ಕಾಂಗ್ರೆಸ್ ತೊರೆದ ಆಜಾದ್, ರಾಹುಲ್ ಅಪ್ರಬುದ್ಧತೆ ವಿರುದ್ಧ ಟೀಕೆ

Social Share

ನವದೆಹಲಿ,ಆ.26- ಕಾಂಗ್ರೆಸ್‍ನ ಪ್ರಭಾವಿ ನಾಯಕರೊಲ್ಲಬರಾದ ಗುಲಾಂನಬಿ ಆಜಾದ್ ಇಂದು ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದು, ಕೈ ಪಡೆಗೆ ಆಘಾತ ಮೂಡಿಸಿದೆ. ಜಮ್ಮುಕಾಶ್ಮೀರ ಮೂಲದ ಗುಲಾಂ ನಬಿ ಆಜಾದ್ ಪಕ್ಷದ ಮುಂಚೂಣಿ ನಾಯಕರಲ್ಲಿ ಮೊದಲಿಗರಾಗಿದ್ದರು. ರಾಜೀವ್ ಗಾಂಧಿ ಅವರ ನಂತರ ಪಕ್ಷದಲ್ಲಿ ಗುಲಾಂ ನಬಿ ಆಜಾದ್ ಅವರ ಮಾತಿಗೆ ಹೆಚ್ಚಿನ ಮನ್ನಣೆ ಇತ್ತು.

ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಆಜಾದ್ ಅವರಿಗೆ ಅಳತೆ ಮೀರಿ ಅವಕಾಶಗಳನ್ನು ನೀಡಿದ್ದರು ಎಂಬ ಆಕ್ಷೇಪಗಳು ಇದ್ದವು. ರಾಜ್ಯಸಭೆಯ ಪ್ರತಿಪಕ್ಷದ ನಾಯಕನ ಸ್ಥಾನ, ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ಸಚಿವ ಸ್ಥಾನ, ಹಲವು ರಾಜ್ಯಗಳಲ್ಲಿ ಪಕ್ಷದ ಉಸ್ತುವಾರಿ ಸೇರಿದಂತೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲಾಗಿತ್ತು.

ಹೊಸ ಬೆಳವಣಿಗೆಯಲ್ಲಿ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯ ಸ್ಥಾನ ಸೇರಿದಂತೆ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದಾರೆ. ಆ.16ರಂದು ಜಮ್ಮುಕಾಶ್ಮೀರದ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೂ ಗುಲಾಂ ನಬಿ ಆಜಾದ್ ರಾಜೀನಾಮೆ ನೀಡಿದ್ದರು. ಮುಂದುವರೆದು ಅವರು ಇಂದು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದಲೂ ವಿಮುಕ್ತಿ ಪಡೆದಿದ್ದಾರೆ.

ಈ ಬೆಳವಣಿಗೆ ಕಾಂಗ್ರೆಸ್ ಪಾಲಿಗೆ ಅನಿರೀಕ್ಷಿತ ಎನ್ನಲಾಗಿದೆ. ಕಳೆದ ವರ್ಷ ಜಿ-23 ಗುಂಪು ಕಾಂಗ್ರೆಸ್ ನಾಯಕತ್ವದ ವಿರುದ್ಧ ಬಂಡಾಯದ ಕಹಳೆ ಊದಿತ್ತು. ಎಐಸಿಸಿಗೆ ಮತ್ತೆ ರಾಹುಲ್ ಗಾಂಧಿ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಬಾರದು ಎಂಬ ಅಭಿಪ್ರಾಯವನ್ನೊಳಗೊಂಡ ಪತ್ರವನ್ನು 23 ಹಿರಿಯ ನಾಯಕರು ಸೋನಿಯಾ ಗಾಂಧಿ ಅವರಿಗೆ ಬರೆದಿದ್ದರು.

ಅದನ್ನು ಮಾಧ್ಯಮಗಳಿಗೂ ಬಿಡುಗಡೆ ಮಾಡಲಾಗಿತ್ತು. ಈ ನಾಯಕರ ಗುಂಪಿನಲ್ಲಿ ಗುಲಾಂ ನಬಿ ಆಜಾದ್ ಮುಂಚೂಣಿ ಸ್ಥಾನ ವಹಿಸಿದ್ದರು. ನಂತರ ಬೆಳವಣಿಗೆಯಲ್ಲಿ ಪರಿಸ್ಥಿತಿ ತಿಳಿಗೊಂಡಿತ್ತು. ಆದರೂ ಕೆಲವು ನಾಯಕರು ಪಕ್ಷ ಬಿಟ್ಟು ಹೊರಹೋಗಿದ್ದಾರೆ. ಇನ್ನು ಕೆಲವರು ಪಕ್ಷದಲ್ಲೇ ಉಳಿದುಕೊಂಡು ತಟಸ್ಥವಾಗಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಯಿಂದ ಗುಲಾಂ ನಬಿ ಆಜಾದ್ ನಿವೃತ್ತರಾದಾಗ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಧಾನಿ ನರೇಂದ್ರಮೋದಿ ಅವರನ್ನು ಹಾಡಿ ಹೊಗಳಿದ್ದರು. ಶುಕ್ರವಾರ ಸೋನಿಯಾಗಾಂಧಿ ಅವರಿಗೆ ಸಲ್ಲಿಸಲಾಗಿರುವ ರಾಜೀನಾಮೆ ಪತ್ರದಲ್ಲಿ ಗುಲಾಂ ನಬಿ ಆಜಾದ್ , ಹಿರಿಯ ನಾಯಕರನ್ನು ಬದಿಗಿರಿಸಿರುವುದು ಮತ್ತು ಅನಾನುಭವಿಗಳ ಕೂಟ ಹೆಚ್ಚಾಗಿರುವುದು ರಾಜೀನಾಮೆಗೆ ಕಾರಣ ಎಂದು ಹೇಳಲಾಗಿದೆ.

ರಾಹುಲ್ ಗಾಂಧಿ ಅವರನ್ನು ಅಪ್ರಬುದ್ಧ ಎಂದು ಟೀಕಿಸಿರುವ ಗುಲಾಂನಬಿ ಆಜಾದ್, ಅಪ್ರಬುದ್ಧತೆಗೆ ಪ್ರಮುಖ ಉದಾಹರಣೆ ಎಂದರೆ ಸಂಸತ್‍ನಲ್ಲಿ ಸರ್ಕಾರದ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ ಬಾಲಿಶ ವರ್ತನೆ. ಇದು ಪ್ರಧಾನಿ ಮತ್ತು ಸರ್ಕಾರ ಸಾರ್ವಭೌಮತೆಯನ್ನು ಬುಡಮೇಲು ಮಾಡಿತ್ತು. ಈ ಸಣ್ಣ ನಡವಳಿಕೆ 2014ರ ಚುನಾವಣೆಯಲ್ಲಿ ಭಾರೀ ಪರಿಣಾಮ ಬೀರಿದ್ದು, ಯುಪಿಎ ಸರ್ಕಾರದ ಸೋಲಿಗೆ ಕಾರಣವಾಯಿತು ಎಂದು ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.

ಕಾಂಗ್ರೆಸ್ ಪ್ರಸ್ತುತ ಸನ್ನಿವೇಶದಲ್ಲಿ ದೇಶಕ್ಕೆ ಬೇಕಾದುದ್ದನ್ನು ನಿರ್ಧರಿಸುವ ಮತ್ತು ಅದಕ್ಕಾಗಿ ಹೋರಾಡುವ ಸಾಮಥ್ರ್ಯವನ್ನು ಕಳೆದುಕೊಂಡಿದೆ. ದೇಶಕ್ಕೆ ಸರಿ ಎನಿಸಿದ್ದನ್ನು ಮಾಡುವ ಹಕ್ಕನ್ನು ಎಐಸಿಸಿ ಉಳಿಸಿಕೊಳ್ಳುತ್ತಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸುಮಾರು 50 ವರ್ಷಗಳ ಕಾಂಗ್ರೆಸ್‍ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಿರುವುದಾಗಿ 5 ಪುಟಗಳ ರಾಜೀನಾಮೆ ಪತ್ರದಲ್ಲಿ ಆಜಾದ್ ವಿಷಾದ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಯಾತ್ರೆಗೂ ಮುನ್ನ ಕಾಂಗ್ರೆಸ್ ಜೋಡೊ ಯಾತ್ರೆಯನ್ನು ನಡೆಸುವಂತೆ ಸಲಹೆ ನೀಡಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ಎದುರಿಸುವ ಜಮ್ಮುಕಾಶ್ಮೀರದಲ್ಲಿ ಗುಲಾಂನಬಿ ಅಜಾದ್ ನಿರ್ಗಮನದಿಂದ ಕಾಂಗ್ರೆಸ್‍ಗೆ ಭಾರೀ ಪೆಟ್ಟು ಬಿದ್ದಿದೆ.

ಕಾಂಗ್ರೆಸ್ ನಾಯಕತ್ವ ಮತ್ತು ನಿರ್ಧಾರ ತೆಗೆದುಕೊಳ್ಳುವ ಸರ್ವಾಕಾರವನ್ನು ವಿರೋಧಿಸಿ ಜಮ್ಮುಕಾಶ್ಮೀರದಲ್ಲಿ ಹಲವು ನಾಯಕರು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಜಮ್ಮುಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ನೇಮಕಾತಿಯಲ್ಲೂ ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಆರೋಪಿಸಲಾಗಿದೆ.

ರಾಹುಲ್ ಗಾಂಧಿ ನಾಯಕತ್ವ ವಿರೋಧಿಸಿ ಈ ಮೊದಲು ಜ್ಯೋತಿರಾತ್ಯ ಸಿಂಧ್ಯ, ಜೈವೀರ್ ಸೆರ್ಗಿಲ್, ಜಿತಿನ್ ಪ್ರಸಾದ್ ಸೇರಿದಂತೆ ಹಲವು ನಾಯಕರು ಪಕ್ಷ ತೊರೆದಿದ್ದರು.

Articles You Might Like

Share This Article