ಸಿಲಿಂಡರ್‌ನಿಂದ ಅನಿಲ ಸೋರಿಕೆಯಾಗಿ ದಂಪತಿ ಸಾವು

ಬೆಂಗಳೂರು, ನ.12- ಚಿಕ್ಕ ಮನೆಯೊಂದರಲ್ಲಿ ಸಿಲಿಂಡರ್‍ನಿಂದ ಅನಿಲ ಸೋರಿಕೆಯುಂಟಾಗಿ ದಂಪತಿ ಉಸಿರುಗಟ್ಟಿ ಮಲಗಿದ್ದಲ್ಲೇ ಮೃತಪಟ್ಟಿರುವ ಧಾರುಣ ಘಟನೆ ಬೇಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮೂಲತಃ ಆಂಧ್ರಪ್ರದೇಶದ ಚಿತ್ತೂರು ನಿವಾಸಿಗಳಾದ ನಾಗಮುನಿ (36) ಮತ್ತು ಪದ್ಮಾವತಿ (30) ಮೃತಪಟ್ಟ ದಂಪತಿ. ದೇವರ ಚಿಕ್ಕನಹಳ್ಳಿಯ ಚಿಕ್ಕ ಮನೆಯಲ್ಲಿ ದಂಪತಿ ವಾಸವಾಗಿದ್ದರು.

ಇವರ ಇಬ್ಬರು ಮಕ್ಕಳು ಚಿತ್ತೂರಿನಲ್ಲಿಯೇ ಇದ್ದಾರೆ. ನಾಗಮುನಿ ಪ್ಲೈವುಡ್ ಅಂಗಡಿಯಲ್ಲಿ ಹಾಗೂ ಪತ್ನಿ ಪದ್ಮಾವತಿ ಗಾರ್ಮೆಂಟ್ಸ್‍ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ನಿನ್ನೆ ಸಂಜೆಯಾದರೂ ಮನೆಯಿಂದ ಹೊರಗೆ ಬಂದಿಲ್ಲ.

ನುಮಾನಗೊಂಡ ನೆರೆಹೊರೆಯವರು ಮತ್ತು ಸಮೀಪದಲ್ಲೇ ವಾಸವಿದ್ದ ಸಂಬಂಧಿಗಳು ಮನೆ ಬಳಿ ಬಂದು ನೋಡಿದಾಗ ಒಳಗಿನಿಂದ ಚಿಲಕ ಹಾಕಿರುವುದು ಗಮನಕ್ಕೆ ಬಂದು ಕೂಗಿದ್ದಾರೆ.ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಯಾಗಿ ತಕ್ಷಣ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಬಾಗಿಲು ಒಡೆದು ನೋಡಿದಾಗ ದಂಪತಿ ಮಲಗಿದ್ದ ಸ್ಥಳದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ.

ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಗ್ಯಾಸ್ ಸಿಲಿಂಡರ್‍ನಿಂದ ಅನಿಲ ಸೋರಿಕೆವುಂಟಾಗಿ ಉಸಿರುಗಟ್ಟಿ ಮೃತಪಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಮೃತ ದೇಹಗಳನ್ನು ಸೆಂಟ್‍ಜಾನ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.