ನಾಳೆ ಮತದಾನಕ್ಕೆ 2.7 ಲಕ್ಷ ಅರೆಸೇನೆ, 20 ಲಕ್ಷ ಪೊಲೀಸರಿಂದ ಭದ್ರತೆ
ನವದೆಹಲಿ, ಏ.28- ಹದಿನೇಳನೆ ಲೋಕಸಭೆಗೆ ಸಂಸದರನ್ನು ಚುನಾಯಿಸಲು ನಡೆಯುತ್ತಿರುವ ಮಹಾ ಚುನಾವಣೆಯ ನಾಲ್ಕನೆ ಹಂತದ ಮತದಾನ ನಾಳೆ ನಡೆಯಲಿದ್ದು, ಹಿಂದೆಂದೂ ಕಂಡು ಕೇಳರಿಯದಂತಹ ವ್ಯಾಪಕ ಬಂದೋ ಬಸ್ತ್ ಮಾಡಲಾಗಿದೆ.
ನಾಲ್ಕನೆ ಹಂತದಲ್ಲಿ ಒಂಭತ್ತು ರಾಜ್ಯಗಳು 71 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು, 2.7 ಲಕ್ಷಕ್ಕೂ ಹೆಚ್ಚು ಅರೆಸೇನಾ ಪಡೆ ಹಾಗೂ 20 ಲಕ್ಷ ರಾಜ್ಯ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಇಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಚುನಾವಣೆಗೆ ನೇಮಿಸಿರುವುದು ಭಾರತದಲ್ಲಿ ಇದೇ ಮೊದಲು ಎಂದು ಗೃಹ ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ಶಿಫಾರಸಿನ ಮೇರೆಗೆ ನಾಲ್ಕನೆ ಹಂತದ ಚುನಾವಣೆಗಾಗಿ 2710 ಅರೆಸೇನಾಪಡೆ ತುಕಡಿಗಳನ್ನು ನಿಯೋಜಿಸಲಾಗಿದೆ. ಒಂದು ತುಕಡಿಯಲ್ಲಿ 100ಕ್ಕೂ ಹೆಚ್ಚು ಸಿಬ್ಬಂದಿ ಇರುತ್ತಾರೆ. ಇದರೊಂದಿಗೆ ಒಟ್ಟು 20 ಲಕ್ಷಕ್ಕೂ ಅಧಿಕ ಪೊಲೀಸರು ಮತ್ತು ಹೋಮ್ಗಾರ್ಡ್ಗಳು 9 ರಾಜ್ಯಗಳಲ್ಲಿ ಭದ್ರತೆ ಕಾರ್ಯ ನಿರ್ವಹಿಸಲಿದ್ದಾರೆ.
ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ವ್ಯಾಪಕ ಬಂದೋಬಸ್ತ್ ನಡುವೆ ಮತದಾನ ನಡೆಯಲಿದೆ. 71 ಕ್ಷೇತ್ರಗಳಲ್ಲಿ ಒಟ್ಟು 1,40,000 ಮತಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. 12 ಕೋಟಿ 79 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಮಹಾರಾಷ್ಟ್ರದ 17, ಉತ್ತರ ಪ್ರದೇಶ ಮತ್ತು ರಾಜಸ್ತಾನದ ತಲಾ 13, ಪಶ್ಚಿಮ ಬಂಗಾಳದ ಎಂಟು, ಒಡಿಶಾ ಮತ್ತು ಮಧ್ಯಪ್ರದೇಶದ ತಲಾ ಆರು, ಬಿಹಾರದ ಐದು, ಜಾರ್ಖಂಡ್ನ ಮೂರು ಹಾಗೂ ಜಮ್ಮು ಮತುತಿ ಕಾಶ್ಮೀರದ ಒಂದು ಕ್ಷೇತ್ರಗಳಿಗೆ ನಾಳೆ ಮತದಾನವಾಗಲಿದೆ.