆಗೂ ಕಸ ಹಾಕಲು ಸಾಧ್ಯವಾಗಿಲ್ಲ.

ಇಂದು ಕೂಡ ಮಳೆಯಾಗುತ್ತಿರುವುದರಿಂದ ಕಸ ತುಂಬಿರುವ ಲಾರಿಗಳು ನಿಂತಲ್ಲೇ ನಿಲ್ಲುವಂತಾಗಿವೆ. ಈ ಮಧ್ಯೆ ಕಸ ವಿಲೇವಾರಿ ಮಾಡಲು ಹೋದ ಲಾರಿಗಳು ವಾಪಸ್ ಆಗದಿರುವ ಹಿನ್ನಲೆಯಲ್ಲಿ ನಗರದಲ್ಲಿನ ಕಸ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಒಂದೇರಡು ದಿನಗಳ ಕಾಲ ಇದೇ ರೀತಿ ಮಳೆಯಾದರೆ ಕಸ ವಿಲೇವಾರಿ ಮಾಡಲು ಸಾಧ್ಯವಾಗದೆ ಇಡಿ ನಗರ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಸಂಶಯವಿಲ್ಲ.

ಕಸದ ರಾಶಿ ಮೇಲೆ ಮಳೆ ನೀರು ಬೀಳುವುದರಿಂದ ಕಸ ಕೊಳೆತು ನಾರುವುದರ ಜೊತೆಗೆ ಸೊಳ್ಳೆ ಉತ್ಪತ್ತಿ ಕೇಂದ್ರಗಳಾಗಿ ಪರಿವರ್ತನೆಗೊಳ್ಳುವ ಸಾಧ್ಯತೆಗಳಿವೆ. ಸೊಳ್ಳೆ ಹೆಚ್ಚಾದರೆ ಅದರಿಂದ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳಲಿವೆ.

ಹೀಗಾಗಿ ಸಂಬಂಧಪಟ್ಟ ಅಕಾರಿಗಳು ಕಸ ವಿಲೇವಾರಿಗೆ ಪರ್ಯಾಯ ಮಾರ್ಗೋಪಾಯಗಳನ್ನು ಕಂಡುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ.