ಗಾರ್ಮೆಂಟ್ಸ್ ಉದ್ಯೋಗಿ ಕೊಲೆ, ಆಟೋ ಚಾಲಕ ಸೇರಿ ನಾಲ್ವರ ಸೆರೆ

Spread the love

ಬೆಂಗಳೂರು, ಅ.17- ತನ್ನ ಅಕ್ಕನನ್ನು ಕರೆದುಕೊಂಡು ಹೋಗುತ್ತಿದ್ದ ಗಾರ್ಮೆಂಟ್ಸ್ ಉದ್ಯೋಗಿಯೊಬ್ಬರನ್ನು ಆಟೋ ಚಾಲಕ ಮೂವರು ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವ ಘಟನೆ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಭಾಸ್ಕರ್ (24) ಕೊಲೆಯಾಗಿರುವ ಗಾರ್ಮೆಂಟ್ಸ್ ಉದ್ಯೋಗಿ. ಇವರು ಮೂಲತಃ ಹೊಸೂರು ತಾಲ್ಲೂಕಿನ ಬಿ.ಮದ್ದನಪಲ್ಲಿಯವರು.

ಹೊಸೂರು ಸಮೀಪದ ಬಾಗಲೂರಿನ ಗಾರ್ಮೆಂಟ್ಸ್ ನಲ್ಲಿ ಕೊಲೆಯಾದ ಭಾಸ್ಕರ್ ಹಾಗೂ ಮುನಿರಾಜುವಿನ ಅಕ್ಕ ಕೆಲಸ ಮಾಡುತ್ತಿದ್ದರು. ಹಾಗಾಗಿ ಇಬ್ಬರಿಗೂ ಪರಿಚಯವಾಗಿ ಸ್ನೇಹಿತರಾಗಿದ್ದರು. ಮುನಿರಾಜುವಿನ ಅಕ್ಕ ಮಾಲೂರು ತಾಲ್ಲೂಕಿನ ಬಂಟಳ್ಳಿಯಲ್ಲಿ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು.

ಕಳೆದ 15 ದಿನಗಳ ಹಿಂದೆ ಪತಿ-ಪತ್ನಿ ನಡುವೆ ಜಗಳವಾಗಿದ್ದು, ಕೋಪದ ಭರದಲ್ಲಿ ಗಂಡ ಪತ್ನಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಆಕೆ ತನ್ನಿಬ್ಬರು ಮಕ್ಕಳೊಂದಿಗೆ ಅನ್ನಪೂರ್ಣೇಶ್ವರಿ ನಗರದ ಚಂದ್ರಶೇಖರ ಲೇಔಟ್‍ನಲ್ಲಿರುವ ತವರು ಮನೆಗೆ ವಾಪಸ್ ಬಂದಿದ್ದಾಳೆ. ಈ ವಿಷಯ ಗೊತ್ತಾಗಿ ಭಾಸ್ಕರ್ ನಿನ್ನೆ ಸಂಜೆ ಇಲ್ಲಿಗೆ ಬಂದು ಆಕೆಯನ್ನು ಮಾತನಾಡಿಸಿ ಮನವೊಲಿಸಿ ಬೇರೆ ಮನೆ ಮಾಡಿಕೊಡುವುದಾಗಿ ಹೇಳಿದ್ದಾನೆ.

ನಂತರ ಆಕೆ ಮತ್ತು ಇಬ್ಬರು ಮಕ್ಕಳೊಂದಿಗೆ ಆಟೋದಲ್ಲಿ ಕರೆದೊಯ್ಯುತ್ತಿದ್ದ. ಅಷ್ಟರಲ್ಲಿ ಮಹಿಳೆಯ ಹಿರಿಯ ಮಗ ಆಟೋದಿಂದ ಇಳಿದು ತನ್ನ ಸೋದರ ಮಾವ ಆಟೋ ಚಾಲಕ ಮುನಿರಾಜುಗೆ ಈ ವಿಷಯ ತಿಳಿಸಿದ್ದಾನೆ. ತಕ್ಷಣ ಮುನಿರಾಜು ತನ್ನ ಮೂವರು ಸ್ನೇಹಿತರೊಂದಿಗೆ ಭಾಸ್ಕರ್ ಹೋಗುತ್ತಿದ್ದ ಆಟೋವನ್ನು ಹಿಂಬಾಲಿಸಿ ಸುಂಕದಕಟ್ಟೆ ಬಳಿ ತಡೆದು ತನ್ನ ಅಕ್ಕ ಮತ್ತು ಮಕ್ಕಳನ್ನು ಮನೆಗೆ ಕರೆತಂದು ಬಿಟ್ಟಿದ್ದಾನೆ.

ಇದಾದ ನಂತರ ಭಾಸ್ಕರ್‍ನನ್ನು ಆಟೋದಲ್ಲಿ ಕೆಬ್ಬೆಹಳ್ಳದ ಸಮೀಪ ಕರೆದೊಯ್ದು ಮೂವರು ಸ್ನೇಹಿತರೊಂದಿಗೆ ಸೇರಿ ಹೊಡೆದಿದ್ದಾರೆ. ಆಗ ಆತ ತನಗೆ ಹಸಿವಾಗುತ್ತಿದೆ ಎಂದು ಹೇಳಿದ್ದರಿಂದ ಎಗ್‍ರೈಸ್ ತರಿಸಿಕೊಟ್ಟಿದ್ದಾರೆ. ತದನಂತರ ಮತ್ತೆ ಭಾಸ್ಕರ್ ಮೇಲೆ ಮುನಿರಾಜು ಹಲ್ಲೆ ಮಾಡಿದ್ದಾನೆ. ಆತ ತಕ್ಷಣ ಮೂರ್ಛೆ ಹೋಗಿದ್ದಾನೆ. ಸ್ವಲ್ಪ ಹೊತ್ತು ನೋಡಿದ ನಂತರ ಭಾಸ್ಕರ್ ಸಾವನ್ನಪ್ಪಿರುವುದು ಗೊತ್ತಾಗಿದೆ.

ಈ ವಿಷಯವನ್ನು ಮುನಿರಾಜು ತನ್ನ ತಾಯಿಗೆ ತಿಳಿಸಿ ನಂತರ ಮೃತದೇಹವನ್ನು ಬೆಳಗಿನ ಜಾವ 3 ಗಂಟೆಗೆ ಆಟೋದಲ್ಲಿ ಹಾಕಿಕೊಂಡು ಬಂದು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರಿಗೆ ಎಲ್ಲ ವಿಷಯ ತಿಳಿಸಿದ್ದಾನೆ.

ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆಟೋ ಚಾಲಕ ಮುನಿರಾಜು ಹಾಗೂ ಆತನ ಸ್ನೇಹಿತರಾದ ಮೂರ್ತಿ, ನಾಗರಾಜು, ಪ್ರಶಾಂತ್‍ನನ್ನು ಬಂಸಿ ತನಿಖೆ ಮುಂದುವರೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದಲ್ಲಿಡಲಾಗಿದೆ.

Facebook Comments