ನೆರೆ ರಾಜ್ಯದ ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಲು ಗಂಭೀರ ಚಿಂತನೆ : ಗೌರವ್ ಗುಪ್ತ

ಬೆಂಗಳೂರು,ಸೆ.6-ಕೋವಿಡ್ ಮೂರನೇ ಅಲೆಯ ಭೀತಿಯಿಂದಾಗಿ ನೆರೆ ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ನಿರ್ಬಂಧ ಹೇರಲು ಗಂಭೀರ ಚಿಂತನೆ ನಡೆಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಉಲ್ಬಣ ಕಾರಣದಿಂದಾಗಿ ನಗರದ ಎರಡು ನರ್ಸಿಂಗ್ ಕಾಲೇಜು ಸೇರಿದಂತೆ ಐದು ವಿದ್ಯಾರ್ಥಿ ವಸತಿ ಗೃಹಗಳನ್ನು ಈಗಾಗಲೇ ಕಂಟೋನ್ಮೆಂಟ್ ವಲಯ ಎಂದೂ ಗುರುತಿಸಿ, ಕಟ್ಟೆಚ್ಚರ ವಹಿಸಲಾಗಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ನೆರೆಯ ಮಹಾರಾಷ್ಟ್ರ, ಕೇರಳ ರಾಜ್ಯಗಳಲ್ಲಿ ಕೊರೋನಾ ಸೋಂಕಿತರು ಗಣನೀಯವಾಗಿ ಏರಿಕೆಯಾಗಿದ್ದು, ಅಲ್ಲಿಂದ ಬೆಂಗಳೂರಿಗೆ ಆಗಮಿಸುವ ವಿದ್ಯಾರ್ಥಿಗಳನ್ನು ಕೆಲ ಕಾಲ ನಿರ್ಬಂಧ ಹೇರಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಕೊರೊನಾದಿಂದಾಗಿ ನಾವು ಕಾಪಾಡಿಕೊಳ್ಳಲು ಮಾಸ್ಕ್ ಸೇರಿದಂತೆ ಕೋವಿಡ್ ಮಾರ್ಗ ಸೂಚಿ ಪಾಲನೆ ಮಾಡಬೇಕು. ಅಲ್ಲದೆ, ಹಬ್ಬಗಳ ಆಚರಣೆ ಸಂದರ್ಭದಲ್ಲಿ ಗುಂಪು ಗುಂಪಾಗಿ ಸೇರದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂದು ಗುಪ್ತ ಸಲಹೆ ಮಾಡಿದರು.