ಬೆಂಗಳೂರು,ಫೆ.2- ಇನ್ಮುಂದೆ ನಗರದ ಜನತೆ ಕರೆಂಟ್ ಬಿಲ್ ಜತೆ ಗಾರ್ಬೆಜ್ ಯೂಸರ್ ಶುಲ್ಕ ಕೂಡ ಪಾವತಿಸುವುದು ಅನಿವಾರ್ಯವಾಗಲಿದೆ. ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿರುವ ಬಿಬಿಎಂಪಿ ಅಧಿಕಾರಿಗಳು ಸಂಪನ್ಮೂಲ ಕ್ರೋಢಿಕರಣಕ್ಕಾಗಿ ಗಾರ್ಬೆಜ್ ಯೂಸರ್ ಶುಲ್ಕ ವಸೂಲಿ ಮಾಡಲು ಅವಕಾಶ ಮಾಡಿಕೊಡುವಂತೆ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
ಸಧ್ಯ ಪಾವತಿಸುತ್ತಿರುವ ಗಾರ್ಬೆಜ್ ಸೆಸ್ ಜತೆಗೆ ಇನ್ಮುಂದೆ ಗಾರ್ಬೆಜ್ ಯೂಸರ್ ಶುಲ್ಕ ಪಾವತಿಸಲು ಜನ ಸಿದ್ದರಾಗಬೇಕಿದೆ.
ಕರೆಂಟ್ ಬಿಲ್ ಆಧಾರದ ಮೇಲೆ ಗಾರ್ಬೆಜ್ ಯೂಸರ್ ಶುಲ್ಕ ನಿಗಯಾಗಲಿದೆಯಂತೆ.
ಬಿಬಿಎಂಪಿ ಸಲ್ಲಿಸಿರುವ ಈ ಪ್ರಸ್ತಾವನೆಗೆ ನಗರಾಭಿವೃದ್ಧಿ ಇಲಾಖೆ ಅಸ್ತು ಎಂದರೆ ಜನ ಡಬಲ್ ಟ್ಯಾಕ್ಸ್ ಕಟ್ಟಲು ರೆಡಿಯಾಗಬೇಕಿದೆ.ನಗರದ ಮನೆ ಮನೆಗಳಿಂದ ಬಿಬಿಎಂಪಿ ಕಸ ಸಂಗ್ರಹ ಮಾಡುತ್ತಿದ್ದು, ಕಸ ನಿರ್ವಹಣೆಗೆ ಕೋಟ್ಯಂತರ ರೂ. ಖರ್ಚಾಗುತ್ತಿದೆ. ಹೀಗಾಗಿ ಸಂಸ್ಥೆಗೆ ಹಾಗುವ ನಷ್ಟ ಭರಿಸಿಕೊಳ್ಳುವ ಉದ್ದೇಶದಿಂದ ಗಾರ್ಬೆಜ್ ಟ್ಯಾಕ್ಸ್ ವಿಸುವ ಐಡಿಯಾ ಕಂಡುಕೊಳ್ಳಲಾಗಿದೆ.
ನಗರದಲ್ಲಿ ವಾಸಿಸುತ್ತಿರುವ ಜನ ಪ್ರತಿವರ್ಷ ಆಸ್ತಿ ತೆರಿಗೆ ಪಾವತಿಸುತ್ತಿದ್ದಾರೆ. ಆಸ್ತಿ ತೆರಿಗೆ ವಸೂಲಿ ಸಂದರ್ಭದಲ್ಲಿ ಗಾರ್ಬೆಜ್ ಸೆಸ್ ಹಾಕಲಾಗುತ್ತಿದೆ. ಈ ರೀತಿಯ ಸೆಸ್ ಹಣದಿಂದ ಕಸ ನಿರ್ವಹಣೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇರುವುದರಿಂದ ಹೊಸ ತೆರಿಗೆ ವಿಸಲು ಬಿಬಿಎಂಪಿ ಮುಂದಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಕರೆಂಟ್ ಬಿಲ್ ನೀಡುವ ಸಂದರ್ಭದಲ್ಲಿ ಗಾರ್ಬೆಜ್ ಯೂಸರ್ ಶುಲ್ಕ ವಸೂಲಿ ಮಾಡಿದರೆ ಪ್ರತಿ ತಿಂಗಳು 40 ಕೋಟಿ ರೂ.ಗಳ ಹಣ ಪಾಲಿಕೆಗೆ ಹರಿದುಬರಲಿದೆ.ಈ ರೀತಿ ಸಂಗ್ರಹವಾಗುವ 40 ಕೋಟಿ ರೂ.ಗಳನ್ನು ಕಸ ನಿರ್ವಹಣೆ ಮಾಡುವ ಗುತ್ತಿಗೆದಾರರ ಬಿಲ್ ಹಾಗೂ ಪೌರ ಕಾರ್ಮಿಕರ ಸಂಬಳಕ್ಕೆ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ.
ಈಗಾಗಲೆ ಕೊರೊನಾ ಸಂಕಷ್ಟದಿಂತ ತತ್ತರಿಸಿ ಹೋಗಿ ಜೀವನ ಸಾಗಿಸುವುದೆ ದುಸ್ತರ ಎಂಬ ಸ್ಥಿತಿಯಲ್ಲಿ ಜನ ಇದ್ದರೆ, ಬಿಬಿಎಂಪಿ ಅಧಿಕಾರಿಗಳು ಮಾತ್ರ ಹೊಸ ತೆರಿಗೆ ಹಾಕಿ ಜನರ ಮೇಲೆ ಬರೆ ಎಳೆಯಲು ಮುಂದಾಗಿರುವುದು ಮಾತ್ರ ಮೂರ್ಖತನದ ನಿರ್ಧಾರವಾಗಿದೆ.
