ಹೊಟೇಲ್‍ನಲ್ಲಿ ಸಿಲಿಂಡರ್ನಿಂದ ಅನಿಲ ಸೋರಿಕೆ: ವ್ಯಕ್ತಿಗೆ ಗಂಭೀರ ಗಾಯ

Social Share

ಬೆಂಗಳೂರು, ಜ.3- ಹೊಟೇಲ್‍ನಲ್ಲಿ ಗ್ಯಾಸ್ ಸಿಲಿಂಡರ್ನಿಂದ ಅನಿಲ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣಾ ವಾಪ್ತಿಯಲ್ಲಿ ನಡೆದಿದೆ. ಮಹೇಶ್(28) ಸುಟ್ಟ ಗಾಯಗಳಿಂದಾಗಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಂದ್ರಾಲೇಔಟ್, 2ನೆ ಮುಖ್ಯರಸ್ತೆ, ಗಣಪತಿ ಸರ್ಕಲ್ ಬಳಿ ಸಂತೃಪ್ತಿ ಉತ್ತರ ಕರ್ನಾಟಕ ಜವಾರಿ ಊಟದ ಮನೆ ಎಂಬ ಹೊಟೇಲ್‍ನಲ್ಲಿ ರಾತ್ರಿ ಎಲ್ಲಾ ಕೆಲಸ ಮುಗಿಸಿ ಹೊಟೇಲ್‍ಗೆ ಬೀಗ ಹಾಕಿ ಕೆಲಸಗಾರರು ಹೋಗಿದ್ದಾರೆ. ಆ ವೇಳೆ ಸಿಲಿಂಡರ್‍ನಿಂದ ಅನಿಲ ಸೋರಿಕೆಯಾಗಿಬಹುದು. ಇಂದು ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ಮಹೇಶ್ ಎಂಬುವರು ಅಡುಗೆ ಮಾಡಲು ಹೊಟೇಲ್‍ಗೆ ಬಂದಿದ್ದಾರೆ.
ಆ ವೇಳೆ ಅನಿಲ ಸೋರಿಕೆಯಾಗಿರುವುದು ಇವರ ಗಮನಕ್ಕೆ ಬಂದಿಲ್ಲ. ಸ್ಟೌವ್ ಆನ್ ಮಾಡುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ಮಹೇಶ್ ಅವರಿಗೆ ಬೆಂಕಿ ತಗುಲಿದ ಪರಿಣಾಮ ಚೀರಿಕೊಂಡು ಹೊರಗೆ ಬಂದಿದ್ದಾರೆ. ತಕ್ಷಣ ಅಕ್ಕಪಕ್ಕದವರು ಅಗ್ನಿ ಶಾಮಕ ದಳಕ್ಕೆ ವಿಷಯ ತಿಳಿಸಿ ಬೆಂಕಿ ಆರಿಸಲು ಯತ್ನಿಸಿದ್ದಾರೆ. ಅಗ್ನಿ ಶಾಮಕ ಸಿಬ್ಬಂದಿ ವಾಹನದೊಂದಿಗೆ ಆಗಮಿಸಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಚಂದ್ರಾಲೇಔಟ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗಾಯಾಳು ಮಹೇಶ್ ಅವರನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Articles You Might Like

Share This Article