ಬೆಂಗಳೂರು, ಫೆ.16- ಕಳೆದ ಆರು ತಿಂಗಳಿನಿಂದ ಗುತ್ತಿಗೆದಾರರಿಗೆ ಬಾಕಿ ಹಣ ಪಾವತಿ ಮಾಡದ ಹಿನ್ನೆಲೆಯಲ್ಲಿ ಶುಕ್ರವಾರದಿಂದ ನಗರದ ಕಸ ವಿಲೇವಾರಿ ಮಾಡದಿರಲು ನಿರ್ಧರಿಸಿದ್ದಾರೆ. ಬೆಂಗಳೂರು ಕಸದ ಗುತ್ತಿಗೆದಾರರು ಪ್ರತಿಭಟನೆ ತೀವ್ರಗೊಳಿಸಿದರೆ ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಐಟಿ-ಬಿಟಿ ಎಂದು ಕರೆಸಿಕೊಳ್ಳುವ ಬೆಂಗಳೂರು ಮಹಾನಗರ ಗಾರ್ಬೇಜ್ ಸಿಟಿಯಾಗಿ ಗಬ್ಬೆದ್ದು ನಾರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಬಿಬಿಎಂಪಿಯಲ್ಲಿ ಸರ್ವಾಕಾರಿ ಧೋರಣೆ, ಏಕಚಕ್ರಾಪತ್ಯ ನಡೆಸುತ್ತಿರುವ ಹಣಕಾಸು ವಿಶೇಷ ಆಯುಕ್ತ ತುಳಸಿ ಮದ್ದಿನೇನಿ ಅವರ ಧೋರಣೆಯಿಂದ ನಮಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಇದರ ವಿರುದ್ಧ ನಾವು ಅನಿವಾರ್ಯವಾಗಿ ಅನಿರ್ದಿಷ್ಟಾವ ಮುಷ್ಕರ ನಡೆಸುವುದಾಗಿ ಬಿಬಿಎಂಪಿಯ ಪಾಲಿಕೆ ಸ್ವಚ್ಛತಾ ಮತ್ತು ಗುತ್ತಿಗೆದಾರರ ಸಂಘಟನೆಗಳ ಕ್ರಿಯಾವೇದಿಕೆ ಅಧ್ಯಕ್ಷ ಸುಬ್ರಹ್ಮಣ್ಯ ಈ ಸಂಜೆಗೆ ತಿಳಿಸಿದ್ದಾರೆ.
ಪ್ರಜಾ ವಿಮೋಚನಾ ಸಮಿತಿ, ಬಿಬಿಎಂಪಿ ಅರಣ್ಯ ವಿಭಾಗದ ಗುತ್ತಿಗೆದಾರರ ಸಂಘ, ಡಿಇಒ ಮತ್ತು ಐಟಿ ನೌಕರರ ಸಂಘ, ತೋಟಗಾರಿಕೆ ಇಲಾಖೆಯ ಗುತ್ತಿಗೆದಾರರ ಸಂಘ, ವಿಶೇಷ ಚೇತನರ ಸಂಘ, ಕರ್ನಾಟಕ ಅಂಗವಿಕಲರ ಕ್ರೀಡಾ ಸಂಸ್ಥೆ, ಜಯಕರ್ನಾಟಕ ವಿಕಲಚೇತನ ರಕ್ಷಣಾ ವೇದಿಕೆ ಸೇರಿದಂತೆ ಎಂಟು ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿವೆ ಎಂದು ಹೇಳಿದರು.
ಹಣಕಾಸು ವಿಭಾಗದ ವಿಶೇಷ ಆಯುಕ್ತರ ಪಕ್ಷಪಾತ ಧೋರಣೆಯಿಂದ ನಮಗೆ ಬಾಕಿ ಬಿಲ್ ಪಾವತಿಯಾಗುತ್ತಿಲ್ಲ. ಬಾಕಿ ಬಿಲ್ ಬಿಡುಗಡೆಯಾಗುವವರೆಗೆ ನಾವು ಕಸ ವಿಲೇವಾರಿ ಮಾಡದಿರಲು ತೀರ್ಮಾನ ಮಾಡಿದ್ದೇವೆ ಎಂದು ಹೇಳಿದರು.
ಬಿಬಿಎಂಪಿ ಸುಮಾರು 300 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಕಸ ವಿಲೇವಾರಿಗಾಗಿಯೇ ಬಜೆಟ್‍ನಲ್ಲಿ ಹಣ ಇಡಲಾಗಿದ್ದರೂ ಈವರೆಗೆ ನಯಾಪೈಸೆ ಬಿಡುಗಡೆಯಾಗಿಲ್ಲ. ಹಾಗಾಗಿ ನಾವು ಪ್ರತಿಭಟನೆಯ ಹಾದಿ ಹಿಡಿದಿದ್ದೇವೆ ಎಂದು ಹೇಳಿದರು.
ಈಗಾಗಲೇ ನಾವು ಮೂರು ಬಾರಿ ಮನವಿ ಮಾಡಿದ್ದೇವೆ. ಆದರೆ, ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಈ ಬಾರಿ ಅನಿರ್ದಿಷ್ಟಾವ ಮುಷ್ಕರದ ಮೂಲಕ ಸರ್ಕಾರಕ್ಕೆ ಬಿಸಿ ತಟ್ಟಿಸಲು ಮುಂದಾಗಿದ್ದೇವೆ. ಯಾರು ಏನೇ ಭರವಸೆ ನೀಡಿದರೂ ಹಣ ಬಿಡುಗಡೆಯಾಗುವವರೆಗೆ ಪ್ರತಿಭಟನೆ ಹಿಂತೆಗೆದುಕೊಳ್ಳುವುದಿಲ್ಲ. ಖುದ್ದು ಮುಖ್ಯ ಕಾರ್ಯದರ್ಶಿಗಳೇ ಬಂದು ಭರವಸೆ ಈಡೇರಿಸುವವರೆಗೂ ನಾವು ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.
