ಬೆಂಗಳೂರು,ಜ.12- ಇತಿಹಾಸ ಪ್ರಸಿದ್ದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸಂಕ್ರಾಂತಿ ದಿನದಂದು ಸೂರ್ಯಕಿರಣ ರಶ್ಮಿ ವೀಕ್ಷಣೆಗೆ ಈ ಬಾರಿ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗವಿಗಂಗಾಧರೇಶ್ವರ ದೇವಸ್ಥಾನ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ.
ಪ್ರತಿ ವರ್ಷ ಸಂಕ್ರಾಂತಿ ದಿನದಂದು ಸಂಜೆ 5.14ರಿಂದ 5.17ರವರೆಗೆ ಗವಿಗಂಗಾಧರೇಶ್ವರ ದೇವಸ್ಥಾನದ ಗರ್ಭಗುಡಿಯ ಶಿವಲಿಂಗದ ಮೇಲೆ ಸೂರ್ಯಕಿರಣ ರಶ್ಮಿ ಪ್ರವೇಶಿಸುವುದನ್ನು ಸಾವಿರಾರು ಜನರು ಕಣ್ತುಂಬಿಕೊಳ್ಳುತ್ತಿದ್ದರು. ಕೊರೊನಾ ಸೋಂಕು ವೇಗವಾಗ ಹರಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಗಮನದಲ್ಲಿಟ್ಟುಕೊಂಡು ಪ್ರವೇಶಕ್ಕೆ ನಿರ್ಬಂಧ ಹಾಕಲಾಗಿದೆ.
ಸಂಕ್ರಾಂತಿ ದಿನದಂದು ಸೂರ್ಯ ರಶ್ಮಿ ಕಿರಣ ವೀಕ್ಷಣೆ ಇರುವುದಿಲ್ಲ. ಹೀಗಾಗಿ ಯಾರೊಬ್ಬರೂ ಆಗಮಿಸುವ ಅಗತ್ಯವಿಲ್ಲ ಎಂದು ಕಾರ್ಯ ನಿರ್ವಹಣಾಕಾರಿ ನಾರಾಯಣಸ್ವಾಮಿ ಹಾಗೂ ಪ್ರಧಾನ ಅರ್ಚಕರಾದ ಸೋಮಸುಂದರ್ ದೀಕ್ಷಿತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
